12 ವರ್ಷ ಮೇಲಿನ ಮಕ್ಕಳಿಗೆ ಕೋವ್ಯಾಕ್ಸಿನ್ ಪಡೆಯಲು ಅನುಮತಿ? ಇದು ನಿಜಾನಾ?
* ಕೊರೋನಾತಂಕ ನಡುವೆ ದೇಶದೆಲ್ಲೆಡೆ ಲಸಿಕೆ ಅಭಿಯಾನ
* 12 ವರ್ಷ ಮೇಲಿನ ಮಕ್ಕಳಿಗೆ ಕೋವ್ಯಾಕ್ಸಿನ್ ಪಡೆಯಲು ಅನುಮತಿ? ಇದು ನಿಜಾನಾ?
* ವೈರಲ್ ಸಂದೇಶದ ಹಿಂದಿನ ಸತ್ಯಾಸತ್ಯತೆ ಹೀಗಿದೆ ನೋಡಿ
ನವದೆಹಲಿ(ಮೇ.10): ಭಾರತದಲ್ಲಿ ಎರಡನೇ ಅಲೆ ಭಾರೀ ಭೀತಿ ಸೃಷ್ಟಿಸಿದೆ. ಪ್ರತಿ ದಿನ ನಾಲ್ಕು ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲುತ್ತಿದೆ. ಈ ನಡುವೆ ಕೊರೋನಾ ಮೂರನೇ ಅಲೆಯ ಭೀತಿಯೂ ಎಲ್ಲೆಡೆ ಆವರಿಸಿದ್ದು, ಈ ಮೂರನೇ ಅಲೆ ಪುಟ್ಟ ಮಕ್ಕಳನ್ನು ಕಾಡಲಿದೆ ಎಂಬುವುದು ತಜ್ಞರ ಅಭಿಪ್ರಾಯ. ಇದು ತಂದೆ ತಾಯಿಗೆ ಹೊಸ ಟೆನ್ಶನ್ ನೀಡಿದೆ. ಜೊತೆಗೆ ಸರ್ಕಾರ ಶೀಘ್ರವೇ ಮಕ್ಕಳಿಗೂ ಲಸಿಕೆ ಪಡೆಯುವಂತೆ ಘೋಷಣೆ ಮಾಡಲಿ ಎಂಬ ಒತ್ತಾಯವೂ ಕೇಳಿ ಬಂದಿದೆ. ಹದಿನೆಂಟು ವರ್ಷಕ್ಕಿಂತ ಮೇಲಿನವರಿಗೆ ಈಗಾಗಲೇ ಲಸಿಕೆ ಆರಂಭವಾಗಿದ್ದು, ಈ ಮೂರನೇ ಅಲೆ ಅವರಿಗೆ ಹೆಚ್ಚು ಹಾನಿಕಾರಕ ಅಲ್ಲ ಎಂಬುವುದು ಇದರ ಹಿಂದಿನ ಸ್ಪಷ್ಟನೆಯಾಘಿದೆ.
ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಸಂದೇಶವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಸರ್ಕಾರ ಹನ್ನೆರಡು ವರ್ಷಕ್ಕಿಂತ ಮೇಲಿನ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಪಡೆಯಲು ಅನುಮತಿ ನೀಡಿದೆ ಎಂಬ ಸಂದೇಶವಿದೆ. ವೈರಲ್ ಆಗುತ್ತಿರುವ ಈ ಸಂದೇಶ ತಂದೆ- ತಾಯಿಗೆ ಖುಷಿ ಕೊಟ್ಟಿದೆ. ಆದರೀಗ ಸರ್ಕಾರ ಈ ವದಂತಿ ಬಗ್ಗೆ ಸ್ಪಷ್ಟನೆ ನೀಡಿದೆ.
ಸರ್ಕಾರದ ಪರ ಮಾಡಲಾದ ಟ್ವೀಟ್‌ನಲ್ಲಿ ಇದು ನಕಲಿ ಪೋಸ್ಟ್ ಎಂದು ತಿಳಿಸಲಾಗಿದೆ. ಸರ್ಕಾರ ಇಂತಹ ಯಾವುದೇ ಲಸಿಕೆ ಅಭಿಯಾನಕ್ಕೆ ಅನುಮತಿ ನೀಡಿಲ್ಲ ಎಂದು ಪಿಐಬಿ ತನ್ನ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದೆ. ಕೇವಲ ಹದಿನೆಂಟು ವರ್ಷಕ್ಕಿಂತ ಮೇಲಿನವರಿಗಷ್ಟೇ ಈ ಲಸಿಕೆ ಪಡೆಯಲು ಅನುಮತಿ ಎಂದೂ ಉಲ್ಲೇಖಿಸಿದೆ.
ಈ ಮೂಲಕ ಸದ್ಯ ವೈರಲ್ ಆದ ಸುದ್ದಿ ಸುಳ್ಳು ಎಂಬುವುದು ಸ್ಪಷ್ಟವಾಗಿದೆ. ಕೊರೋನಾ ಕಾಲ್ದಲ್ಲಿ ಅನೇಕ ಅನಧಿಕೃತ ಹಾಗೂ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಹೀಗಿರುವಾಗ ಎಚ್ಚರದಿಂದಿದ್ದು, ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿ ಮುಂದುವರೆಯುವುದರಲ್ಲೇ ಜಾಣತನವಿದೆ.
ಇನ್ನು ಕೊರೋನಾ ಕಾಲದಲ್ಲಿ ಮನೆಯಲ್ಲೇ ಇರಿ. ಅಗತ್ಯವಿದ್ದರಷ್ಟೇ ಮನೆಯಿಂದ ಹೊರ ಹೋಗಿ. ಹೀಗೆ ತುರ್ತು ಕಾರ್ಯ ನಿಮಿತ್ತ ಹೊರ ಹೋದರೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ. ಇದು ವೈರಸ್ ಹರಡುವುದನ್ನು ತಪ್ಪಿಸುತ್ತದೆ. ಈ ಮೂಲಕ ಒಂದಾಗಿ ನಾವು ಈ ವೈರಸ್ ಸರಪಳಿಯನ್ನು ಮುರಿಯೋಣ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona