ನವದೆಹಲಿ(ಜೂ.09): ದೇಶದಲ್ಲಿ ಕೊರೋನಾ 2ನೇ ಅಲೆಯ ಪ್ರಭಾವ ಮತ್ತಷ್ಟು ಕಡಿಮೆಯಾಗಿರುವುದರ ಸ್ಪಷ್ಟಸುಳಿವು ಸಿಕ್ಕಿದ್ದು, ಮಂಗಳವಾರ ಬೆಳಗ್ಗೆ 8ಕ್ಕೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ 86,498 ಪ್ರಕರಣಗಳು ಮಾತ್ರವೇ ದಾಖಲಾಗಿವೆ. ಇದು ಕಳೆದ 66 ದಿನಗಳಲ್ಲಿಯೇ ಕನಿಷ್ಠ ಪ್ರಮಾಣವಾಗಿದೆ.

ಈ ಹಿಂದೆ ಏ.2ರಂದು 81466 ಪ್ರಕರಣ ದಾಖಲಾಗಿದ್ದೇ ಹಿಂದಿನ ಕನಿಷ್ಠ ಪ್ರಮಾಣವಾಗಿತ್ತು. ಮಂಗಳವಾರದ ಪ್ರಕರಣಗಳು ಸೇರಿದರೆ ದೇಶದಲ್ಲಿ ಈವರೆಗಿನ ಸೋಂಕಿತರ ಪ್ರಮಾಣ 2.89 ಕೋಟಿಗೆ ತಲುಪಿದೆ. ಇನ್ನು ಇದೇ ಅವಧಿಯಲ್ಲಿ ದೇಶದಲ್ಲಿ 2213 ಜನರು ವೈರಸ್‌ಗೆ ಬಲಿಯಾಗಿದ್ದು, ಈವರೆಗೆ ಸಾವನ್ನಪ್ಪಿದವರ ಸಂಕ್ಯೆ 3.51 ಲಕ್ಷಕ್ಕೆ ತಲುಪಿದೆ. ಸಾವಿನ ಪ್ರಮಾಣವು 47 ದಿನಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ. ಜೊತೆಗೆ ಸಾವಿನ ಪ್ರಮಾಣ ಶೇ.1.21ಕ್ಕೆ ಇಳಿದಿದೆ.

ಇದೇ ವೇಳೆ ಸತತ 26ನೇ ದಿನವೂ ಹೊಸ ಸೋಂಕಿಗಿಂತ ಚೇರಿಸಿಕೊಂಡವರ ಪ್ರಮಾಣವೇ ಹೆಚ್ಚಿದ್ದು, ಪರಿಣಾಮ ಸಕ್ರಿಯ ಸೋಂಕಿತರ ಪ್ರಮಾಣವು 13.03 ಲಕ್ಷಕ್ಕೆ ಇಳಿದಿದೆ. ಜೊತೆಗೆ ಚೇತರಿಕೆ ಪ್ರಮಾಣ ಶೆ.94.29ಕ್ಕೆ ಏರಿದೆ.

ಇನ್ನು ಸೋಮವಾರ ದೇಶದಲ್ಲಿ 18.73 ಲಕ್ಷ ಜನರಿಗೆ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಶೇ.4.62ರಸ್ಟುಪಾಸಿಟಿವಿಟಿ ದಾಖಲಾಗಿದೆ. ಇನ್ನು ವಾರದ ಪಾಸಿಟಿವಿಟಿ ಪ್ರಮಾಣ ಶೇ.5.94ರಷ್ಟಿದೆ.