ರಾಂಪುರ ಶಾಸಕ ಆಜಂ ಖಾನ್ ಇನ್ನೂ ಜೈಲಿನಲ್ಲಿದ್ದಾರೆ. ಇವರ ವಿರುದ್ಧ ಒಟ್ಟು 87 ಪ್ರಕರಣಗಳಿದ್ದವು. 86 ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ. ಒಂದು ಪ್ರಕರಣದಲ್ಲಿ ಜಾಮೀನು ಸಿಗದ ಕಾರಣ ಬಿಡುಗಡೆಯಾಗುವ ದಿನಕ್ಕೆ ಎದುರು ನೋಡುತ್ತಿದ್ದಾರೆ.

ಲಕ್ನೋ (ಮೇ. 8): ಸೀತಾಪುರ ಜೈಲಿನಲ್ಲಿರುವ ಎಸ್‌ಪಿ ಶಾಸಕ ಅಜಂ ಖಾನ್ (Azam Khan) ಅವರ ಸಮಸ್ಯೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಕಳೆದ 26 ತಿಂಗಳಿನಿಂದ ಜೈಲಿನಲ್ಲಿರುವ ಅಜಂ ಖಾನ್ ಗೆ ಇತ್ತೀಚೆಗೆ ಜೈಲಿನಲ್ಲೇ ಮತ್ತೊಂದು ವಾರಂಟ್ (warrant ) ಜಾರಿಯಾಗಿದೆ. ಅದರಲ್ಲೂ ಸೀತಾಪುರ ಜೈಲಿಗೆ (Sitapur Jail)ಸೇರಿದ ದಿನದಿಂದ ಅಜಂ ಖಾನ್ ಗೆ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚಾಗುತ್ತಲೇ ಇದೆ. ಹೊಸ ವಾರಂಟ್ ನಲ್ಲಿ ಅವರ ಜಾಮೀನು ವಿಚಾರಣೆ ( Bail Hearing) ಮೇ 19ರಂದು ನಡೆಯಲಿದೆ.

ಸಮಾಜವಾದಿ ಪಕ್ಷದ (samajwadi party) ನಾಯಕ ಅಜಂ ಖಾನ್ ಅವರನ್ನು 2020ರ ಫೆಬ್ರವರಿ 7 ರಂದು ವಿವಿಧ ಪ್ರಕರಣಗಳ ಅಡಿಯಲ್ಲಿ ಜೈಲಿಗೆ ಹಾಕಲಾಗಿತ್ತು. ಅಜಂ ಖಾನ್ ಮಾತ್ರವಲ್ಲದೆ ಅವರ ಪತ್ನಿ ಹಾಗೂ ಪುತ್ರ ಅಬ್ದುಲ್ಲಾ ಅವರನ್ನೂ ಬಂಧಿಸಲಾಗಿತ್ತು. ಆದರೆ, ಅವರಿಬ್ಬರಿಗೂ ಜಾಮೀನು ಸಿಕ್ಕ ಹಿನ್ನಲೆಯಲ್ಲಿ ಜೈಲಿನಿಂದ ಹೊರಬಂದಿದ್ದರು. ಆದರೆ, ಅಜಂ ಖಾನ್ ಮಾತ್ರ ಇನ್ನೂ ಜೈಲಿನಲ್ಲೇ ಇದ್ದಾರೆ. ಅವರ ವಿರುದ್ಧ ಈವರೆಗೂ 87 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 86ರಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಒಂದು ಪ್ರಕರಣದಲ್ಲಿ ಜಾಮೀನು ಸಿಗದ ಕಾರಣ ಬಿಡುಗಡೆಯಾಗುವ ದಿನಕ್ಕೆ ಎದುರು ನೋಡುತ್ತಿದ್ದಾರೆ.

ಇತ್ತೀಚೆಗಷ್ಟೇ ಶಿವಪಾಲ್ ಯಾದವ್ ಮತ್ತು ಕಾಂಗ್ರೆಸ್ ನಾಯಕರು ಎಸ್‌ಪಿ ನಾಯಕತ್ವದೊಂದಿಗಿನ ಜಗಳದ ನಡುವೆ ಸೀತಾಪುರ ಜೈಲಿನಲ್ಲಿ ಅವರನ್ನು ಭೇಟಿಯಾಗಲು ಬಂದಿದ್ದರು. ಎಸ್‌ಪಿ ಶಾಸಕ ರವಿದಾಸ್ ಮೆಹ್ರೋತ್ರಾ ಅಜಂ ಅವರನ್ನು ಭೇಟಿ ಮಾಡಲು ಜೈಲಿಗೆ ಹೋಗಿದ್ದರು. ಆದರೆ. ಅಜಂ ಮಾತ್ರ ಮೆಹ್ರೋತ್ರಾ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದರು. ಮೂರ್ನಾಲ್ಕು ದಿನಗಳ ಕಾಲ ನಡೆದ ಈ ಸುತ್ತಿನ ಸಭೆಗಳು ರಾಜಕೀಯ ಪಡಸಾಲೆಯಲ್ಲಿ ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಈಗ ವಿಷಯ ತಣ್ಣಗಾಗುತ್ತಿದೆ. ಇದರ ನಡುವೆ ಶನಿವಾರದಂದು ರಾಂಪುರದಿಂದ ಪೊಲೀಸ್ ಠಾಣೆಯಿಂದ ಸೀತಾಪುರ ಜೈಲಿಗೆ ತಲುಪಿರುವ ವಾರಂಟ್, ಬಂಧಿಯಾಗಿರುವ ಅಜಮ್‌ಗೆ ಸಂಕಷ್ಟವನ್ನು ಹೆಚ್ಚಿಸಿದೆ.

