ನವದೆಹಲಿ(ಜ.02): ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆಗಳ ಹಿಂಪಡೆತಕ್ಕೆ ಆಗ್ರಹಿಸಿ ರೈತರ ಭಾರೀ ಪ್ರತಿಭಟನೆಗೆ ಸಾಕ್ಷಿಯಾಗಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಕನಿಷ್ಠ 1.1 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇಷ್ಟು ಕನಿಷ್ಠ ಪ್ರಮಾಣದ ತಾಪಮಾನ ದಾಖಲಾಗಿರುವುದು ಕಳೆದ 15 ವರ್ಷಗಳಲ್ಲಿ ಇದೇ ಮೊದಲು.

ಇನ್ನು ಶುಕ್ರವಾರ ಬೆಳಗ್ಗೆಯಿಂದಲೇ ದಟ್ಟಮಂಜು ಆವರಿಸಿದ ಮಂದ ಬೆಳಕಿನ ಸಮಸ್ಯೆ ಉಂಟಾಗಿತ್ತು. ಇದರ ಪರಿಣಾಮ ಶೂನ್ಯ ಮೀಟರ್‌ ಗೋಚರ ಸ್ಥಿತಿ ನಿರ್ಮಾಣವಾಗಿ ಕೆಲಹೊತ್ತು ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಇನ್ನು 2006ರ ಜನವರಿ 8ರಂದು ದಿಲ್ಲಿಯಲ್ಲಿ 0.2 ಡಿಗ್ರಿ ಕನಿಷ್ಠ ತಾಪ ದಾಖಲಾಗಿತ್ತು. 1935ರ ಜನವರಿಯಲ್ಲಿ ದಾಖಲಾಗಿದ್ದ -0.6 ದಾಖಲೆಯ ಕನಿಷ್ಠ ತಾಪಮಾನವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಪಶ್ಚಿಮ ಭಾಗದಲ್ಲಿ ಆಗಲಿರುವ ಹವಾಮಾನ ವೈಪರಿತ್ಯದ ಪರಿಣಾಮ ಜನವರಿ 3ರಿಂದ 6ರವರೆಗೆ ದೆಹಲಿಯಲ್ಲಿ ಸ್ವಲ್ಪ ಪ್ರಮಾಣದ ಮಳೆ ಹಾಗೂ ಭಾರೀ ಚಳಿ ಅಂದರೆ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್‌ನಷ್ಟೇ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