ಜಾಗತಿಕ ವಿಮಾನಯಾನ ಕಂಪನಿಗಳು ಮತ್ತು ನಿಲ್ದಾಣಗಳ ವಾರ್ಷಿಕ ಸಾಧನೆ ಕುರಿತು ‘ಸಿರಿಯಂ’ ಸಂಸ್ಥೆ ವರದಿ ಬಿಡುಗಡೆ ಮಾಡಿದೆ. ವರದಿಯ ವಿಶೇಷವೆಂದರೆ ಜಗತ್ತಿನ ಟಾಪ್‌ 10 ವಿಮಾನ ನಿಲ್ದಾಣಗಳಲ್ಲಿ ಭಾರತದ 3 ವಿಮಾನ ನಿಲ್ದಾಣಗಳು ಮತ್ತು 1 ವಿಮಾನಯಾನ ಸಂಸ್ಥೆ ಸ್ಥಾನ ಪಡೆದುಕೊಂಡಿವೆ.

ನವದೆಹಲಿ(ಜ.03): ಕಾರ್ಯಾಚರಣೆಯಲ್ಲಿನ ನಿರ್ವಹಣಾ ಸಾಧನೆ ಮತ್ತು ಸಮಯ ಕ್ಷಮತೆ ವಿಷಯದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಅಮೆರಿಕದ ಮಿನ್ನೆಪೊಲೀಸ್‌ ನಿಲ್ದಾಣವಿದ್ದರೆ, 2ನೇ ಸ್ಥಾನದಲ್ಲಿ ತೆಲಂಗಾಣದ ರಾಜಧಾನಿ ಹೈದ್ರಾಬಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ ಎಂದು ವರದಿಯೊಂದು ತಿಳಿಸಿದೆ. ಇದರಿಂದಾಗಿ ಇತ್ತೀಚೆಗಷ್ಟೇ ವಿಶ್ವದಲ್ಲೇ ಸುಂದರ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ಪಾತ್ರವಾಗಿದ್ದ ಏರ್‌ಪೋರ್ಟ್‌ಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.

ಜಾಗತಿಕ ವಿಮಾನಯಾನ ಕಂಪನಿಗಳು ಮತ್ತು ನಿಲ್ದಾಣಗಳ ವಾರ್ಷಿಕ ಸಾಧನೆ ಕುರಿತು ‘ಸಿರಿಯಂ’ ಸಂಸ್ಥೆ ವರದಿ ಬಿಡುಗಡೆ ಮಾಡಿದೆ. ವರದಿಯ ವಿಶೇಷವೆಂದರೆ ಜಗತ್ತಿನ ಟಾಪ್‌ 10 ವಿಮಾನ ನಿಲ್ದಾಣಗಳಲ್ಲಿ ಭಾರತದ 3 ವಿಮಾನ ನಿಲ್ದಾಣಗಳು ಮತ್ತು 1 ವಿಮಾನಯಾನ ಸಂಸ್ಥೆ ಸ್ಥಾನ ಪಡೆದುಕೊಂಡಿವೆ.

ದೆಹಲಿ ಗಣರಾಜ್ಯೋತ್ಸವ ಪರೇಡ್‌ಗೆ ಬೆಂಗಳೂರು ಏರ್ಪೋರ್ಟ್‌ ಸ್ತಬ್ಧಚಿತ್ರ?

ವಿಮಾನ ನಿಲ್ದಾಣದ ನಿರ್ವಹಣಾ ಸಾಧನೆ ಮತ್ತು ಸಮಯ ಪಾಲನೆಯಲ್ಲಿ ಅಮೆರಿಕದ ಮಿನ್ನೆಪೊಲೀಸ್‌ ಸೆಂಟ್‌ ಪಾಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೇ.84.44 ಅಂಕ, ಹೈದರಾಬಾದ್ ವಿಮಾನ ನಿಲ್ದಾಣ ಶೇ.84.42 ಮತ್ತು ಬೆಂಗಳೂರು ವಿಮಾನ ನಿಲ್ದಾಣ 84.08 ಅಂಕ ಪಡೆದುಕೊಂಡಿವೆ.

ಇನ್ನು ಮಧ್ಯಮ ಗಾತ್ರದ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಕೋಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಸ್‌ ವಿಮಾನ ನಿಲ್ದಾಣ ಶೇ.83.91 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ವಿಮಾನಗಳೊಂದಿಗೆ ಕಾರ್ಯನಿರ್ವಹಿಸುವ ಇಂಡಿಗೋ ಸಂಸ್ಥೆ, ಕಡಿಮೆ ದರದ ವಿಮಾನಯಾನ ಸಂಸ್ಥೆಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಈ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಸಫೈರ್‌ (ಶೇ.92.36) ಮೊದಲ ಸ್ಥಾನದಲ್ಲಿದೆ. ಸಿರಿಯಂ ಪ್ರಕಾರ, ನಿಗದಿತ ಸಮಯಕ್ಕಿಂತ ವಿಮಾನಗಳ ಆಗಮನ ಮತ್ತು ನಿರ್ಗಮನದಲ್ಲಿ 15 ನಿಮಿಷ ತಡವಾದರೂ ಅದನ್ನು ಸಮಯನಿಷ್ಠತೆ ಎಂದು ಪರಿಗಣಿಸಲಾಗುತ್ತದೆ.