ನವದೆಹಲಿ(ಡಿ.25): ಮುಂಬೈ- ಅಹಮದಾಬಾದ್‌ ನಡುವಣ ದೇಶದ ಮೊದಲ ಬುಲೆಟ್‌ ರೈಲು ಯೋಜನೆಗೆ ಚಾಲನೆ ಸಿಕ್ಕಿರುವ ಹೊತ್ತಿನಲ್ಲೇ, ಮೈಸೂರು-ಬೆಂಗಳೂರು-ಚೆನ್ನೈ ಹೈಸ್ಪೀಡ್‌ ರೈಲು (ಬುಲೆಟ್‌ ರೈಲು) ಮಾರ್ಗಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಭಾರತೀಯ ರೈಲ್ವೆ ಬಿಡ್ಡಿಂಗ್‌ ಆಹ್ವಾನಿಸಿದೆ. ಇದರಿಂದಾಗಿ ಈ ಯೋಜನೆಯ ಸಾಕಾರದತ್ತ ಮಹತ್ವದ ಹೆಜ್ಜೆ ಇರಿಸಿದಂತಾಗಿದೆ.

ರಾಷ್ಟ್ರೀಯ ಹೈಸ್ಪೀಡ್‌ ರೈಲು ನಿಗಮವು ಮಂಗಳವಾರ ಟೆಂಡರ್‌ ಕರೆದಿದೆ. ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಜನವರಿ 12ರೊಳಗೆ ಅರ್ಜಿ ಸಲ್ಲಿಸಬೇಕು. ಡಿಪಿಆರ್‌ ಗುತ್ತಿಗೆ ಪಡೆದವರು ಪ್ರಸ್ತಾವಿತ ಮಾರ್ಗದ ಸಮೀಕ್ಷೆ, ಸ್ಥಳದ ವಾಸ್ತವಿಕತೆ ಹಾಗೂ ವಿದ್ಯುತ್‌ ಲಭ್ಯತೆ ಎಲ್ಲಿದೆ ಎಂಬುದರ ಸಮೀಕ್ಷೆ ನಡೆಸಬೇಕು.

ನನ್ನ ಜೊತೆ ಬಂದವರೆಲ್ಲರಿಗೂ ಸಚಿವ ಸ್ಥಾನಕ್ಕೆ ಯತ್ನ: ಸಚಿವ ಜಾರಕಿಹೊಳಿ

ಈ ಮಾರ್ಗ ಸಾಕಾರಗೊಂಡರೆ ಚೆನ್ನೈನಿಂದ ಮೈಸೂರಿಗೆ ಕೇವಲ ಎರಡೂವರೆ ತಾಸಿನಲ್ಲಿ ಪ್ರಯಾಣಿಸಬಹುದು. ಈಗ ಈ ಮಾರ್ಗದ ಅತಿವೇಗದ ರೈಲಾಗಿರುವ ಶತಾಬ್ದಿ ರೈಲು 7 ಗಂಟೆ ತೆಗೆದುಕೊಳ್ಳುತ್ತದೆ.

ಮೈಸೂರು-ಚೆನ್ನೈ ಮಾರ್ಗವು ದೇಶದ 6 ಹೈಸ್ಪೀಡ್‌ ರೈಲು ಮಾರ್ಗಗಳಲ್ಲಿ ಒಂದು. ಬುಲೆಟ್‌ ರೈಲು ಮಾರ್ಗ ಮಧ್ಯದಲ್ಲಿ ಮಂಡ್ಯ, ಚನ್ನಪಟ್ಟಣ, ಬೆಂಗಳೂರು, ಬಂಗಾರಪೇಟೆ, ಅರಕ್ಕೋಣಂ ಹಾಗೂ ಪೂನಮಲ್ಲೀ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

32 ಲಕ್ಷ ಗ್ರಾಹಕರನ್ನು ವಂಚಿಸಿದ ಅಗ್ರಿಗೋಲ್ಡ್‌ನ 4109 ಕೋಟಿ ರು. ಆಸ್ತಿ ಜಪ್ತಿ

ಗಂಟೆಗೆ 250ರಿಂದ 300 ಕಿ.ಮೀ. ವೇಗದಲ್ಲಿ ರೈಲುಗಳು ಸಂಚರಿಸುತ್ತವೆ. 750 ಪ್ರಯಾಣಿಕರು ಒಂದು ರೈಲಿನಲ್ಲಿ ಇರಲಿದ್ದಾರೆ. ಫಸ್ಟ್‌ಕ್ಲಾಸ್‌ ಎ.ಸಿ. ಕೋಚ್‌ ದರಕ್ಕಿಂತ ಒಂದೂವರೆ ಪಟ್ಟು ಟಿಕೆಟ್‌ ದರ ಇರಲಿದೆ.

ಡಿಪಿಆರ್‌ ನಂತರ, ಬಜೆಟ್‌ನಲ್ಲಿ ಅನುದಾನ ದೊರೆತರೆ ಸಿವಿಲ್‌ ಕೆಲಸಗಳಿಗೆ ಏಪ್ರಿಲ್‌ನಲ್ಲಿ ಟೆಂಡರ್‌ ಕರೆಯಲಾಗುತ್ತದೆ. ಆದರೆ ಭೂಸ್ವಾದೀನವು ಸವಾಲಿನದ್ದಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.