ಚೀನಾ ಗಡಿಗೆ 50 ಸಾವಿರ ಯೋಧರ ಕಳಿಸಿದ ಭಾರತ!

* ಗಡಿಯಲ್ಲಿ ಚೀನಾ ತನ್ನ ಸೇನೆಯನ್ನು ಜಮಾವಣೆ ಮಾಡುತ್ತಿರುವುದರ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ

* ಚೀನಾ ಗಡಿಗೆ 50 ಸಾವಿರ ಯೋಧರ ಕಳಿಸಿದ ಭಾರತ

* ಗಡಿಯಲ್ಲೀಗ 2 ಲಕ್ಷ ಯೋಧರು ಇದೇ ಮೊದಲು

In historic move India deploys 50000 more troops along China border pod

ನವದೆಹಲಿ(ಜೂ.29):  ಗಡಿಯಲ್ಲಿ ಚೀನಾ ತನ್ನ ಸೇನೆಯನ್ನು ಜಮಾವಣೆ ಮಾಡುತ್ತಿರುವುದರ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ, ಗಲ್ವಾನ್‌ ಗಡಿಗೆ ಹೆಚ್ಚುವರಿಯಾಗಿ 50 ಸಾವಿರ ಯೋಧರನ್ನು ಕಳುಹಿಸಿಕೊಟ್ಟಿದೆ. ಇದರಿಂದ ಗಡಿಯಲ್ಲಿ ಭಾರತದ ಯೋಧರ ಸಂಖ್ಯೆ 2 ಲಕ್ಷಕ್ಕೆ ಹೆಚ್ಚಿದ್ದು, ಇದು ಗಲ್ವಾನ್‌ ಸಂಘರ್ಷದ ಪೂರ್ವದ ಸ್ಥಿತಿಗೆ ಹೋಲಿಸಿದರೆ ಶೇ.40ರಷ್ಟುಹೆಚ್ಚಾಗಿದೆ. ಅಲ್ಲದೆ, ಗಡಿಯಲ್ಲಿ ಇಷ್ಟೊಂದು ಪ್ರಮಾಣದ ಸೇನೆ ಜಮಾವಣೆ ಮಾಡಿರುವುದು ಇದೇ ಮೊದಲು. ಹೀಗಾಗಿ ಭಾರತ ಮತ್ತು ಚೀನಾ ಮಧ್ಯೆ ಮತ್ತೊಮ್ಮೆ ಯುದ್ಧದ ಕಾರ್ಮೋಡ ಕವಿದಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಕಳೆದ ಬಾರಿಯ ಗಲ್ವಾನ್‌ ಸಂಘರ್ಷದಿಂದ ಪಾಠ ಕಲಿತಿರುವ ಭಾರತ, ಈ ಬಾರಿ ಗಡಿಯಲ್ಲಿ ಚೀನಾ ಸೇನೆ ಮುನ್ನುಗ್ಗದಂತೆ ಕಟ್ಟೆಚ್ಚರ ವಹಿಸಿದೆ. ಗಡಿಯಲ್ಲಿ ನಿರಂತರವಾಗಿ ಕಾವಲನ್ನು ಮುಂದುವರಿಸಿದೆ. ಸೈನಿಕರ ಜೊತೆಗೆ ಜೆಟ್‌ ವಿಮಾನಗಳನ್ನು ಚೀನಾ ಗಡಿಗೆ ಹೊಂದಿಕೊಂಡ ಮೂರು ವಿಭಿನ್ನ ಸ್ಥಳಗಳಲ್ಲಿ ನಿಯೋಜನೆ ಮಾಡಿದೆ.

ಈ ಮುನ್ನ ಚೀನಾದ ಚಲನವಲನಗಳಿಗೆ ತಡೆ ಒಡ್ಡುವ ಉದ್ದೇಶದಿಂದ ಗಡಿಯಲ್ಲಿ ಭಾರತವು ಸೇನೆ ಜಮಾವಣೆ ಮಾಡಿತ್ತು. ಇದೀಗ ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜನೆ ಮಾಡಿರುವುದು ಚೀನಾದ ವಿರುದ್ಧ ದಾಳಿ ನಡೆಸಲು ಎಂದು ಹೇಳಲಾಗಿದೆ. ಒಂದು ವೇಳೆ ಚೀನಾ ಆಕ್ರಮಣಶೀಲತೆ ಪ್ರದರ್ಶಿಸಿದರೆ ಆ ಪ್ರದೇಶವನ್ನು ವಶಪಡಿಸಿಕೊಳ್ಳುವುದಕ್ಕೆ ಸೇನೆಗೆ ಈಗ ಹೆಚ್ಚಿನ ಬಲ ಬಂದಂತಾಗಿದೆ.

