ಕೊಚ್ಚಿ(ನ.19): ಇಲ್ಲಿನ ಪ್ರಸಿದ್ಧ ಚೋಟ್ಟನ್ನಿಕರ ಭಗವತಿ ದೇಗುಲಕ್ಕೆ ಬೆಂಗಳೂರಿನ ಉದ್ಯಮಿಯೊಬ್ಬರು ಭರ್ಜರಿ 500 ಕೋಟಿ ರು. ದೇಣಿಗೆ ನೀಡುವ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ. ಆದರೆ ದೇಶದ ಇತಿಹಾಸದಲ್ಲೇ ಇದೊಂದು ಕಂಡುಕೇಳರಿಯದ ದೇಣಿಗೆ ಪ್ರಸ್ತಾಪವಾದ ಕಾರಣ, ದೇಗುಲದ ಆಡಳಿತದ ಹೊಣೆ ಹೊತ್ತಿರುವ ಕೇರಳ ದೇವಸ್ವ ಮಂಡಳಿ ಈ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ತೆರೆದ ಅಯ್ಯಪ್ಪ ದೇಗುಲ, ಭಕ್ತರಿಗೆ ಪ್ರವೇಶ!

ಬೆಂಗಳೂರು ಮೂಲದ ಉದ್ಯಮಿ ಗಣ ಶ್ರವಣ ಎಂಬುವವರೇ ಇಷ್ಟೊಂದು ದೊಡ್ಡ ಮೊತ್ತದ ದೇಣಿಗೆ ನೀಡಲು ಮುಂದಾಗಿರುವ ಉದ್ಯಮಿ. ಕಳೆದ ವರ್ಷವೇ ಇಂಥ ಪ್ರಸ್ತಾಪ ನಮ್ಮ ಮುಂದೆ ಬಂದಿತ್ತು. ಆದರೆ ಭಾರೀ ಮೊತ್ತವಾದ ಕಾರಣ ನಾವು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಇದೀಗ ನಾವು ಸರ್ಕಾರದ ಮುಂದೆ ವಿಷಯ ಇಟ್ಟಿದ್ದೇವೆ. ಜೊತೆಗೆ ಹೈಕೋರ್ಟ್‌ನಿಂದಲೂ ಅನುಮತಿ ಪಡೆದುಕೊಂಡು ಮುಂದಿನ ಹೆಜ್ಜೆ ಇಡಲಿದ್ದೇವೆ ಎಂದು ದೇವಸ್ವಂ ಮಂಡಳಿಯ ಕಾರ್ಯದರ್ಶಿ ವಿ.ಎ. ಶೀಲಾ ತಿಳಿಸಿದ್ದಾರೆ.

ಈ ದೇಣಿಗೆ ಮೊತ್ತವನ್ನು ಅವರು ದೇಗುಲ ಮತ್ತು ದೇಗುಲದ ಸುತ್ತಮುತ್ತಲ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ನಾನಾ ಯೋಜನೆಗಳಿಗೆ ವಿನಿಯೋಗಿಸಲು ನಿರ್ಧರಿಸಿದ್ದಾರೆ.

ಹೊರ ರಾಜ್ಯಗಳ ಅಯ್ಯಪ್ಪ ಭಕ್ತರಿಗೆ ಉಚಿತ ಕೋವಿಡ್‌ ಚಿಕಿತ್ಸೆ ಇಲ್ಲ: ಕೇರಳ ಸರ್ಕಾರ!

ಯಾರೀ ಉದ್ಯಮಿ? ಇಷ್ಟೇಕೆ ದೇಣಿಗೆ?

ಗಣ ಶ್ರವಣ ಬೆಂಗಳೂರಿನಲ್ಲಿ ಚಿನ್ನ ಮತ್ತು ವಜ್ರದ ವ್ಯಾಪಾರದ ಸಂಸ್ಥೆ ಹೊಂದಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ಭಾರೀ ಸಂಕಷ್ಟಕ್ಕೆ ಸಿಕ್ಕಿದ್ದರು. ಈ ವೇಳೆ ಆತ್ಮಹತ್ಯೆಯ ನಿರ್ಧಾರವನ್ನೂ ಮಾಡಿದ್ದರು. ಈ ವೇಳೆ ತಮ್ಮ ಗುರುಗಳ ಸಲಹೆಯಂತೆ ಅವರು 2016ರಿಂದಲೂ ಭಗವತಿ ದೇಗುಲಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸುತ್ತಿದ್ದರು. ನಂತರದ ದಿನಗಳಲ್ಲಿ ಅವರ ಅದೃಷ್ಟಖುಲಾಯಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ದೇಗುಲಕ್ಕೆ 500 ಕೋಟಿ ರು.ನಷ್ಟುದೇಣಿಗೆ ನೀಡಲು ನಿರ್ಧರಿಸಿದ್ದಾರೆ.