ಲಡಾಖ್ ಆಡಳಿತವು ಸೋನಮ್ ವಾಂಗ್ಚುಕ್ ಅವರ ಡೆಸರ್ಟ್ ಫ್ಲವರ್ ಶಾಲೆಯ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಭೂಹಂಚಿಕೆ ವಿವಾದವು ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಕಾರಣ ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಲಾಗಿದೆ.

ನವದೆಹಲಿ: ಸೋನಮ್ ವಾಂಗ್ಚುಕ್‌ಗೆ ಲಡಾಖ್ ಆಡಳಿತ ಬಿಗ್ ಶಾಕ್ ನೀಡಿದೆ. ಈ ಕ್ಷಣದಿಂದ ಜಾರಿಗೆ ಬರುವಂತೆ ಡೆಸರ್ಟ್ ಫ್ಲವರ್ ಶಾಲೆಯ ಎಲ್ಲಾ ಚಟುವಟಿಕೆಗಳನ್ನ ನಿಲ್ಲಿಸುವಂತೆ ಕೇಂದ್ರಾಡಳಿತ ಪ್ರದೇಶವು ಕಟ್ಟುನಿಟ್ಟಿನ ಆದೇಶ ಮಾಡಿದೆ. ಸೋನಮ್ ವಾಂಗ್ಚುಕ್ ಅವರ ಡೆಸರ್ಟ್ ಫ್ಲವರ್ ಶಾಲೆಯು ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ (HIAL) ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿದೆ.

ಯಾಕೆ ಇಂಥ ಆದೇಶ?

ಈ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿ ಭೂಹಂಚಿಕೆ ವಿವಾದ ಇದೆ. ಪ್ರಸ್ತುತ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ನಲ್ಲಿ ಭೂ ಹಂಚಿಕೆ ವಿವಾದವು ವಿಚಾರಣೆಯಲ್ಲಿದೆ. ಹೀಗಾಗಿ ಕೋರ್ಟ್‌ನಿಂದ ಅಂತಿಮ ತೀರ್ಪು ಬರುವವರೆಗೂ ಶಾಲೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಏನಿದು ವಿವಾದ?

ಈ ಶಿಕ್ಷಣ ಸಂಸ್ಥೆಯು ಫ್ಯಾಂಗ್ ಪ್ರದೇಶದಲ್ಲಿದೆ. ಈ ಶಿಕ್ಷಣ ಸಂಸ್ಥೆಗೆ ಕೇಂದ್ರಾಡಳಿತ ಪ್ರದೇಶ ಆಡಳಿತದಿಂದ 134.5 ಎಕರೆ ವಿಸ್ತೀರ್ಣದ ಜಮೀನು ಮಂಜೂರು ಮಾಡಲಾಗಿತ್ತು. ನಂತರದ ದಿನಗಳಲ್ಲಿ ಲಡಾಖ್ ಆಡಳಿತ ಮಂಡಳಿಯು ಈ ಜಮೀನು ಮಂಜೂರಾತಿ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಅದನ್ನು HIAL ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತು. ಪ್ರಸ್ತುತ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟ್‌ನಿಂದ ಸಂಪೂರ್ಣ ಆದೇಶ ಹೊರಬಿದ್ದಿಲ್ಲ. ಕೋರ್ಟ್‌ನಿಂದ ಆದೇಶ ಬರುವ ತನಕ ಯಾವುದೇ ಕಾರಣಕ್ಕೂ ಸ್ಕೂಲ್‌ನಲ್ಲಿ ಯಾವುದೇ ಚಟುವಟಿಕೆಗಳನ್ನ ನಡೆಸಬಾರದು. ಒಂದು ವೇಳೆ ಹೊಸ ಚಟುವಟಿಕೆ ನಡೆಸಿದರೆ ನಿಯಮಬಾಹಿಎ ಎಂದು ಹೇಳಿದೆ.

HIAL ವಿರುದ್ಧದ ಆರೋಪ ಏನು?

HIAL ವಿರುದ್ಧ ನಿಯಮ ಉಲ್ಲಂಘಿಸಿದ ಆರೋಪ ಇದೆ. HIAL ಸಹ-ಸಂಸ್ಥಾಪಕಿ, CEO ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ ಆಗಿದ್ದಾರೆ. ಗೀತಾಂಜಲಿ ಅವರಿಗೆ ನವೆಂಬರ್ 1 ರಂದು ಲೇಹ್‌ನ ತಹಶೀಲ್ದಾರ್ ಕಚೇರಿಯಿಂದ ನೋಟಿಸ್ ಜಾರಿ ಆಗಿದೆ.

ನಿಮ್ಮ ಶಿಕ್ಷಣ ಸಂಸ್ಥೆಯ ವಿವಿಧ ಚಟುವಟಿಕೆಗಳನ್ನ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯವಿರುವ ಕಾನೂನುಬದ್ಧ ಅನುಮತಿ ಮತ್ತು ಕ್ಲಿಯರೆನ್ಸ್‌ಗಳನ್ನು ಪಡೆಯದೆಯೇ ಆರಂಭಿಸಲಾಗಿದೆ. ಡೆಸರ್ಟ್ ಫ್ಲವರ್ ಶಾಲೆಯಲ್ಲಿ ತರಗತಿಗಳನ್ನು ಆರಂಭಿಸಿದ್ದೀರಿ. ಇದು ನಿಯಮ ಬಾಹಿರ. ಸದ್ಯ ನೀವು ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಯಾಕೆಂದರೆ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ವಿಚಾರಣೆ ಪೂರ್ಣ ಆಗುವವರೆಗೂ ಹೊಸದಾಗಿ ಯಾವುದೇ ಚಟುವಟಿಕೆ ಮಾಡಬಾರದು ಎಂದು ಸೂಚಿಸಲಾಗಿದೆ.