ಕ್ಲಿನಿಕ್ ಮಹಿಳಾ ರೆಸೆಪ್ಷನಿಸ್ಟ್ ಮೇಲೆ ರೋಗಿ ಸಂಬಂಧಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಬಾಲಿವುಡ್ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇದಕ್ಕೂ ಮೊದಲಿನ ವಿಡಿಯೋ ಬಹಿರಂಗವಾಗಿದ್ದು, ಇದೀಗ ರೆಸೆಪ್ಷನಿಸ್ಟ್ ಮೇಲೂ ಕ್ರಮಕ್ಕೆ ಹಲವರು ಆಗ್ರಹಿಸಿದ್ದಾರೆ.
ಮುಂಬೈ (ಜು.27): ವೈದ್ಯರ ಭೇಟಿ ಮಾಡಲು ಆಗಮಿಸಿ ರೋಗಿ ಹಾಗೂ ಕರೆದುಕೊಂಡ ಬಂದ ವ್ಯಕ್ತಿಗೆ 5 ನಿಮಿಷ ಕಾಯುವಂತೆ ಹೇಳಿದ್ದಕ್ಕೆ ರಿಸೆಪ್ಷನಿಸ್ಟ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮುಂಬೈನ ಕಲ್ಯಾಣನಗರದಲ್ಲಿ ನಡದಿದ್ದ ಈ ಘಟನೆಗೆ ಬಾಲಿವುಡ್ ನಟ ನಟಿಯರು ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದರು. ಸರದಿ ಸಾಲಿನಲ್ಲಿ ಬರುವಂತೆ ಹೇಳಿ, ಕಾಯಬೇಕು ಎಂದಿದ್ದಕ್ಕೆ ಆರೋಪಿ ಗೋಕುಲ್ ಝಾ ಯುವತಿ ಮೇಲೆ ಹಲ್ಲೆ ನಡೆಸಿದ ವಿಡಿಯೋ ಒಂದು ಭಾರಿ ವೈರಲ್ ಆಗಿತ್ತು. ಆದರೆ ಇದೀಗ ಇದಕ್ಕೂ ಮುಂದಿನ ವಿಡಿಯೋ ವೈರಲ್ ಆಗಿದೆ. ಆರಂಭದಲ್ಲೇ ಗೋಕುಲ್ ಝಾ ಸಹೋದರಿ ಮೇಲೆ ಕ್ಲಿನಿಕ್ ರೆಸೆಪ್ಷನಿಸ್ಟ್ ಹಲ್ಲೆ ಮಾಡುತ್ತಿರುವ ದೃಶ್ಯ ಬಹಿರಂಗವಾಗಿದೆ. ಈ ಮೂಲಕ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಆರಂಭದಲ್ಲಿ ರೆಸೆಪ್ಷನಿಸ್ಟ್ ಮೇಲಿನ ಹಲ್ಲೆ ವಿಡಿಯೋ ಬಹಿರಂಗ
ಇತ್ತೀಚೆಗ ಕಲ್ಯಾಣ್ ಈಸ್ಟ್‌ನ ಶ್ರೀ ಬಾಲ್ ಕ್ಲಿನಿಕ್‌ನಲ್ಲಿ ಗೋಕುಲ್ ಜಾ, ರೋಗಿಯನ್ನು ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದರು. ಈ ಘಟನೆ ದೇಶಾದ್ಯಂತ ಸದ್ದು ಮಾಡಿತ್ತು. ವೈದ್ಯರನ್ನು ಭೇಟಿ ಮಾಡಲು 5 ನಿಮಿಷ ಕಾಯುವಂತೆ ಹೇಳಿದ ಕಾರಣಕ್ಕೆ ಕ್ಲಿನಿಕ್ ಮಹಿಳಾ ರಿಸೆಪ್ಷನಿಸ್ಟ್ ಮೇಲೆ ದಾಳಿ ನಡೆಸಿದ ವಿಡಿಯೋ ಬಹಿರಂಗವಾಗಿತ್ತು. ಗೋಕುಲ್ ಝಾ, ಏಕಾಏಕಿ ಮಹಿಳಾ ರೆಸೆಪ್ಷನಿಸ್ಟ್ ಮೇಲೆ ಒದ್ದಿರುವ ವಿಡಿಯೋ ಬಹಿರಂಗವಾಗಿತ್ತು. ಇಷ್ಟೇ ಅಲ್ಲ ಕೂದಲು ಹಿಡಿದು ಎಳೆಯುವ ವಿಡಿಯೋ ವೈರಲ್ ಆಗಿತ್ತು. ವೈದ್ಯರನ್ನು ಭೇಟಿ ಮಾಡಲು ಅವಕಾಶ ನಿರಾಕರಿಸಿದ್ದರಿಂದ ಜಾ ಕೋಪಗೊಂಡಿದ್ದ ಎಂದು ವರದಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಆತನನ್ನು ಬಂಧಿಸಿದ್ದರು.
ಹೊಸ ವಿಡಿಯೋದಲ್ಲಿ ರೋಗಿ ಸಹೋದರಿ ಮೇಲೆ ರೆಸೆಪ್ಷನಿಸ್ಟ್ ಹಲ್ಲೆ
ಆದರೆ ಹೊಸದಾಗಿ ಬಿಡುಗಡೆಯಾದ ದೃಶ್ಯಗಳಲ್ಲಿ, ಹಲ್ಲೆಗೆ ಮುನ್ನ ರಿಸೆಪ್ಷನಿಸ್ಟ್ ಜಾ ಅವರ ಸಹೋದರಿಯನ್ನು ಹೊಡೆದಿರುವುದು ಕಂಡುಬಂದಿದೆ. ಘಟನೆಯ ನಂತರ ಜಾ ತಲೆಮರೆಸಿಕೊಂಡಿದ್ದ. ಗಡ್ಡ ಮತ್ತು ಕೂದಲು ಕತ್ತರಿಸಿ ತನ್ನ ರೂಪ ಬದಲಾಯಿಸಲು ಪ್ರಯತ್ನಿಸಿದ್ದ. ಮರುದಿನ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಯುವತಿಯ ದೂರಿನ ಮೇರೆಗೆ, ಮಾನ್ಪಾಡ ಪೊಲೀಸರು ಅಸಭ್ಯವಾಗಿ ವರ್ತಿಸಿದ, ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಘಟನೆ ನಡೆದ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದ ಇತರ ಕುಟುಂಬ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡ ರಿಸೆಪ್ಷನಿಸ್ಟ್ ಡೊಂಬಿವಿಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಕಲ್ಯಾಣ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾನನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ನಡೆದಿದ್ದೇನು
ಪೊಲೀಸರ ಪ್ರಕಾರ, ಗೋಕುಲ್ ಜಾ ತನ್ನ ಪತ್ನಿ, ಸಹೋದರಿ ಮತ್ತು ಮಗುವಿನೊಂದಿಗೆ ವೈದ್ಯರನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಿದ್ದ. ವೈದ್ಯರು ಔಷಧ ಕಂಪನಿಯ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದರಿಂದ ಕಾಯಲು ರಿಸೆಪ್ಷನಿಸ್ಟ್ ಅವರನ್ನು ಕೇಳಿಕೊಂಡರು. ಈ ವೇಳೆ, ರೋಗಿಗಳ ಸರದಿಯ ಬಗ್ಗೆ ರಿಸೆಪ್ಷನಿಸ್ಟ್ ಮತ್ತು ಜಾ ಕುಟುಂಬದ ನಡುವೆ ವಾಗ್ವಾದ ನಡೆಯಿತು.
ರೆಸೆಪ್ಷನಿಸ್ಟ್ ಮೇಲೂ ಕ್ರಮಕ್ಕೆ ಆಗ್ರಹ
ಕೋಪದ ಚರ್ಚೆಯ ಸಂದರ್ಭದಲ್ಲಿ, ರಿಸೆಪ್ಷನಿಸ್ಟ್ ಜಾ ಅವರ ಸಹೋದರಿಯ ಕಿವಿಗೆ ಹೊಡೆದರು. ಇದನ್ನು ಕಂಡ ಜಾ ರಿಸೆಪ್ಷನ್ ಪ್ರದೇಶಕ್ಕೆ ನುಗ್ಗಿ ಯುವತಿ ಮೇಲೆ ಹಲ್ಲೆ ನಡೆಸಿದ. ಹೊಸ ವಿಡಿಯೋ ಬಿಡುಗಡೆಯಾದ ನಂತರ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ವಯಸ್ಸನ್ನೂ ಗೌರವಿಸದ ರಿಸೆಪ್ಷನಿಸ್ಟ್ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ. ಘಟನೆಯ ತನಿಖೆ ಮುಂದುವರಿದಿದ್ದು, ಹೆಚ್ಚಿನ ಕ್ರಮಗಳನ್ನು ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ತೆಗೆದುಕೊಳ್ಳಲಾಗುವುದು ಎಂದು ಮಾನ್ಪಾಡ ಪೊಲೀಸರು ತಿಳಿಸಿದ್ದಾರೆ
