ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆದ್ದ ನಂತರ, ಜೆಡಿಯು ಪಕ್ಷವು ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಎಂದು ಪೋಸ್ಟ್ ಮಾಡಿ ನಂತರ ಅಳಿಸಿಹಾಕಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ, ಮಹಾರಾಷ್ಟ್ರದಂತೆ ಇಲ್ಲೂ ನಾಯಕತ್ವ ಬದಲಾವಣೆಯಾಗಬಹುದೇ ಎಂಬ ಚರ್ಚೆಗಳು ತೀವ್ರಗೊಂಡಿವೆ.

Bihar Election results 2025: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ (NDA) ಭರ್ಜರಿ ಗೆಲುವು ಸಾಧಿಸಿದ ನಂತರ, ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆ ತೀವ್ರಗೊಂಡಿದೆ. ಜನತಾ ದಳ (ಯುನೈಟೆಡ್) [ಜೆಡಿಯು] ಪಕ್ಷದ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯಿಂದ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸುವಂತಿರುವ ಪೋಸ್ಟ್ ಮಾಡಲಾಗಿದ್ದು ನಂತರ, ಕೆಲವೇ ನಿಮಿಷಗಳಲ್ಲಿ ಅದನ್ನು ಅಳಿಸಿಹಾಕಲಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಊಹಾಪೋಹಗಳಿಗೆ ಗುರಿಯಾಗಿದೆ.

ಜೆಡಿಯು ಎಕ್ಸ್‌ನಲ್ಲಿ ಏನಿದೆ? ಅಳಿಸಿದ್ದೇಕೆ?

ಶುಕ್ರವಾರ ಜೆಡಿಯು ಪಕ್ಷದ ಅಧಿಕೃತ ಖಾತೆಯಿಂದ ಪೋಸ್ಟ್‌ ಮಾಡಲಾಗಿದ್ದು, 'ಅಭೂತಪೂರ್ವ ಅಸಮಾನ್ಯ ಗೆಲುವು. ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿದ್ದರು, ಮುಂದೆಯೂ ಮುಂದುವರಿಯುತ್ತಾರೆ' ಎಂದು ಬರೆಯಲಾಗಿತ್ತು. ಆದರೆ, ಈ ಪೋಸ್ಟ್ ಕೆಲವೇ ನಿಮಿಷಗಳಲ್ಲಿ ಅಳಿಸಲ್ಪಟ್ಟಿದೆ. ಇದೇ ಸಮಯದಲ್ಲಿ, ಪಾಟ್ನಾ ಮತ್ತು ಬಿಹಾರದ ಇತರ ಭಾಗಗಳಲ್ಲಿ '25 ಸೆ 30, ಫಿರ್ ಸೆ ನಿತೀಶ್' (25 ರಿಂದ 30ಕ್ಕೆ, ಮತ್ತೆ ನಿತೀಶ್) ಎಂಬ ಘೋಷಣೆಯ ಪೋಸ್ಟರ್‌ಗಳು ಮತ್ತು ಜಾಹೀರಾತು ಫಲಕಗಳು ಕಾಣಿಸಿಕೊಂಡಿದ್ದವು. ಇದು ಈ ಊಹಾಪೋಹಗಳನ್ನು ಹೆಚ್ಚಿಸಿದೆ.

ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು?

ಚುನಾವಣೆಗೆ ಮುನ್ನ, ಬಿಜೆಪಿ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತ್ತು. ಆದರೆ, ದಶಕಗಳಿಂದ ಅಧಿಕಾರದಲ್ಲಿ ಇರುವ ಜೆಡಿಯು ಪಕ್ಷ, ದಾಖಲೆಯ 10ನೇ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿತ್ತು. ಆದಾಗ್ಯೂ, ಪಕ್ಷ ಔಪಚಾರಿಕವಾಗಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಿಲ್ಲ. ಇದೀಗ ಚುನಾವಣಾ ಫಲಿತಾಂಶದಲ್ಲಿ, ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಯು ಪಕ್ಷವೂ ಒಳ್ಳೆಯ ಪ್ರದರ್ಶನ ನೀಡಿದರೂ, ಸ್ಥಾನಗಳ ಸಂಖ್ಯೆಯಲ್ಲಿ ಬಿಜೆಪಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ನಿತೀಶ್ ಕುಮಾರ್ ಅವರ ಭವಿಷ್ಯದ ಬಗ್ಗೆ ರಾಜಕೀಯವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ..

ಮಹಾರಾಷ್ಟ್ರದಂತೆಯೇ ಬಿಹಾರದಲ್ಲೂ ಬದಲಾವಣೆ?

ಈ ಸನ್ನಿವೇಶವು ಮಹಾರಾಷ್ಟ್ರದ 2024ರ ವಿಧಾನಸಭಾ ಚುನಾವಣೆಯನ್ನು ನೆನಪಿಸುತ್ತದೆ. ಅಲ್ಲಿ ಬಿಜೆಪಿ ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿ ಸ್ಪರ್ಧಿಸಿತು. ಆದರೆ, ಬಿಜೆಪಿಯ ಬಲವಾದ ಪ್ರದರ್ಶನದ ನಂತರ, ಉನ್ನತ ಹುದ್ದೆಯು ಅಂತಿಮವಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರಿಗೆ ದೊರೆತಿತು. ಬಿಹಾರದಲ್ಲಿ ಸಹ, ಬಿಜೆಪಿ ತನ್ನ ನಾಯಕರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಬಹುದು ಎಂಬ ಮಾತುಗಳು ಕೇಳಿಬಂದಿವೆ.

ಈಗ ನಿತೀಶ್ ಕುಮಾರ್ ಅವರ ನಾಯಕತ್ವವೇ ಮುಂದುವರಿಯುತ್ತದೆಯೇ, ಅಥವಾ ಬಿಜೆಪಿಯ ಪ್ರಭಾವದಿಂದ ಹೊಸ ಮುಖ ಹೊರಹೊಮ್ಮುತ್ತದೆಯೇ ಎಂಬುದು ರಾಜಕೀಯ ವಲಯದಲ್ಲಿ ಮುಖ್ಯ ವಿಷಯವಾಗಿದೆ. ಹೊಸ ಸುದ್ದಿಗಳಿಗಾಗಿ ಫಾಲೋ ಮಾಡಿ.