* ಸ್ವಾಮಿಗಳನ್ನು ಪಲ್ಲಕ್ಕಿ ಮೇಲೆ ಕೂರಿಸಿ ಇನ್ನೊಬ್ಬರು ಹೊರುವುದು ಸಲ್ಲದು* ಈ ರೀತಿಯ ಮೆರವಣಿಗೆಯಿಂದ ಮಾನವ ಹಕ್ಕು ಉಲ್ಲಂಘನೆ: ಸ್ಟಾಲಿನ್‌ ಸರ್ಕಾರ* ಸರ್ಕಾರದ ನಿರ್ಧಾರಕ್ಕೆ ಬಿಜೆಪಿ, ಸ್ವಾಮೀಜಿಗಳ ತೀವ್ರ ವಿರೋಧ

ಚೆನ್ನೈ(ಮೇ.05): ತಮಿಳುನಾಡಿನ ಧರ್ಮಪುರಂ ಆಧೀನಂ ಪೀಠದಲ್ಲಿ ಸ್ವಾಮೀಜಿಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ನಡೆಸುವ ಮೆರವಣಿಗೆಯನ್ನು ರಾಜ್ಯದ ಡಿಎಂಕೆ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಬಂಧವು ಸ್ವಾಮೀಜಿಗಳು, ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳನ್ನು ಕೆರಳಿಸಿದ್ದು, ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿವೆ.

ಸ್ವಾಮೀಜಿಗಳನ್ನು (ಮನುಷ್ಯರೊಬ್ಬರನ್ನು) ಪಲ್ಲಕ್ಕಿ ಮೇಲೆ ಕೂರಿಸಿ ಅದನ್ನು ಭಕ್ತರು ಹೊರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಕೆಲವು ಸಂಘಟನೆಗಳು ದೂರು ನೀಡಿದ್ದವು. ಇದನ್ನು ಪರಿಗಣಿಸಿದ್ದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರ ಸರ್ಕಾರ ಪಲ್ಲಕ್ಕಿ ಮೆರವಣಿಗೆ ನಿಷೇಧಿಸಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ಧಾರ್ಮಿಕ ಆಚರಣೆಗಳಿಗೆ ಸ್ಟಾಲಿನ್‌ ಅಡ್ಡಿ ಉಂಟು ಮಾಡುತ್ತಿದ್ದಾರೆ. ನಿರ್ಬಂಧ ಸಡಿಲಿಸದಿದ್ದರೆ ನಾನೇ ಪಲ್ಲಕ್ಕಿ ಹೊರುವೆ’ ಎಂದು ಗುಡುಗಿದ್ದಾರೆ. ಇನ್ನು ಮದುರೈ ಆಧೀನಂ ಪೀಠದ ಮಠಾಧೀಶ ಜ್ಞಾನಸಂಬಂಧ ದೇಶಿಕ ಸ್ವಾಮೀಜಿಗಳು ಕೂಡ, ‘ಬ್ರಿಟಿಷರು ಕೂಡ ಈ ಆಚರಣೆಗೆ ಅಡ್ಡಿ ಮಾಡಿರಲಿಲ್ಲ. ಈಗೇಕೆ ಅಡ್ಡಿ? ಸರ್ಕಾರಗಳು ಧಾರ್ಮಿಕತೆಗೆ ಗೌರವ ನೀಡಬೇಕು’ ಎಂದಿದ್ದಾರೆ.

ಇದರ ಬೆನ್ನಲ್ಲೇ ಧರ್ಮಪುರಂ ಆಧೀನಂ ಮಠಾಧೀಶರೊಂದಿಗೆ ಮುಖ್ಯಮಂತ್ರಿ ಸ್ಟಾಲಿನ್‌ ಮಾತುಕತೆ ನಡೆಸಲಿದ್ದಾರೆ ಎಂದು ಮುಜರಾಯಿ ಸಚಿವ ಪಿ.ಕೆ. ಶೇಖರ್‌ಬಾಬು ಹೇಳಿದ್ದಾರೆ.