ಜೊತೆಗೆ ಯೋಧರನ್ನು ಒಂದು ಕಣಿವೆಯಿಂದ ಇನ್ನೊಂದು ಪ್ರದೇಶಕ್ಕೆ ಒಯ್ಯಲು ಅನುಕೂಲವಾಗುವ ಲಘು ಹೆಲಿಕಾಪ್ಟರ್‌ಗಳು ನಿಯೋಜಿಸಿದೆ. ಇದೇ ವೇಳೆ, ಎಂ7777 ಹೊವಿಟ್ಜರ್‌ ಫಿರಂಗಿಗಳನ್ನು ಕೂಡ ಕೇಂದ್ರ ಸರ್ಕಾರ ಚೀನಾ ಗಡಿಯಲ್ಲಿ ನಿಯೋಜನೆ ಮಾಡಿದೆ.

ಚೀನಾ ಸಂಖ್ಯೆ ಬಗ್ಗೆ ಸ್ಪಷ್ಟತೆ ಇಲ್ಲ:

ಮತ್ತೊಂದೆಡೆ ಭಾರತದ ಗಡಿಗೆ ಚೀನಾ ಎಷ್ಟುಸಂಖ್ಯೆಯ ಸೈನಿಕರನ್ನು ಕಳುಹಿಸಿಕೊಟ್ಟಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ ಇತ್ತೀಚೆಗೆ ಟಿಬೇಟ್‌ನಿಂದ ಹಿಮಾಲಯ ಪ್ರದೇಶ ಮತ್ತು ವಿವಾದಿತ ಪ್ರದೇಶಗಳಲ್ಲಿ ಕಾವಲು ಕಾಯುವ ಕ್ಸಿನ್‌ ಜಿಯಾಂಗ್‌ ಮಿಲಿಟರಿ ಕಮಾಂಡ್‌ಗೆ ಕಳುಹಿಸಿಕೊಟ್ಟಿದೆ. ಅಲ್ಲದೇ ಟಿಬೆಟ್‌ನ ವಿವಾದಿತ ಗಡಿಯಲ್ಲಿ ಚೀನಾ ಬಾಂಬ್‌ ನಿರೋಧಕ ಬಂಕರ್‌ಗಳು, ಯುದ್ಧ ವಿಮಾನ ಸ್ಕಾರ್ಡನ್‌ಗಳನ್ನು ಮತ್ತು ಹೊಸ ವಾಯು ನೆಲೆಗಳನ್ನು ನಿರ್ಮಾಣ ಮಾಡಿಕೊಂಡಿದೆ. ಕಳೆದ ಕೆಲವು ತಿಂಗಳಿನಿಂದ ಭಾರತದ ಗಡಿಗೆ ಹೊಂದಿಕೊಂಡಂತೆ ಚೀನಾ ಫಿರಂಗಿಗಳು, ಟ್ಯಾಂಕ್‌ಗಳು ಮತ್ತು ರಾಕೆಟ್‌ ರೆಜಿಮೆಂಟ್‌ಗಳನ್ನು ಕೂಡ ನಿಯೋಜಿಸಿದೆ ಎಂದು ವರದಿಗಳು ತಿಳಿಸಿವೆ.

ಗಡಿಯಲ್ಲಿನ ಸೇನಾ ಜಮಾವಣೆಯ ಬಗ್ಗೆ ಚೀನಾ ಇದುವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಲು ಚೀನಾ ವಿದೇಶಾಂಗ ಸಚಿವಾಲಯ ಕೂಡ ನಿರಾಕರಿಸಿದೆ. ಆದರೆ, ಗಡಿಯಲ್ಲಿನ ಸೇನಾ ಜಮಾವಣೆ ಹಿಂದಿಗಿಂತಲೂ ದೊಡ್ಡ ಮಟ್ಟದ ಸಂಘರ್ಷಕ್ಕೆ ಎಡೆಮಾಡಿಕೊಡಬುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಗಡಿ ವಿಷಯವಾಗಿ ಚೀನಾದ ಜೊತೆಗೆ ಇತ್ತೀಚೆಗೆ ನಡೆದ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಯ ವೇಳೆ ಯಥಾಸ್ಥಿತಿಗೆ ಮರಳುವ ನಿಟ್ಟಿನಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ವರದಿಗಳು ತಿಳಿಸಿವೆ.

Latest Videos
Follow Us:
Download App:
  • android
  • ios