ಅಬುಧಾಬಿ[ಫೆ.09]: ಬೆಂಗಳೂರು ಮೂಲದ ಮ್ಯಾರಥಾನ್‌ ಓಟಗಾರರೊಬ್ಬರು ಅಬುಧಾಬಿ ಹಾಗೂ ದುಬೈ ಮಧ್ಯೆ 27 ಗಂಟೆಗಳಲ್ಲಿ 118 ಕಿ.ಮೀ. ಓಡುವ ಮೂಲಕ ಆರೋಗ್ಯ ಜಾಗೃತಿ ಮೂಡಿಸಿದ್ದಾರೆ. ಆಕಾಶ್‌ ನಂಬಿಯಾರ್‌ (30) ಎಂಬವರು ಜನವರಿ 25ರಂದು ಇ11 ಹೈವೇ ಮೂಲಕ ಅಬುಧಾಬಿಯಿಂದ ಓಟ ಪ್ರಾರಂಭಿಸಿ, 27 ಗಂಟೆಗಳ ಬಳಿಕ ಮರುದಿನ ದುಬೈನ ಬಟ್ಟೂಟ ಮಾಲ್‌ ತಲುಪಿದ್ದಾರೆ.

ಆರೋಗ್ಯದ ಬಗ್ಗೆ ಯುಎಇಯ ಯುವಕರಿಗೆ ಜಾಗೃತಿ ಮೂಡಿಸಲು ಈ ಓಟ ಕೈಗೊಂಡೆ. ಉತ್ತಮ ವೈದ್ಯಕೀಯ ವ್ಯವಸ್ಥೆ ಇದ್ದರೂ, ಯುಎಇ ಮಂದಿ ಮಧುಮೇಹ ಹಾಗೂ ಕ್ಯಾನ್ಸರ್‌ ಮುಂತಾದ ರೋಗಗಳಿಂದ ಬಳಲುತ್ತಿದ್ದಾರೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ದೈಹಿಕವಾಗಿ ಕುಗ್ಗಿದ್ದಾರೆ.

ಈ ಹಿಂದೆ ಅಬುಧಾಬಿಯಿಂದ ಮೆಕ್ಕಾಗೆ ಮ್ಯಾರಥಾನ್‌ ಮಾಡಿದ್ದ ನನ್ನ ಸ್ನೇಹಿತ ಖಾಲಿದ್‌ ಅಲ್‌ ಸುವೈದಿ ಪ್ರೇರಣೆಯಿಂದ ಈ ಓಟ ಕೈಗೊಂಡೆ. ಐದು ತಿಂಗಳೊಳಗೆ ಇನ್ನು ಹೆಚ್ಚಿನ ದೂರದ ಮ್ಯಾರಥಾನ್‌ ಓಟದ ಯೋಚನೆಯಿದೆ ಎಂದು ನಂಬಿಯಾರ್‌ ಹೇಳಿದ್ದಾರೆ. ಈ ಹಿಂದೆ ಶ್ರೀಲಂಕಾದ ಕೊಲಂಬೋದಿಂದ ಪುನವಥುನಾ ವರೆಗೆ ಒಟ್ಟು 120 ಕಿ.ಮೀ. ದೂರ ಆಕಾಶ್‌ ಓಡಿದ್ದರು. ಆಕಾಶ್‌ ಮೂಲತಃ ಕೇರಳದವರು. ‘ಬೇರ್‌ಫುಟ್‌ ಮಲ್ಲು’ ಎಂದೂ ಹೆಸರುವಾಸಿಯಾಗಿದ್ದಾರೆ.