* ಬ್ಯಾಂಕಿಂಗ್ ಸೇರಿ ಹಲವು ಸೇವೆಗಳಲ್ಲಿ ಭಾರಿ ವ್ಯತ್ಯಯ ಸಂಭವ* ಇಂದು, ನಾಳೆ ‘ಭಾರತ್ ಬಂದ್’ ಕಾರ್ಮಿಕ ಮುಷ್ಕರ* ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಕೇಂದ್ರ ಸರ್ಕಾರ
ನವದೆಹಲಿ(ಮಾ.28): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಸೋಮವಾರ ಬೆಳಗ್ಗೆ 6ರಿಂದ ಬುಧವಾರ ಬೆಳಗ್ಗೆ 6ರವರೆಗೆ ದೇಶಾದ್ಯಂತ ‘ಭಾರತ್ ಬಂದ್’ ಹೆಸರಿನಲ್ಲಿ ಮುಷ್ಕರಕ್ಕೆ ಕರೆ ನೀಡಿವೆ. ಬ್ಯಾಂಕಿಂಗ್, ವಿಮೆ, ರಸ್ತೆ ಸಾರಿಗೆ, ವಿದ್ಯುಚ್ಛಕ್ತಿ, ಕಲ್ಲಿದ್ದಲು, ತೈಲ, ದೂರಸಂಪರ್ಕ, ಆದಾಯ ತೆರಿಗೆ ಸೇರಿ ವಿವಿಧ ವಲಯದ ಕಾರ್ಮಿಕರು ಈ ಮುಷ್ಕರಕ್ಕೆ ಬೆಂಬಲ ಘೋಷಣೆ ಮಾಡಿರುವುದರಿಂದ ಹಲವು ಸೇವೆಗಳಲ್ಲಿ ವ್ಯತ್ಯಯವಾಗುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರದ ನೀತಿಗಳಿಂದ ಕಾರ್ಮಿಕರು, ರೈತರು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಕಾರ್ಮಿಕ, ರೈತ, ಜನ ಹಾಗೂ ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಮುಷ್ಕರಕ್ಕೆ ಕರೆ ನೀಡಿದ್ದೇವೆ ಎಂದು ಕಾರ್ಮಿಕ ಸಂಘಟನೆಗಳ ನಾಯಕರು ತಿಳಿಸಿದ್ದಾರೆ. ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು, ಯಾವುದೇ ಸಂಸ್ಥೆಯನ್ನು ಖಾಸಗೀಕರಣ ಮಾಡಬಾರದು, ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ ಕೈಬಿಡಬೇಕು, ಉದ್ಯೋಗ ಖಾತ್ರಿ ವೇತನ ಹೆಚ್ಚಿಸಬೇಕು, ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಕಾರ್ಮಿಕ ಸಂಘಟನೆಗಳು ಮಂಡಿಸಿವೆ.
ಮುಷ್ಕರದಿಂದಾಗಿ ಬ್ಯಾಂಕಿನ ಕಾರ್ಯನಿರ್ವಹಣೆ ಮೇಲೆ ಪರಿಣಾಮವಾಗುತ್ತದೆ. ಆದಾಗ್ಯೂ ಗ್ರಾಹಕರಿಗೆ ಹೆಚ್ಚಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ತಿಳಿಸಿವೆ.
ಈ ನಡುವೆ, ಕಾರ್ಮಿಕ ಮುಷ್ಕರದ ಹಿನ್ನೆಲೆಯಲ್ಲಿ ಕಟ್ಟೆಚ್ಚರದಿಂದ ಇರಬೇಕು. ದಿನದ ಇಪ್ಪತ್ನಾಲ್ಕೂ ತಾಸು ವಿದ್ಯುಚ್ಛಕ್ತಿ ಪೂರೈಕೆಯಾಗುವಂತೆ ಹಾಗೂ ರಾಷ್ಟ್ರೀಯ ಗ್ರಿಡ್‌ನಲ್ಲಿ ಸ್ಥಿರತೆ ಇರುವಂತೆ ನೋಡಕೊಳ್ಳಬೇಕು ಎಂದು ಕೇಂದ್ರ ವಿದ್ಯುತ್ ಸಚಿವಾಲಯ ಭಾನುವಾರ ಎಲ್ಲ ರಾಜ್ಯ ವಿದ್ಯುತ್ ಕಂಪನಿಗಳಿಗೆ ಸೂಚನೆ ನೀಡಿದೆ.
