Asianet Suvarna News Asianet Suvarna News

ಬಲೂಚಿ ಜನರ ಪರ ಮೋದಿ ನಿಂತಿರುವುದು ಪಾಕ್'ಗೆ ನಡುಕ ಹುಟ್ಟಿಸಿದೆಯಾ?

mehran marri says pak is terrified since modi took up baloch issue

ನವದೆಹಲಿ(ಸೆ. 17): ಪಾಕಿಸ್ತಾನ ಸರಕಾರದ ದೌರ್ಜನ್ಯದಿಂದ ಮುಕ್ತವಾಗಲು ಹೋರಾಟ ನಡೆಸುತ್ತಿರುವ ಬಲೂಚಿಸ್ತಾನದ ಜನರ ಪರವಾಗಿ ನರೇಂದ್ರ ಮೋದಿ ಧ್ವನಿ ಎತ್ತಿರುವುದು ಪಾಕಿಸ್ತಾನಕ್ಕೆ ಭಯ ತಂದಿದೆ ಎಂದು ವಿಶ್ವ ಸಂಸ್ಥೆ ಮಾನವ  ಹಕ್ಕು ಸಂಸ್ಥೆಯ ಪ್ರತಿನಿಧಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಬಲೂಚಿಸ್ತಾನದ ಬಗ್ಗೆ ಮೋದಿ ಮಾತನಾಡಿದ ಬಳಿಕ ಪಾಕ್ ಆಡಳಿತ ಹಾಗೂ ಸೇನೆಯಲ್ಲಿ ನಡುಕ ಹುಟ್ಟಿದೆ. ಹೀಗಾಗಿ, ಬಲೂಚಿ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ತೀವ್ರಗೊಂಡಿದೆ ಎಂದವರು ದೂರಿದ್ದಾರೆ. ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗದಲ್ಲಿ ಬಲೂಚಿಸ್ತಾನೀ ಸಮುದಾಯದ ಪ್ರತಿನಿಧಿ ಆಗಿರುವ ಮೆಹ್ರಾನ್ ಮರ್ರಿ ಅವರು ಎಎನ್'ಐ ಸುದ್ದಿ ಸಂಸ್ಥೆಗೆ ಈ ವಿಚಾರ ತಿಳಿಸಿದ್ದಾರೆ.

ಭಾರತ ನೀಡಿರುವ ನೈತಿಕ ಬೆಂಬಲಕ್ಕೆ ತಮ್ಮ ಸಮುದಾಯ ಋಣಿಯಾಗಿದೆ. ನಮ್ಮ ಹೋರಾಟಕ್ಕೆ ಯಶಸ್ಸು ಸಿಗುತ್ತದೆಂಬ ನಂಬಿಕೆ ಬಲಗೊಳ್ಳುತ್ತಿದೆ ಎಂದು ಮೆಹ್ರಾನ್ ಅಭಿಪ್ರಾಯಪಟ್ಟಿದ್ದಾರೆ.

ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಮೋದಿಯವರು ಬಲೂಚಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಸೇನೆಯಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಇದನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂದು ಕೋರಿದ್ದರು. ಅಲ್ಲದೇ, ಕೆಲ ದಿನಗಳ ಹಿಂದಷ್ಟೇ ವಿಶ್ವ ಸಂಸ್ಥೆಯಲ್ಲೂ ಮೋದಿ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಇದೀಗ ಬಲೂಚಿಸ್ತಾನದ ಪ್ರತ್ಯೇಕತಾವಾದಿ ಹೋರಾಟಗಾರರಿಗೆ ಭಾರತದಲ್ಲಿ ರಾಜ್ಯಾಶ್ರಯ ನೀಡುವುದಾಗಿಯೂ ನಿನ್ನೆ ಪ್ರಧಾನಿ ಮೋದಿ ಘೋಷಣೆ ಮಾಡಿದ್ದರು. ಬಲೂಚಿಸ್ತಾನದ ನೇತಾರರು ಮೋದಿಯವರ ಅಭಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಅತ್ತ, ಪಾಕಿಸ್ತಾನದಲ್ಲಿ ಈ ಬೆಳವಣಿಗೆ ಇರಿಸುಮುರಿಸು ಮೂಡಿಸಿದೆ. ತನ್ನ ಆಂತರಿಕ ವಿಚಾರದಲ್ಲಿ ಭಾರತ ಮೂಗು ತೂರಿಸುತ್ತಿರುವುದಕ್ಕೆ ಇದು ಸ್ಪಷ್ಟ ಸಾಕ್ಷ್ಯವೆನಿಸಿದೆ ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ.

Follow Us:
Download App:
  • android
  • ios