ಬೆಂಗಳೂರು ಡ್ರಗ್ಸ್‌ ಆರೋಪಿಗಳಿಂದ| ಕೇರಳದ ಚಿನ್ನ ಸ್ಮಗ್ಲಿಂಗ್‌ ಗ್ಯಾಂಗ್‌ಗೆ ನೆರವು| ಬೆಂಗಳೂರು ಡ್ರಗ್ಸ್‌: ಕೇರಳದ ಮಾಜಿ ಗೃಹಮಂತ್ರಿ ಪುತ್ರನಿಗೆ ಇ.ಡಿ. ಗ್ರಿಲ್‌

ಕೊಚ್ಚಿ(ಸೆ.10): ಕನ್ನಡ ಚಿತ್ರರಂಗದ ತಾರೆಯರಿಗೆ ಉರುಳಾಗಿರುವ ಬೆಂಗಳೂರಿನ ಡ್ರಗ್ಸ್‌ ಮಾಫಿಯಾ ಪ್ರಕರಣಕ್ಕೂ ಕೇರಳದ ಬಹುಕೋಟಿ ಚಿನ್ನದ ಸ್ಮಗ್ಲಿಂಗ್‌ ಪ್ರಕರಣಕ್ಕೂ ನಂಟಿರುವುದು ಇದೀಗ ಅಧಿಕೃತವಾಗಿದ್ದು, ಸ್ವತಃ ಜಾರಿ ನಿರ್ದೇಶನಾಲಯ (ಇ.ಡಿ.) ಈ ಕುರಿತು ಕೇರಳದ ಕೋರ್ಟ್‌ಗೆ ಮಾಹಿತಿ ಸಲ್ಲಿಸಿದೆ. ಇದೇ ವೇಳೆ, ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್‌ ಅವರ ಪುತ್ರ ಬಿನೀಶ್‌ ಕೊಡಿಯೇರಿಯನ್ನು ಬೆಂಗಳೂರಿನ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಇ.ಡಿ. ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಂಗಳೂರು ಡ್ರಗ್ಸ್‌ ಪ್ರಕರಣಕ್ಕೂ ಬಿನೀಶ್‌ಗೂ ನಂಟಿದೆ ಎಂದು ಕೇರಳದ ಮುಸ್ಲಿಂ ಲೀಗ್‌ನ ಯುವ ಘಟಕ ಕೆಲ ದಿನಗಳ ಹಿಂದೆ ಆರೋಪಿಸಿತ್ತು. ಅಲ್ಲದೆ, ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತನಾಗಿರುವ ಮೊಹಮ್ಮದ್‌ ಅನೂಪ್‌ಗೂ ಬಿನೀಶ್‌ಗೂ ನಡುವೆ ವ್ಯಾವಹಾರಿಕ ಸಂಬಂಧವಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಕುರಿತು ಕೇರಳ ಇ.ಡಿ. ಘಟಕ ಬುಧವಾರ ಬಿನೀಶ್‌ನನ್ನು ವಿಚಾರಣೆಗೆ ಒಳಪಡಿಸಿದೆ.

ನಂತರ ಚಿನ್ನ ಸ್ಮಗ್ಲಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿಯ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿರುವ ಇ.ಡಿ. ಅಧಿಕಾರಿಗಳು, ಬೆಂಗಳೂರಿನ ಡ್ರಗ್ಸ್‌ ಪ್ರಕರಣದ ಆರೋಪಿಗಳು ಕೇರಳದ ಚಿನ್ನ ಸ್ಮಗ್ಲಿಂಗ್‌ ಕೇಸ್‌ನ ಆರೋಪಿಗಳಿಗೆ ನೆರವು ನೀಡಿರುವ ಅನುಮಾನಗಳಿವೆ. ಹೀಗಾಗಿ ಬೆಂಗಳೂರಿನ ಡ್ರಗ್ಸ್‌ ಪ್ರಕರಣದ ತನಿಖೆ ನಡೆಸುತ್ತಿರುವ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ)ದ ಬೆಂಗಳೂರು ಘಟಕಕ್ಕೆ ಆ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕೋರಿದ್ದೇವೆ ಎಂದು ತಿಳಿಸಿದೆ.

ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತನಾಗಿರುವ ಮೊಹಮ್ಮದ್‌ ಅನೂಪ್‌ 2015ರಲ್ಲಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಹೋಟೆಲ್‌ ಆರಂಭಿಸಿದ್ದು, ಅದರಲ್ಲಿ ಬಿನೀಶ್‌ ಹೂಡಿಕೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಬಿನೀಶ್‌ ಕೂಡ ತನಗೆ ಅನೂಪ್‌ ಮತ್ತು ಆತನ ಕುಟುಂಬದ ಪರಿಚಯವಿದ್ದು, ಅನೂಪ್‌ ಬೆಂಗಳೂರಿನಲ್ಲಿ ಹೋಟೆಲ್‌ ಆರಂಭಿಸಲು ತನ್ನಿಂದ ಹಣ ಪಡೆದಿದ್ದ ಎಂದು ಹೇಳಿದ್ದ.