ದೀದೀ ಮೇಲೆ ನಾಲ್ಕೈದು ಜನರಿಂದ ಹಲ್ಲೆ: ರಾತ್ರೋ ರಾತ್ರಿ ಮಮತಾ ಆಸ್ಪತ್ರೆಗೆ!
ನನ್ನ ಮೇಲೆ ಹಲ್ಲೆ: ಸಿಎಂ ಮಮತಾ ಆರೋಪ!| ನಂದಿಗ್ರಾಮದಲ್ಲಿ ನಾಲ್ಕೈದು ಜನರಿಂದ ಹಲ್ಲೆ: ಸಿಎಂ| ಘಟನೆ ಕುರಿತು ವರದಿ ಕೇಳಿದ ಚುನಾವಣಾ ಆಯೋಗ
ನಂದಿಗ್ರಾಮ(ಮಾ.11): ಚುನಾವಣಾ ನಾಮಪತ್ರ ಸಲ್ಲಿಕೆಗಾಗಿ ನಂದಿಗ್ರಾಮಕ್ಕೆ ಆಗಮಿಸಿದ್ದ ಸಿಎಂ ಮಮತಾ ಬ್ಯಾನರ್ಜಿ ಕಾಲಿಗೆ ಗಾಯ ಮಾಡಿಕೊಂಡ ಘಟನೆ ನಡೆದಿದೆ. ಇದೊಂದು ಉದ್ದೇಶಪೂರ್ವ ಹಲ್ಲೆ ಎಂದು ಆರೋಪಿಸಿರುವ ಮಮತಾ, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. ಅದರ ಬೆನ್ನಲ್ಲೇ ಚುನಾವಣಾ ಆಯೋಗ ಘಟನೆ ಕುರಿತು ಸ್ಥಳೀಯ ಅಧಿಕಾರಿಗಳಿಂದ ವರದಿ ಕೋರಿದೆ.
ನಾಮಪತ್ರ ಸಲ್ಲಿಸಿದ ಬಳಿಕ ಮಮತಾ ರೆಯಾಪುರ ಎಂಬಲ್ಲಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ಕಾರು ಹತ್ತುವ ಮುನ್ನ ಈ ಘಟನೆ ನಡೆದಿದೆ. ‘ನಾನು ಕಾರಿನ ಪಕ್ಕದಲ್ಲಿ ನಿಂತಿದ್ದೆ. ಈ ವೇಳೆ ನಾಲ್ಕೈದು ಜನ ಕಾರನ್ನು ಸುತ್ತುವರೆದು ನನ್ನನ್ನು ಬಲವಾಗಿ ತಳ್ಳಿದರು. ಈ ವೇಳೆ ಕಾರಿನ ಬಾಗಿಲು ತಾಗಿ ನನ್ನ ಕಾಲಿಗೆ ಬಲವಾದ ಗಾಯವಾಗಿದೆ. ಪರಿಣಾಮ ಕಾಲು ಊದಿಕೊಂಡು ನಡೆಯಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಬಳಿಕ ಭದ್ರತಾ ಸಿಬ್ಬಂದಿಗಳನ್ನು ನನ್ನನ್ನು ಹೊತ್ತುಕೊಂಡು ಬಂದರು. ಇದು ಉದ್ದೇಶಪೂರ್ವಕವಾಗಿ ನಡೆದ ದಾಳಿ. ಘಟನೆ ನಡೆದಾಗ ಸ್ಥಳದಲ್ಲೇ ಯಾವುದೇ ಸ್ಥಳೀಯ ಪೊಲೀಸರು ಇರಲಿಲ್ಲ. ಭದ್ರತೆ ಅತ್ಯಂತ ಕಳಪೆಯಾಗಿತ್ತು. ಇದನ್ನು ನೋಡಿದರೆ ಇದೊಂದು ಸಂಚು ಎಂದು ಕಾಣುತ್ತಿದೆ’ ಎಂದು ಮಮತಾ ಆರೋಪಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಗುರುವಾರ ಕೋಲ್ಕತಾಕ್ಕೆ ತೆರಳಬೇಕಿದ್ದ ಮಮತಾ ಬುಧವಾರ ರಾತ್ರಿಯೇ ತೆರಳಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಅವರಿಗೆ 5 ಜನರ ವೈದ್ಯರ ತಂಡ ಚಿಕಿತ್ಸೆ ಆರಂಭಿಸಿದೆ.
ಬಿಜೆಪಿ ವ್ಯಂಗ್ಯ:
ಈ ನಡುವೆ ಮಮತಾ ಆರೋಪವನ್ನು ನಾಟಕ ಎಂದಿರುವ ಬಿಜೆಪಿ, ಇದು ಚುನಾವಣೆಯಲ್ಲಿ ಅನುಕಂಪದ ಮತ ಪಡೆಯಲು ಮಮತಾ ಆಡಿದ ನಾಟಕ. ನಾಲ್ವರು ಐಪಿಎಸ್ ಅಧಿಕಾರಿಗಳು ಸಿಎಂ ಭದ್ರತೆ ಉಸ್ತುವಾರಿ ಹೊತ್ತಿರುತ್ತಾರೆ. ಹಲವಾರು ಜನ ಪೊಲೀಸರ ರಕ್ಷಣೆ ಸಿಎಂಗೆ ಇರುತ್ತದೆ. ಇಂಥ ಹಂತದಲ್ಲಿ ಅವರ ಬಳಿ ಯಾರಾದರೂ ಬರಲು ಸಾಧ್ಯವೇ? ಎಂದು ಬಿಜೆಪಿ ನಾಯಕ ಅರ್ಜುನ್‌ಸಿಂಗ್ ವ್ಯಂಗ್ಯವಾಡಿದ್ದಾರೆ.