ಶನಿವಾರ ರಾಂಪುರದಿಂದ ಸೀತಾಪುರ ಜೈಲಿಗೆ ವಾರಂಟ್ ಬಂದಿತ್ತು ಎಂದು ಜೈಲು ಅಧೀಕ್ಷಕ ಸುರೇಶ್ ಕುಮಾರ್ ಸಿಂಗ್ ಹೇಳಿದ್ದಾರೆ. ನಕಲಿ ದಾಖಲೆಗಳಿಗೆ ಕುರಿತಾದ ವಾರಂಟ್ ಇದಾಗಿದೆ. ನಕಲಿ ದಾಖಲೆ ನೀಡಿ ಶಾಲೆಯ ಮಾನ್ಯತೆ ಪಡೆದಿರುವ ಪ್ರಕರಣವೂ ಇದೆ ಎನ್ನಲಾಗಿದೆ. ವಾರಂಟ್‌ನಲ್ಲಿ ಈ ಪ್ರಕರಣದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮೇ 19ರವರೆಗೆ ಅಜಂಖಾನ್‌ನನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ವಾರೆಂಟ್‌ನಲ್ಲಿ ಉಲ್ಲೇಖವಿದೆ. ಈ ಸಂಬಂಧ ಮೇ 19ರಂದು ಆಜಂ ಖಾನ್‌ನನ್ನು ಕೋರ್ಟ್ ಗೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ: ರಾಂಪುರ ಪಬ್ಲಿಕ್ ಸ್ಕೂಲ್ ನಿರ್ಮಾಣ ಮಾಡುವ ಸಲುವಾಗಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದ ಆರೋಪದಲ್ಲಿ ಬಿಜೆಪಿ ನಾಯಕ ಅಕ್ಶ್ ಸಕ್ಸೇನಾ, ಅಜಂ ಖಾನ್ ವಿರುದ್ಧ ರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕಾರಣಕ್ಕಾಗಿ ರಾಂಪುರ ಪೊಲೀಸರು ಅಜಂ ಖಾನ್ ಗೆ ವಾರಂಟ್ ಹೊರಡಿಸಿದ್ದಾರೆ.

UP Elections 2022: ನವಾಬ್ VS ಅವಾಮ್ ಫೈಟ್ ನಲ್ಲಿ ಗೆದ್ದ ಅಜಂ!

ಇದಕ್ಕೂ ಮುನ್ನ ವಕ್ಫ್ ಬೋರ್ಡ್‌ನ ಆಸ್ತಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಆರೋಪವನ್ನು ಕೂಡ ಆಜಂ ಖಾನ್ ಎದುರಿಸಿದ್ದರು. ಈ ಪ್ರಕರಣದ ಕೊನೆಯ ವಿಚಾರಣೆಯನ್ನು 2021ರ ಡಿಸೆಂಬರ್ 4 ರಂದು ನಡೆಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಆ ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತಿದೆ. ಈ ವಕ್ಫ್ ಪ್ರಕರಣದಲ್ಲಿ ಅಜಂ ಖಾನ್‌ಗೆ ಜಾಮೀನು ಸಿಕ್ಕರೆ ಎರಡು ವರ್ಷಗಳ ನಂತರ ಸೀತಾಪುರ ಜೈಲಿನಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಬಿಜೆಪಿ ಮುಖಂಡರ ದೂರಿನ ನಂತರ ಅವರ ಹಾದಿ ಕಷ್ಟಕರವಾಗಿದೆ.

UP Elections : ಸೀತಾಪುರ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ ಅಜಮ್ ಖಾನ್!

ಅಂದಹಾಗೆ, ಸಮಾಜವಾದಿ ಪಕ್ಷದೊಳಗೆ ಆಜಂ ಖಾನ್‌ಗೆ ಸಂಬಂಧಿಸಿದಂತೆ ವಿಭಿನ್ನ ರಾಜಕೀಯ ಕಂಡು ಬರುತ್ತಿದೆ. ಅಜಂ ಖಾನ್ ಅವರ ಮಾಧ್ಯಮ ಸಲಹೆಗಾರ ಫಸಾಹತ್ ಅಲಿ ಅವರು ಅಖಿಲೇಶ್ ಯಾದವ್ ಮೇಲೆ ದೊಡ್ಡ ಆರೋಪ ಮಾಡಿದ್ದು ಇದಕ್ಕೆ ಉದಾಹರಣೆಯಾಗಿದೆ. ಆಜಂ ಖಾನ್ ಜೈಲಿನಿಂದ ಹೊರಬರುವುದನ್ನು ಎಸ್ಪಿ ಮುಖ್ಯಸ್ಥರು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.