ನವದೆಹಲಿ [ಡಿ.26]: ಉತ್ತಮ ಆಡಳಿತ ನಡೆಸುವ ರಾಜ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ‘ಉತ್ತಮ ಆಡಳಿತ ಸೂಚ್ಯಂಕ’ ಬಿಡುಗಡೆ ಮಾಡಿದೆ. ಮೊದಲ ವರ್ಷದ ಪಟ್ಟಿ ಬುಧವಾರ ಬಿಡುಗಡೆಯಾಗಿದ್ದು, ಸಮಗ್ರ ಆಡಳಿತ ಪಟ್ಟಿಯಲ್ಲಿ ಕರ್ನಾಟಕವು ಮೂರನೇ ಸ್ಥಾನ ಪಡೆದಿದೆ. ವಲಯವಾರು ಸಾಧನೆಗಳ ಗಮನಿಸಿದಾಗ ಆರ್ಥಿಕ ಆಡಳಿತದಲ್ಲಿ ಕರ್ನಾಟಕ ಮೊದಲ ಸ್ಥಾನ ಗಳಿಸಿದೆ. ಸಮಗ್ರ ಸಾಧನಾ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ಮಹಾರಾಷ್ಟ್ರ, 3ರಲ್ಲಿ ಕರ್ನಾಟಕ ಇವೆ.

ರಾಜ್ಯಗಳ ಸಾಧನೆ ಆಧರಿಸಿ ಉತ್ತಮ ಆಡಳಿತ ಸೂಚ್ಯಂಕ ಸಿದ್ಧಪಡಿಸಬೇಕು ಎಂದು ಮೋದಿ ಸರ್ಕಾರದ ಮೊದಲ ಅವಧಿಯಲ್ಲೇ ನಿರ್ಧಾರವಾಗಿತ್ತು. ಅದು ಇದೀಗ ಕಾರ್ಯರೂಪಕ್ಕೆ ಬಂದಿದೆ. ಪಟ್ಟಿತಯಾರಿಸುವ ವೇಳೆ ರಾಜ್ಯಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ದೊಡ್ಡ ರಾಜ್ಯಗಳು, ಈಶಾನ್ಯ ರಾಜ್ಯಗಳು ಮತ್ತು ಗುಡ್ಡಗಾಡು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು. ಈ ಪೈಕಿ ಕರ್ನಾಟಕ ದೊಡ್ಡ ರಾಜ್ಯಗಳ ವಿಭಾಗದಲ್ಲಿ ಸ್ಥಾನ ಪಡೆದಿತ್ತು.

ವರದಿ ತಯಾರಿಸುವ ವೇಳೆ ಒಟ್ಟು 10 ವಲಯಗಳು ಹಾಗೂ 50 ಸೂಚಿಗಳನ್ನು ಮಾನದಂಡವಾಗಿ ಇರಿಸಿಕೊಂಡು ರಾಜ್ಯಗಳಲ್ಲಿನ ಉತ್ತಮ ಆಡಳಿತ ಅಳೆಯಲಾಗಿದೆ. ಶಿಕ್ಷಣ, ಆರೋಗ್ಯ, ಆರ್ಥಿಕ ಪ್ರಗತಿ, ಪರಿಸರ ಸಂರಕ್ಷಣೆ, ಕಾನೂನು ಸೇವೆಗಳು ಇತ್ಯಾದಿಗಳು ಜನರಿಗೆ ಹೇಗೆ ತಲುಪುತ್ತಿವೆ ಎಂಬುದನ್ನು ಪರಿಗಣಿಸಲಾಗಿದೆ.

ವರದಿ ಅನ್ವಯ ಕರ್ನಾಟಕವು ಆರ್ಥಿಕ ಆಡಳಿತದಲ್ಲಿ 1, ನ್ಯಾಯಾಂಗ ಸೇವೆಯಲ್ಲಿ 7, ಪರಿಸರ ವಿಭಾಗದಲ್ಲಿ 7, ವಾಣಿಜ್ಯ ವಿಭಾಗದಲ್ಲಿ 9, ಆರೋಗ್ಯ ಕ್ಷೇತ್ರದಲ್ಲಿ 9, ಮೂಲಸೌಕರ್ಯ ಕ್ಷೇತ್ರದಲ್ಲಿ 10, ಸಮಾಜ ಕಲ್ಯಾಣ ಕ್ಷೇತ್ರದಲ್ಲಿ 10, ಕೃಷಿ ವಲಯದಲ್ಲಿ 12, ಮಾನವ ಸಂಪನ್ಮೂಲ ವಿಭಾಗದಲ್ಲಿ 13ನೇ ಸ್ಥಾನ ಪಡೆದಿದೆ.

