ಟೊರಾಂಟೋ(ಡಿ.13): ಬಲೂಚಿಗಳ ಹಕ್ಕುಗಳು ಪರ ಹೋರಾಟಗಾರ್ತಿ ಕರೀಮಾ ಬಲೂಚ್‌ (35) ಕೆನಡಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಕೈವಾಡದ ಶಂಕೆ ವ್ಯಕ್ತವಾಗಿದೆ.

ಪಾಕಿಸ್ತಾನದಲ್ಲಿ ಬಲೂಚಿಗಳ ಹಕ್ಕುಗಳ ದಮನವಾಗುತ್ತಿದೆ ಎಂದು ಕಿಡಿಕಾರಿದ್ದ ಕರೀಮಾ 2016ರಲ್ಲಿ ಪಾಕಿಸ್ತಾನ ತೊರೆದು, ಕೆನಡಾದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಅಲ್ಲಿ ಪಾಕಿಸ್ತಾನದ ಸರ್ಕಾರದ ಶೋಷಣೆಯ ವಿರುದ್ಧ ದೊಡ್ಡಮಟ್ಟದಲ್ಲೇ ಧ್ವನಿ ಎತ್ತಿದ್ದರು. 2016ರಲ್ಲಿ ಬಿಬಿಸಿಯ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಕರೀಮಾ ಸ್ಥಾನ ಪಡೆದಿದ್ದಳು.

ಬಲೂಚಿ ಜನರ ಪರ ಮೋದಿ ನಿಂತಿರುವುದು ಪಾಕ್'ಗೆ ನಡುಕ ಹುಟ್ಟಿಸಿದೆಯಾ?

ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ರಕ್ಷಾ ಬಂಧನದ ಶುಭಾಶಯ ಕೋರಿ ರಾಖಿಯನ್ನು ಕಳುಹಿಸಿಕೊಟ್ಟಿದ್ದ ಕರೀಮಾ, ಬಲೂಚಿಸ್ತಾನದ ಹೋರಾಟಗಾರರಿಗೆ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಪಾಕಿಸ್ತಾನ ಹಲ್ಲು ಮಸೆಯುತ್ತಿತ್ತು ಎನ್ನಲಾಗಿದೆ.

ಭಾನುವಾರದಂದು ಟೊರಾಂಟೋದಿಂದ ನಿಗೂಢ ರೀತಿಯಲ್ಲಿ ಕರೀಮಾ ನಾಪತ್ತೆ ಆಗಿದ್ದಳು. ಬಳಿಕ ಆಕೆಯ ಮೃತ ದೇಹ ಟೊರೆಂಟೋದ ಲೇಕ್‌ಶೋರ್‌ ಸಮೀಪದ ದ್ವೀಪವೊಂದರಲ್ಲಿ ಪತ್ತೆ ಆಗಿದೆ. ಕರೀಮಾ ಸಾವಿನ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ.