ಅಯೋಧ್ಯೆ (ನ. 10): ಸುಪ್ರೀಂ ಕೋರ್ಟು ರಾಮಮಂದಿರ-ಬಾಬ್ರಿ ಮಸೀದಿ ವಿವಾದದ ತೀರ್ಪು ಪ್ರಕಟಿಸುತ್ತಿದ್ದಂತೆಯೇ ಅಯೋಧ್ಯೆಯಲ್ಲಿ ಶನಿವಾರ ನಿರಾಳ ವಾತಾವರಣ ಸೃಷ್ಟಿಯಾಗಿದ್ದು, ಭಾವನಾತ್ಮಕ ಪ್ರತಿಕ್ರಿಯೆಗಳು ಹರಿದುಬಂದವು. ನಗರದ ಹಿಂದೂ ಮತ್ತು ಮುಸ್ಲಿಮರು ತೀರ್ಪನ್ನು ಸ್ವಾಗತಿಸಿದ್ದಾರೆ.

ತೀರ್ಪು ಖುಷಿ ಕೊಟ್ಟಿದೆ ಎಂದು ಹಿಂದೂಗಳು ಹರ್ಷಿಸಿದರು. ತರಕಾರಿ ವ್ಯಾಪಾರಿ ಅಕ್ರಂ ಮಾತನಾಡಿ, ‘ಯಾವುದೇ ತೀರ್ಪಿಗೆ ನನ್ನ ಸ್ವಾಗತವಿದೆ. ಇಲ್ಲೆಲ್ಲೂ ತ್ವೇಷಮಯ ವಾತಾವರಣವಿಲ್ಲ’ ಎಂದರು. ನಗರದ ಹಲವು ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ನಿಯೋಜಿಸಿ, ಬ್ಯಾರಿಕೇಡ್‌ಗಳನ್ನು ಅಳವಡವಡಿಸಲಾಗಿತ್ತು. ಹೀಗಾಗಿ ಅನೇಕ ಭಾಗಗಳು ನಿರ್ಜನವಾಗಿದ್ದವು. ಉಳಿದ ಕೆಲವು ಭಾಗಗಳಲ್ಲಿ ಚಟುವಟಿಕೆ ಎಂದಿನಂತಿತ್ತು. ಜನರು ಮನೆಯಿಂದ ಹೊರಬರದೇ ಟೀವಿ ಮುಂದೆ ಕೂತು ತೀರ್ಪನ್ನು ಅವಲೋಕಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

ಅಯೋಧ್ಯೆ ತೀರ್ಪು: ಬಿಜೆಪಿಗೆ ಜೀವ ಕೊಟ್ಟಿದ್ದೇ ರಾಮಜನ್ಮಭೂಮಿ ಹೋರಾಟ

ಅಯೋಧ್ಯೆಯ ರಿಕಬ್‌ಗಂಜ್ ಪ್ರದೇಶದ ಪ್ರೀತಿ ಸಿಂಗ್ ಅವರು ತೀರ್ಪನ್ನು ಕೇಳಿ, ‘ದೇವರೇ ಧನ್ಯವಾದ ನಿನಗೆ’ ಎಂದು ಹೇಳಿದರು. ಇನ್ನು ಕೆಲವು ಕಡೆ ‘ಜೈಶ್ರೀರಾಂ’ ಘೋಷಣೆಗಳು ಹಾಗೂ ಪಟಾಕಿಗಳ ಸದ್ದು ಮೊಳಗಿದವು. ತಂದೆ- ತಾಯಂದಿರು ‘ಬೇಡ’ ಎಂದು ಹೇಳಿದರೂ ಕೇಳದ ಕೆಲವು ಮಕ್ಕಳು ಪಟಾಕಿ ಸಿಡಿಸುತ್ತಿದ್ದುದು ಕಂಡುಬಂತು.

ಇನ್ನು ತಾತ್ಕಾಲಿಕವಾಗಿ ನಿರ್ಮಿಸಲಾದ ‘ರಾಮಲಲ್ಲಾ’ ದೇವಾಲಯಕ್ಕೆ ಭೇಟಿ ನೀಡಿದ ಭಕ್ತಾದಿಗಳು ತೀರ್ಪಿನಿಂದ ಆನಂದ ತುಂದಿಲರಾದಂತೆ ಕಂಡುಬಂತು. ‘ನನಗೆ ತೀರಾ ಖುಷಿಯಾಗಿದೆ. ನನ್ನ ಕನಸು ನನಸಾಗಿದೆ. ದೇವರು ನನಗೆ ಆಶೀರ್ವದಿಸಿದ್ದಾನೆ’ ಎಂದು ಎಂದು ಭರತ್ ಸಿಂಗ್ ಎಂಬ ರಾಮಲಲ್ಲಾನ ಭಕ್ತರು ಹೇಳಿದರು. ‘500 ವರ್ಷಗಳ ದಾಸ್ಯ ಕೊನೆಗೂ ಅಂತ್ಯಗೊಂಡಿದೆ. ಈ ತೀರ್ಪನ್ನು ನಾನು ನಿರೀಕ್ಷಿಸಿರಲಿಲ್ಲ’ ಎಂದು ಹನುಮಾನ್‌ಗಢಿಯ ರಮೇಶ ದಾಸ್ ಎಂಬುವರು ಹರ್ಷಿಸಿದರು.

ರಾಮಾಯಣ, ಸ್ಕಂದ ಪುರಾಣ ರಾಮ ಜನಮಭೂಮಿಗೆ ಆಧಾರ: ಸುಪ್ರೀಂ

ಇನ್ನು ‘ನಾನು ರಾಮಭಕ್ತ’ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಹನುಮನ ವೇಷ ಧರಿಸಿ ಜನರನ್ನು ತಬ್ಬಿಕೊಂಡು ಸಂಭ್ರಮಿಸಿದ. ಹನುಮಾನ್‌ಗಢಿ ದೇವಾಲಯದ ಮಹಾಂತ ಸಂಜಯದಾಸ್ ಅವರು ಪಟಾಕಿ ಸಿಡಿಸಿದರು. ದೇವಾಲಯದ ಅರ್ಚಕ ಮಹಾಂತ ರಾಜುದಾಸ್ ಮಾತನಾಡಿ, ‘ಈ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್‌ಗೆ ಹಾಗೂ ಮುಖ್ಯ ನ್ಯಾಯಾಧೀಶರಿಗೆ ನನ್ನ ಅಭಿನಂದನೆಗಳು’ ಎಂದರು. ಮುಂಜಾಗ್ರತಾ ಕ್ರಮವಾಗಿ ಶಾಲಾ- ಕಾಲೇಜುಗಳಿಗೆ ಮಂಗಳವಾರದವರೆಗೆ ಉತ್ತರ ಪ್ರದೇಶದಲ್ಲಿ ರಜೆ ನೀಡಲಾಗಿತ್ತು.