ನವದೆಹಲಿ(ನ.09): ಮಕ್ಕಳನ್ನು ಕ್ಷಯ (ಟಿಬಿ)ರೋಗದಿಂದ ರಕ್ಷಿಸಲು ಬಳಕೆ ಮಾಡುತ್ತಿರುವ ಬಿಸಿಜಿ ಲಸಿಕೆಯು ಜನರನ್ನು ಕೊರೋನಾ ಸೋಂಕಿನಿಂದಲೂ ರಕ್ಷಿಸಬಲ್ಲದು ಎಂಬ ಸಂಗತಿಯನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.

ಬಿಸಿಜಿ ಲಸಿಕೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿರುವುದು ಕಂಡು ಬಂದಿದೆ. ಅಧ್ಯಯನದ ವೇಳೆ ತಿಳಿದುಬಂದ ಅಂಶಗಳನ್ನು ಇಂಡಿಯನ್‌ ಜರ್ನಲ್‌ ಆಫ್‌ ಅಪ್ಲೈಯ್ಡ್‌ ರಿಸಚ್‌ರ್‍ನಲ್ಲಿ ಪ್ರಕಟಿಸಲಾಗಿದೆ ಎಂದು ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಕೊರೋನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ರೇಣು ಅಗರ್ವಾಲ್‌ ಅವರು ತಿಳಿಸಿದ್ದಾರೆ.

ಅಧ್ಯಯನ ಮೊದಲ ಹಂತದಲ್ಲಿ ನೋಯ್ಡಾ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 30 ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಏಪ್ರಿಲ್‌ನಲ್ಲಿ ಬಿಸಿಜಿ ಲಸಿಕೆಯನ್ನು ನೀಡಲಾಗಿತ್ತು. ಅವರಲ್ಲಿ ಇದುವರೆಗೆ ಒಬ್ಬರಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿಲ್ಲ. 80 ಮಂದಿ ಸಿಬ್ಬಂದಿ ಸಮೂಹದಲ್ಲಿ ಲಸಿಕೆ ಪಡೆಯದೇ ಕಾರ್ಯನಿರ್ವಹಿಸಿದ 50 ಸಿಬ್ಬಂದಿಯ ಪೈಕಿ 8 ಜನರಲ್ಲಿ ಸೋಂಕು ದೃಢಪಟ್ಟಿದೆ. ಬಳಿಕ ಆಗಸ್ಟ್‌ನಲ್ಲಿ ಎರಡನೇ ಹಂತದ 130 ಜನರ ತಂಡ ರಚಿಸಿ ಅವರ ಪೈಕಿ 50 ಜನರಿಗೆ ಬಿಸಿಜಿ ಲಸಿಕೆ ನೀಡಲಾಗಿತ್ತು. ಲಸಿಕೆ ಸ್ವೀಕರಿಸಿದ ಎಲ್ಲಾ 50 ಮಂದಿಗೂ ಇದುವರೆಗೆ ಕೋರೊನಾ ಸೋಂಕು ದೃಢಪಟ್ಟಿಲ್ಲ. ಲಸಿಕೆ ಸ್ವೀಕರಿಸಿದರಲ್ಲಿ ಹೆಚ್ಚಿನವರು ಸಕ್ಕರೆ ಖಾಯಿಲೆ, ರಕ್ತದ ಒತ್ತಡದಿಂದ ಬಳಲುತ್ತಿದ್ದವರಾಗಿದ್ದಾರೆ ಎಂದು ಅಗರ್ವಾಲ್‌ ಹೇಳಿದ್ದಾರೆ.