ಬಿಹಾರ(ಮೇ.27): ಭೀಕರ ಬಿಸಿಲು ಹಾಗೂ ಹಸಿವಿನಿಂದ ಕಂಗಾಲಾದ ಕಾರ್ಮಿಕ ಮಹಿಳೆಯೊಬ್ಬಳು ಬಿಹಾರದ ಮುಜಫ್ಫರ್‌ಪುರ ರೈಲ್ವೇ ನಿಲ್ದಾಣದಲ್ಲಿ ಮೃತಪಟ್ಟಿದ್ದು, ಇದನ್ನರಿಯದ ಪುಟ್ಟ ಕಂದ ತನ್ನ ತಾಯಿಗೆ ಹೊದಿಸಲಾಗಿದ್ದ ಹೊದಿಕೆಯನ್ನು ತೆಗೆದು ಎಬ್ಬಿಸಲು ಯತ್ನಿಸಿರುವ ಮನಕಲುಕುವ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದ ಅತಿ ಹೆಚ್ಚು ಸಮಸ್ಯೆ ಎದುರಿಸಿದವರೆಂದರೆ ವಲಸೆ ಕಾರ್ಮಿಕರು. ಆದರೆ ಇನ್ನೂ ಅವರ ಸಂಕಷ್ಟ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಚಲಿಸುವ ರೈಲಿನಲ್ಲಿಯೇ ಮಗುವಿಗೆ ಜನ್ಮ, ಸೆಲ್ಯೂಟ್ ಬೆಂಗಳೂರು ಪೊಲೀಸ್

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆ ನೆಲದ ಮೇಲೆ ಬಿದ್ದಿದ್ದಾರೆ. ಅಲ್ಲೇ ಇರುವ ಕಂದ ಆಕೆಗೆ ಹೊದಿಸಲಾದ ಹೊದಿಕೆಯನ್ನು ಎಳೆದಾಡಿ ಎಬ್ಬಿಸಲು ಯತ್ನಿಸುತ್ತಿದ್ದಾನೆ. ಲಭ್ಯವಾದ ಮಾಹಿತಿ ಅನ್ವಯ ಈ ಮಹಿಳೆ ಭೀಕರ ಬಿಸಿಲು, ಹಸಿವು ಹಾಗೂ ನೀರಿಲ್ಲದೆ ಮೃತಪಟ್ಟಿದ್ದಾರೆನ್ನಲಾಗಿದೆ. ಅಲ್ಲದೇ ಈಕೆ ಶ್ರಮಿಕ್ ಸ್ಪೆಷಲ್ ರೈಲಿನ ಮೂಲಕ ಮುಜಫ್ಫರ್‌ಪುರ ತಲುಪಿದ್ದರೆಂಬ ಮಾಹಿತಿಯೂ ಲಭ್ಯವಾಗಿದೆ.

ರೈಲಿನಲ್ಲಿ ಆಹಾರ ಹಾಗೂ ನೀರು ಸಿಗದ ಪರಿಣಾಮ ಮಹಿಳೆಯ ಆರೋಗ್ಯ ಹದಗೆಟ್ಟಿತ್ತು ಎಂದು ಆಕೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಈ ಮಹಿಳೆ ಶನಿವಾರ ಗುಜರಾತ್‌ನಿಂದ ರೈಲು ಹತ್ತಿದ್ದಳು. ಆದರೆ ಮುಜಫ್ಫರ್‌ಪುರ ತಲುಪಿದ ಕೆಲವೇ ಕ್ಷಣಗಳಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಹೀಗಿರವಾಗ ಈ ಮಹಿಳೆಯ ಮೃತದೇಹವನ್ನು ಪ್ಲಾಟ್‌ಫಾರಂನಲ್ಲೇ ಇಡಲಾಗಿತ್ತು. ಈ ಸಂದರ್ಭದಲ್ಲಿ ತಾಯಿ ಏಳದಿರುವುದನ್ನು ಕಂಡ ಕಂದ ಪದೇ ಪದೇ ಆಕೆಯನ್ನು ಎಬ್ಬಿಸಲು ಯತ್ನಿಸಿದೆ. 

"

ಎರಡೂವರೆ ವರ್ಷದ ಮಗು ಸಾವು

ಇದನ್ನು ಹೊರತುಪಡಿಸಿ ಇದೇ ರೈಲು ನಿಲ್ದಾಣದಲ್ಲಿ ಓರ್ವ ಎರಡೂವರೆ ವರ್ಷದ ಮಗು ಕೂಡಾ ಭೀಕರ ಬಿಸಿಲು ಹಾಗೂ ಹಸಿವಿನಿಂದ ಪ್ರಾಣ ಬಿಟ್ಟಿದೆ. ಈ ಮಗುವಿಗೆ ತಾಯಿ ಹಾಲು ಕೊಡಲು ಯತ್ನಿಸಿದ್ದು, ಆಕೆಗೂ ಊಟ ಸಿಗದ ಪರಿಣಾಮ ಹಾಲಿರಲಿಲ್ಲ ಎಂದು ಕುಟುಂಬ ಮಂದಿ ತಿಳಿಸಿದ್ದಾರೆ.