ಲಖನೌ(ಸೆ.30): 1992ರಲ್ಲಿ ಧ್ವಂಸಗೊಂಡಿದ್ದ ಅಯೋಧ್ಯೆ ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಬುಧವಾರ ಪ್ರಕಟವಾಗಲಿದೆ. ಇದರೊಂದಿಗೆ ಬಿಜೆಪಿ ಮುಖಂಡರಾದ ಎಲ್‌.ಕೆ. ಅಡ್ವಾಣಿ (92), ಮುರಳಿಮನೋಹರ ಜೋಶಿ (86), ಉಮಾಭಾರತಿ ಸೇರಿ 32 ಆರೋಪಿಗಳ ಹಣೆಬರಹ, ಘಟನೆ ನಡೆದ 28 ವರ್ಷ ಬಳಿಕ ನಿರ್ಧಾರವಾಗಲಿದೆ.

ಎಲ್ಲ 32 ಆರೋಪಿಗಳೂ ಖುದ್ದು ಹಾಜರಿರಬೇಕು ಎಂದು ಈಗಾಗಲೇ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಕೆ. ಯಾದವ್‌ ಸೂಚಿಸಿದ್ದಾರೆ. ಆದರೆ ಅನಾರೋಗ್ಯ, ಕೋವಿಡ್‌, ಕೋವಿಡ್‌ನಿಂದ ಈಗಷ್ಟೇ ಚೇತರಿಸಿಕೊಂಡಿರುವ ಕಾರಣ ಅಡ್ವಾಣಿ, ಜೋಶಿ, ಉಮಾಭಾರತಿ, ಕಲ್ಯಾಣ್‌ಸಿಂಗ್‌, ಚಂಪತ್‌ರಾಯ್‌ ಬುಧವಾರ ತೀರ್ಪು ಪ್ರಕಟದ ವೇಳೆ ನ್ಯಾಯಾಲಯದಲ್ಲಿ ಹಾಜರಿರುವುದಿಲ್ಲ.

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್‌, ವಿನಯ ಕಟಿಯಾರ್‌, ಸಾಧ್ವಿ ಋುತಾಂಬರಾ, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಚಂಪತ್‌ ರಾಯ್‌ ಅವರು ಪ್ರಕರಣದ ಇತರ ಆರೋಪಿಗಳಲ್ಲಿ ಸೇರಿದ್ದಾರೆ. ಆರೋಪ ರುಜುವಾತಾದರೆ ಗರಿಷ್ಠ 5 ವರ್ಷ ಜೈಲು ಸಜೆ ಆಗುವ ಸಾಧ್ಯತೆ ಇದೆ. ಆದರೂ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದ್ದೇ ಇದೆ.

ಪ್ರಕರಣದ ವಿಚಾರಣೆ ಅಂತ್ಯಕ್ಕೆ ಸೆಪ್ಟೆಂಬರ್‌ 30ರ ಗಡುವನ್ನು ಸುಪ್ರೀಂಕೋರ್ಟ್‌ ವಿಧಿಸಿತ್ತು. ಆ ಪ್ರಕಾರ ಸೆಪ್ಟೆಂಬರ್‌ 30ಕ್ಕೆ ತೀರ್ಪು ಪ್ರಕಟವಾಗುತ್ತಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ, 351 ಸಾಕ್ಷಿಗಳ ವಿಚಾರಣೆ ನಡೆಸಿ ಹಾಗೂ 600 ದಾಖಲೆಗಳನ್ನು ಪರಿಶೀಲಿಸಿ 48 ಆರೋಪಿಗಳ ವಿರುದ್ಧ ಚಾಜ್‌ರ್‍ಶೀಟ್‌ ಸಲ್ಲಿಸಿತ್ತು. ಈ ಪೈಕಿ ಈಗಾಗಲೇ 16 ಮಂದಿ ತೀರಿಹೋಗಿದ್ದಾರೆ.

ಕರಸೇವೆಯ ಹೆಸರಿನಲ್ಲಿ ಜಮಾಯಿಸಿದ್ದ ಬಲಪಂಥೀಯ ಕಾರ್ಯಕರ್ತರನ್ನು ಹುರಿದುಂಬಿಸಿ 1992ರ ಡಿ.6ರಂದು ಅಂದಿನ ವಿವಾದಿತ ರಾಮಜನ್ಮಭೂಮಿಯಲ್ಲಿದ್ದ ಮಸೀದಿ ಧ್ವಂಸಗೊಳಿಸಲು ಸಂಚು ರೂಪಿಸಲಾಗಿತ್ತು ಎಂಬುದು ಸಿಬಿಐ ದೋಷಾರೋಪ. ಆದರೆ ಇದನ್ನು ಅಡ್ವಾಣಿ ಸೇರಿದಂತೆ ಆಪಾದಿತರು ನಿರಾಕರಿಸಿದ್ದಾರೆ.