Asianet Suvarna News Asianet Suvarna News

ಶ್ರೀರಾಮ ಮಾಡಿದ ರೀತಿ ಅಯೋಧ್ಯೆ ಅಭಿವೃದ್ಧಿಪಡಿಸಿ: ಮೋದಿ ಸೂಚನೆ!

* ಶ್ರೀರಾಮ ಮಾಡಿದ ರೀತಿ ಅಯೋಧ್ಯೆ ಅಭಿವೃದ್ಧಿಪಡಿಸಿ

* ಒಮ್ಮೆ ಅಲ್ಲಿಗೆ ಹೋಗಬೇಕು ಅಂತ ಜನರಿಗೆ ಅನ್ನಿಸಬೇಕು

* ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಧಾನಿ ಮೋದಿ ಸೂಚನೆ

Ayodhya A City By And For Every Indian PM At Meet With Yogi Adityanath pod
Author
Bangalore, First Published Jun 27, 2021, 7:48 AM IST

ನವದೆಹಲಿ(ಜೂ.27): ಭವ್ಯವಾದ ಶ್ರೀರಾಮ ಮಂದಿರದ ಜತೆಗೆ ಹಲವು ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿರುವ ಅಯೋಧ್ಯೆಯ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವರ್ಚುವಲ್‌ ಆಗಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘ನಮ್ಮ ಅತ್ಯುತ್ತಮ ಸಂಪ್ರದಾಯಗಳು ಹಾಗೂ ಅಭಿವೃದ್ಧಿ ರೂಪಾಂತರಗಳನ್ನು ಅಯೋಧ್ಯೆ ಪ್ರತಿಪಾದಿಸುವಂತಿರಬೇಕು. ಅಯೋಧ್ಯೆಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಿ ಬರಬೇಕು ಎಂದು ಯುವಪೀಳಿಗೆಗೆ ಉತ್ಕಟ ಭಾವ ಮೂಡುವಂತಿರಬೇಕು’ ಎಂದು ಸಲಹೆ ಮಾಡಿದರು.

ಅಯೋಧ್ಯೆಯಲ್ಲಿ ಸದ್ಯೋಭವಿಷ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಮುಂದುವರಿಯುತ್ತವೆ. ಆದರೆ ಅದೇ ವೇಳೆ, ಪ್ರಗತಿಯ ಮುಂದಿನ ದಾಪುಗಾಲಿಗೆ ಅಯೋಧ್ಯೆ ನಾಂದಿ ಹಾಡಬೇಕು. ಶ್ರೀರಾಮ ಯಾವ ರೀತಿ ಜನರನ್ನು ಒಗ್ಗೂಡಿಸಿದನೋ, ಅದೇ ರೀತಿ ಆರೋಗ್ಯಯುತ ಸಾರ್ವಜನಿಕ ಸಹಭಾಗಿತ್ವದ ಮಾರ್ಗದರ್ಶನದೊಂದಿಗೆ ಅದರಲ್ಲೂ ಯುವಕರ ಭಾಗೀದಾರಿಕೆಯಲ್ಲಿ ಅಯೋಧ್ಯೆಯ ಅಭಿವೃದ್ಧಿ ಕೆಲಸ ನಡೆಯಬೇಕು. ಅಯೋಧ್ಯೆ ಅಭಿವೃದ್ಧಿ ಕಾರ್ಯದಲ್ಲಿ ಯುವಕರ ಪ್ರತಿಭಾ ಕೌಶಲ್ಯವನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಿದರು ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಆಧ್ಯಾತ್ಮಿಕ ಕೇಂದ್ರ, ಜಾಗತಿಕ ಪ್ರವಾಸೋದ್ಯಮ ಹಬ್‌ ಹಾಗೂ ಸುಸ್ಥಿರ ಸ್ಮಾರ್ಟ್‌ ಸಿಟಿಯ ಅಂಶಗಳನ್ನು ಅಯೋಧ್ಯೆ ಒಳಗೊಂಡಿರಬೇಕು ಎಂದು ಮೋದಿ ಹೇಳಿದರು.

ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ, ರೈಲು ನಿಲ್ದಾಣ, ಬಸ್‌ ನಿಲ್ದಾಣ, ರಸ್ತೆ, ಹೆದ್ದಾರಿ ವಿಸ್ತರಣೆ ಕುರಿತು ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿ ಹಲವರು ಇದ್ದರು.

ಅಧ್ಯಾತ್ಮ, ಪ್ರವಾಸ ಸ್ಮಾರ್ಟ್‌ ಸಿಟಿ ಸ್ಪರ್ಶ

ಶ್ರೀರಾಮ ಯಾವ ರೀತಿ ಜನರನ್ನು ಒಗ್ಗೂಡಿಸಿದನೋ, ಅದೇ ರೀತಿ ಎಲ್ಲರ ಸಹಭಾಗಿತ್ವದಲ್ಲಿ ಅಯೋಧ್ಯೆ ಅಭಿವೃದ್ಧಿಯಾಗಬೇಕು. ಇದರಲ್ಲಿ ಯುವಕರ ಕೌಶಲ ಬಳಸಿಕೊಳ್ಳಬೇಕು. ಆಧ್ಯಾತ್ಮಿಕ ಕೇಂದ್ರ, ಜಾಗತಿಕ ಪ್ರವಾಸೋದ್ಯಮ ಹಬ್‌ ಹಾಗೂ ಸುಸ್ಥಿರ ಸ್ಮಾರ್ಟ್‌ ಸಿಟಿಯ ಅಂಶಗಳನ್ನು ಅಯೋಧ್ಯೆ ಒಳಗೊಂಡಿರಬೇಕು.

- ನರೇಂದ್ರ ಮೋದಿ, ಪ್ರಧಾನಿ

Follow Us:
Download App:
  • android
  • ios