Asianet Suvarna News Asianet Suvarna News

ಜಡ್ಜ್‌ ಆಗಲು 3 ವರ್ಷದ ವಕೀಲಿಕೆ ಕಡ್ಡಾಯ?

ಜಡ್ಜ್‌ ಆಗಲು 3 ವರ್ಷದ ವಕೀಲಿಕೆ ಕಡ್ಡಾಯಗೊಳಿಸಿ| ಸುಪ್ರೀಂ ಮೊರೆ ಹೋಗಲು ಬಾರ್‌ ಕೌನ್ಸಿಲ್‌ ನಿರ್ಧಾರ| ವಕೀಲಿಕೆ ಅನುಭವ ಇಲ್ಲದ ಜಡ್ಜ್‌ಗಳ ಕಾರ‍್ಯನಿರ್ವಹಣೆಗೆ ಬೇಸರ

BCI pushes for three year bar experience for sitting judicial services exam pod
Author
Bangalore, First Published Jan 4, 2021, 8:56 AM IST

ನವದೆಹಲಿ(ಜ.04): ನ್ಯಾಯಾಧೀಶರಾಗಲು ಕನಿಷ್ಠ 3 ವರ್ಷಗಳ ವಕೀಲಿಕೆ ಕಡ್ಡಾಯಗೊಳಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.

ಈಗಿನ ನಿಯಮಗಳ ಪ್ರಕಾರ ಕಾನೂನು ಪದವೀಧರರು, ಪದವಿ ಪೂರ್ಣಗೊಳಿಸಿದ ತಕ್ಷಣವೇ ಯಾವುದೇ ವಕೀಲಿಕೆಯ ಅನುಭವವಿಲ್ಲದೇ ನ್ಯಾಯಾಧೀಶರ ಹುದ್ದೆಗಳ ಪರೀಕ್ಷೆಗಳಿಗೆ ಹಾಜರಾಗಬಹುದು.

ಆದರೆ ಇದನ್ನು ವಿರೋಧಿಸಿರುವ ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ, ‘ನ್ಯಾಯಾಧೀಶ ಹುದ್ದೆಗೆ ಪರೀಕ್ಷೆ ಬರೆಯಲು ಕನಿಷ್ಠ 3 ವರ್ಷಗಳ ವಕೀಲಿಕೆ ಅನುಭವವನ್ನು ಕಡ್ಡಾಯಗೊಳಿಸಬೇಕು. ಇಲ್ಲದೇ ಹೋದರೆ ವಕೀಲಿಕೆ ಅನುಭವವಿಲ್ಲದೇ ನ್ಯಾಯಾಧೀಶ ಹುದ್ದೆಗೆ ಬರುವವರು ವಿಷಯಗಳನ್ನು ನಿಭಾಯಿಸುವಲ್ಲಿ ಅಸಮರ್ಥರಾಗಿರುತ್ತಾರೆ. ಅವರಿಗೆ ಪ್ರ್ಯಾಕ್ಟಿಕಲ್‌ ಅನುಭವ ಇರದ ಕಾರಣ ವಕೀಲರೆದುರು ವಿನಯದಿಂದ ನಡೆದುಕೊಳ್ಳುವುದಿಲ್ಲ. ಕಕ್ಷಿದಾರರು ಹಾಗೂ ವಕೀಲರ ಬೇಕು-ಬೇಡಗಳೂ ಅವರಿಗೆ ಗೊತ್ತಿರುವುದಿಲ್ಲ’ ಎಂದು ಹೇಳಿದೆ.

‘ಪ್ರಕರಣಗಳ ವಿಲೇವಾರಿ ವಿಳಂಬವಾಗಲು ವಕೀಲಿಕೆಯ ಅನುಭವ ಇಲ್ಲದಿರುವುದೂ ಮುಖ್ಯ ಕಾರಣ. ವಕೀಲಿಕೆ ತರಬೇತಿ ಹೊಂದಿರುವ ಅನುಭವಿ ನ್ಯಾಯಾಧೀಶರು ಬೇಗ ಪ್ರಕರಣ ವಿಲೇವಾರಿ ಮಾಡುತ್ತಾರೆ’ ಎಂದು ಕೌನ್ಸಿಲ್‌ ಅಭಿಪ್ರಾಯಪಟ್ಟಿದೆ.

ಜಡ್ಜ್‌ ಆಗಲು 3 ವರ್ಷದ ವಕೀಲಿಕೆ ಅನುಭವ ಅಗತ್ಯವಿಲ್ಲ ಎಂದು 2002ರಲ್ಲೇ ಸುಪ್ರೀಂ ಕೋರ್ಟ್‌ ನಿಯಮ ರೂಪಿಸಿತ್ತು. ಈಗ ಇದರ ಬದಲಾವಣೆ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಕೌನ್ಸಿಲ್‌ ಕಾರ್ಯದರ್ಶಿ ಶ್ರೀಮಂತೋ ಸೇನ್‌ ತಿಳಿಸಿದ್ದಾರೆ.

Follow Us:
Download App:
  • android
  • ios