ಕೋಲ್ಕತಾ(ಡಿ.01): ಬಿಜೆಪಿಯ ಆಕ್ರಮಣಕಾರಿ ಹಿಂದುತ್ವ ರಣತಂತ್ರಕ್ಕೆ ಪ್ರತಿತಂತ್ರವಾಗಿ ‘ಬಂಗಾಳಿ ಹೆಮ್ಮೆ’ ಎಂಬ ಸಿದ್ಧಾಂತವನ್ನು 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಿರ್ಧರಿಸಿದೆ.

ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ನಿರ್ದಿಷ್ಟ ಸಿದ್ಧಾಂತವೇ ಇಲ್ಲ ಎಂಬ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಬಂಗಾಳ ಆಧಾರಿತ ರಾಷ್ಟ್ರೀಯವಾದವನ್ನು ಮುಂದಿಟ್ಟು ಚುನಾವಣೆ ಎದುರಿಸಲು ಟಿಎಂಸಿ ನಿರ್ಧರಿಸಿದೆ.

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಜೊತೆಜೊತೆಗೆ ಬಂಗಾಳ ಹೆಮ್ಮೆ ಎಂಬುದೂ ನಮ್ಮ ಚುನಾವಣೆಯ ಮುಖ್ಯ ಧ್ಯೇಯವಾಗಿರಲಿದೆ. ಬಂಗಾಳ ಹೆಮ್ಮೆ ಎಂಬುದು ಕೇವಲ ಬಂಗಾಳಿಗಳ ಕುರಿತಾದದ್ದಲ್ಲ. ಇಲ್ಲಿನ ಮಣ್ಣಿನ ಮಕ್ಕಳ ಕುರಿತಾದದ್ದು’ ಎಂದು ಟಿಎಂಸಿ ನಾಯಕ, ಸಂಸದ ಸೌಗತಾ ರಾವ್‌ ಅವರು ತಿಳಿಸಿದ್ದಾರೆ.

ಟಿಎಂಸಿ ಮೂಲಗಳ ಪ್ರಕಾರ ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಪಾದೇಶಿಕ ಪಕ್ಷಗಳು ಅಲ್ಲಿನ ಸಂಸ್ಕೃತಿ ಮತ್ತು ಅಸ್ಮಿತೆಯ ರಕ್ಷಣೆಗೆ ಆಸ್ಥೆ ವಹಿಸಿದಂತೆ ಪಶ್ಚಿಮ ಬಂಗಾಳದ ಸಂಸ್ಕೃತಿ ಮತ್ತು ಅಸ್ಮಿತೆಯ ರಕ್ಷಣೆಯ ಆಶ್ವಾಸನೆಯನ್ನಿಟ್ಟು ಚುನಾವಣೆ ಎದುರಿಸಲು ಟಿಎಂಸಿ ನಿರ್ಧರಿಸಿದೆ.