ಅಯೋಧ್ಯೆ(ಜು.28): ಇಲ್ಲಿನ 70 ಎಕರೆಯ ರಾಮಜನ್ಮಭೂಮಿ ಸ್ಥಳದಲ್ಲಿ ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಲು ದಿನಗಣನೆ ಆರಂಭವಾಗುತ್ತಿದ್ದಂತೆ ಸುತ್ತಲಿನ ಮಸೀದಿಗಳು ಮತೀಯ ಸಾಮರಸ್ಯ ಸಾರುವ ಸಂದೇಶಗಳನ್ನು ಬಿತ್ತರಿಸತೊಡಗಿವೆ.

ರಾಮಮಂದಿರಕ್ಕೆ ಶಂಕುಸ್ಥಾಪನೆ: ಮುಸ್ಲಿಮರಿಂದಲೂ ಸಂಭ್ರಮಾಚರಣೆ!

ಸುಪ್ರೀಂಕೋರ್ಟ್‌ ನಿಗದಿಪಡಿಸಿರುವ ರಾಮಜನ್ಮಭೂಮಿಯ ಸುತ್ತಮುತ್ತ ಎಂಟು ಮಸೀದಿಗಳು ಹಾಗೂ ಎರಡು ಗೋರಿಗಳಿವೆ. ಇಲ್ಲಿ ಆಜಾನ್‌ ಹಾಗೂ ನಮಾಜ್‌ಗಳು ನಿತ್ಯ ನಡೆಯುತ್ತವೆ. ಅದಕ್ಕೆ ಸ್ಥಳೀಯ ಹಿಂದುಗಳು ಅಡ್ಡಿಪಡಿಸುವುದಿಲ್ಲ. ಅಂತೆಯೇ ರಾಮಮಂದಿರಕ್ಕೂ ಮುಸ್ಲಿಮರು ಅಡ್ಡಿಪಡಿಸಬಾರದು. ಹಿಂದುಗಳ ಜೊತೆಗೆ ಸಾಮರಸ್ಯದಿಂದ ಇರಬೇಕು ಎಂದು ಮಸೀದಿಗಳಿಂದ ಸಂದೇಶ ನೀಡಲಾಗುತ್ತಿದೆ.

'ಸ್ಥಳೀಯ ಕಾರ್ಪೊರೇಟರ್‌ ಹಾಜಿ ಅಸದ್‌ ಕೂಡ ಇದನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.

ರಾಮ ಮಂದಿರದ 2,000 ಅಡಿ ಆಳದಲ್ಲಿ ಇಡಲಾಗುತ್ತೆ ಟೈಂ ಕ್ಯಾಪ್ಸೂಲ್!

ಮುಸ್ಲಿಮರಿಂದಲೂ ಸಂಭ್ರಮಾಚರಣೆಗೆ ನಿರ್ಧಾರ

ಆ.5ರಂದು ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರುವ ವೇಳೆ ಸಂಭ್ರಮಾಚರಣೆ ನಡೆಸಲು ಮುಸ್ಲಿಮರು ಕೂಡ ನಿರ್ಧರಿಸಿದ್ದಾರೆ. ಉತ್ತರ ಪ್ರದೇಶದ ಫೈಜಾಬಾದ್‌ ಜಿಲ್ಲೆಯ ಮುಸ್ಲಿಮರು (ಇದೇ ಜಿಲ್ಲೆಯಲ್ಲಿ ಅಯೋಧ್ಯೆಯಿದೆ) ಅಂದು ಹಿಂದುಗಳೊಂದಿಗೆ ಸೇರಿ ಸಂಭ್ರಮಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಅಂದು ಬೇರೆ ಬೇರೆ ರಾಜ್ಯಗಳಿಂದ ಮುಸ್ಲಿಂ ಭಕ್ತರು ಇಟ್ಟಿಗೆಗಳೊಂದಿಗೆ ಅಯೋಧ್ಯೆಗೆ ಆಗಮಿಸಲಿದ್ದಾರೆ ಎಂದೂ ಹೇಳಿದ್ದಾರೆ.