ಲಡಾಖ್ನಲ್ಲೇ ನಿಂತು ಚೀನಾಕ್ಕೆ ರಾಜನಾಥ್ ನೇರ ಎಚ್ಚರಿಕೆ!
* ಗಡಿ ಬಿಕ್ಕಟ್ಟು ಪರಿಹಾರಕ್ಕಾಗಿ ಮಾತುಕತೆ ಭಾರತದ ಆದ್ಯತೆ
* ಲಡಾಖ್ನಲ್ಲೇ ನಿಂತು ಚೀನಾಕ್ಕೆ ರಾಜನಾಥ್ ನೇರ ಎಚ್ಚರಿಕೆ
* ಎದುರಾಳಿ ಸೈನ್ಯಕ್ಕೆ ತಿರುಗೇಟು ನೀಡಲು ಭಾರತ ಕಟಿಬದ್ಧ
ನವದೆಹಲಿ(ಜೂ.29): ‘ಭಾರತವು ಸದಾಕಾಲ ಶಾಂತಿಪ್ರಿಯ ರಾಷ್ಟ್ರವಾಗಿದ್ದು, ಯಾವುದೇ ಕಾರಣಕ್ಕೂ ಯಾರೊಂದಿಗೂ ಸಹ ಕಾಲುಕೆರೆದು ಕಾದಾಟಕ್ಕೆ ಹೋಗಲ್ಲ. ಆದರೆ ತಮ್ಮ ಮೇಲೆ ದಾಳಿಗೆ ಮುಂದಾದವರಿಗೆ ತಕ್ಕ ತಿರುಗೇಟು ನೀಡಲು ನಮ್ಮ ಸೈನ್ಯ ಸರ್ವ ಸನ್ನದ್ಧವಾಗಿರಲಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ.
ತನ್ಮೂಲಕ 3 ದಿನಗಳ ಪ್ರವಾಸದ 2ನೇ ದಿನವಾದ ಸೋಮವಾರ ಪೂರ್ವ ಲಡಾಖ್ ಮುಂಚೂಣಿ ಗಡಿಗೆ ಭೇಟಿ ನೀಡಿದ ರಾಜನಾಥ್ ಅವರು, ಈ ಭಾಗದಲ್ಲಿ ಸದಾಕಾಲ ಭಾರತದ ವಿರುದ್ಧ ತಂಟೆ ತೆಗೆಯುವ ಚೀನಾಕ್ಕೆ ನೇರ ಸಂದೇಶ ರವಾನಿಸಿದ್ದಾರೆ.
ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಸಿಂಗ್ ಅವರು, ‘ನೆರೆಯ ರಾಷ್ಟ್ರಗಳ ಜೊತೆಗಿನ ಗಡಿ ಬಿಕ್ಕಟ್ಟುಗಳನ್ನು ಮಾತುಕತೆ ಮುಖಾಂತರ ಬಗೆಹರಿಸಿಕೊಳ್ಳಲು ಭಾರತ ಸಿದ್ಧವಿದೆ. ಆದರೆ ದೇಶದ ಸುರಕ್ಷತೆ ಮತ್ತು ಭದ್ರತೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಲ್ಲ’ ಎಂದರು.
ಚೀನಾ ಗಡಿಗೆ 50 ಸಾವಿರ ಯೋಧರ ಕಳಿಸಿದ ಭಾರತ!
ಇನ್ನು ಕಳೆದ ವರ್ಷದ ಜೂನ್ನಲ್ಲಿ ಗಲ್ವಾನ್ ಗಡಿಯಲ್ಲಿ ಚೀನಾ ಯೋಧರ ಜತೆಗಿನ ಗುದ್ದಾಟದಲ್ಲಿ ಮಡಿದ 20 ಯೋಧರಿಗೆ ಗೌರವ ವಂದನೆ ಸಲ್ಲಿಸಿದ ಅವರು, ಯೋಧರ ಬಲಿದಾನವನ್ನು ದೇಶ ಎಂದಿಗೂ ಮರೆಯಲ್ಲ ಎಂದರು.