ಇನ್ನು ಸಮಗ್ರ ವಿಭಾಗದಲ್ಲಿ ಕರ್ನಾಟಕದ ನಂತರದ ಸ್ಥಾನವನ್ನು ಕ್ರಮವಾಗಿ ಛತ್ತೀಸ್‌ಗಢ, ಆಂಧ್ರಪ್ರದೇಶ ಹಾಗೂ ಗುಜರಾತ್‌ ಪಡೆದಿವೆ. ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ, ಉತ್ತರಾಕಂಡ ಮತ್ತು ತ್ರಿಪುರ ಮೊದಲ 3 ಸ್ಥಾನ ಪಡೆದಿವೆ. ಇನ್ನು ಕೇಂದ್ರಾಡಳಿತ ಪ್ರದೇಶದಲ್ಲಿ ಪಾಂಡಿಚೇರಿ, ಚಂಡೀಗಢ, ದೆಹಲಿ ಟಾಪ್‌ 3 ಸ್ಥಾನ ಪಡೆದಿವೆ.

ಏನೇನು ಆಧರಿಸಿ ಸೂಚ್ಯಂಕ ನಿರ್ಧಾರ?

ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆ, ಆರ್ಥಿಕ ಪ್ರಗತಿ, ನ್ಯಾಯಾಂಗ ಸೇವೆಯ ಲಭ್ಯತೆ, ಮೂಲಸೌಕರ್ಯ, ವಾಣಿಜ್ಯ ಮತ್ತು ಕೈಗಾರಿಕೆ, ಕೃಷಿ ಚಟುವಟಿಕೆ, ಗ್ರಾಹಕ ಸ್ನೇಹಿ ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ.

ಆರ್ಥಿಕ ಆಡಳಿತದಲ್ಲಿ ಕರ್ನಾಟಕ ನಂ.1

ವಲಯವಾರು ಮೌಲ್ಯಮಾಪನ ಮಾಡಿದಾಗ ಕರ್ನಾಟಕವು ಆರ್ಥಿಕ ಆಡಳಿತದಲ್ಲಿ ಮೊದಲ ಸ್ಥಾನ ಗಳಿಸಿದೆ. ವೈದ್ಯಕೀಯದಲ್ಲಿ ಕೇರಳ ಅತ್ಯುತ್ತಮ ಸಾಧನೆ ತೋರಿದೆ. ಇನ್ನು ಪರಿಸರ ರಕ್ಷಣೆಯಲ್ಲಿ ಬಂಗಾಳ ಹಾಗೂ ಕೇರಳ ಮೊದಲ ಸ್ಥಾನದಲ್ಲಿವೆ. ಆದರೆ ಇದರಲ್ಲಿ ಗೋವಾ, ಆಂಧ್ರಪ್ರದೇಶ ಹಾಗೂ ದಿಲ್ಲಿ ಕೊನೆಯ ಸ್ಥಾನಗಳಲ್ಲಿವೆ. ಆದರೆ ನ್ಯಾಯಾಂಗ ವಲಯದಲ್ಲಿ ಪ.ಬಂಗಾಳ ಕೊನೆಯ ಸ್ಥಾನದಲ್ಲಿದೆ. ತಮಿಳುನಾಡು ಹಾಗೂ ಕೇರಳ ಉತ್ತಮ ಸಾಧನೆ ಮಾಡಿವೆ.

ಸಮಗ್ರ ಆಡಳಿತದಲ್ಲಿ ಟಾಪ್‌ 3

ನಂ.1: ತಮಿಳುನಾಡು

ನಂ.2: ಮಹಾರಾಷ್ಟ್ರ

ನಂ.3: ಕರ್ನಾಟಕ

ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದ ಸಾಧನೆ

ನಂ.1 ಆರ್ಥಿಕ ಆಡಳಿತ

ನಂ.7: ನ್ಯಾಯಾಂಗ ಸೇವೆ

ನಂ.7: ಪರಿಸರ ವಿಭಾಗ

ನಂ.9: ವಾಣಿಜ್ಯ ವಿಭಾಗ

ನಂ.9: ಆರೋಗ್ಯ ಕ್ಷೇತ್ರ

ನಂ.10: ಮೂಲಸೌಕರ್ಯ

ನಂ.10: ಸಮಾಜ ಕಲ್ಯಾಣ

ನಂ.12: ಕೃಷಿ ವಲಯ

ನಂ.13: ಮಾನವ ಸಂಪನ್ಮೂಲ