ಮಾಸ್ಕೋ(ಮಾ.24): ಅಂತರಿಕ್ಷಕ್ಕೆ ಮಾನವರನ್ನು ಕಳುಹಿಸುವ ಭಾರತದ ಚೊಚ್ಚಲ ಯೋಜನೆ ‘ಗಗನಯಾನ’ ಮಹತ್ವದ ಘಟ್ಟತಲುಪಿದೆ. ಬಾಹ್ಯಾಕಾಶಕ್ಕೆ ತೆರಳಲಿರುವ ನಾಲ್ವರು ಗಗನಯಾನಿಗಳಿಗೆ ರಷ್ಯಾದಲ್ಲಿ ಕಳೆದ ಒಂದು ವರ್ಷದಿಂದ ನೀಡಲಾಗುತ್ತಿದ್ದ ತರಬೇತಿ ಪೂರ್ಣಗೊಂಡಿದೆ.

ವಾಯುಪಡೆಯ ಈ ನಾಲ್ವರೂ ಅಧಿಕಾರಿಗಳು ಇನ್ನು ಭಾರತದಲ್ಲೇ ಗಗನಯಾನ ನೌಕೆಗೆ ಸಂಬಂಧಿಸಿದ ತರಬೇತಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅದನ್ನು ನಿರ್ವಹಿಸುವುದು ಹೇಗೆ ಎಂಬುದು ಸೇರಿ ಹಲವು ವಿಷಯಗಳನ್ನು ತಿಳಿದುಕೊಳ್ಳಲಿದ್ದಾರೆ.

ರಷ್ಯಾದ ಗಗರಿನ್‌ ಕಾಸ್ಮೋನಾಟ್‌ ಟ್ರೇನಿಂಗ್‌ ಸೆಂಟರ್‌ನಲ್ಲಿ ಭಾರತದ 4 ಗಗನಯಾತ್ರಿಗಳಿಗೆ 2020ರ ಫೆ.10ರಂದು ಒಂದು ವರ್ಷದ ತರಬೇತಿ ಆರಂಭವಾಗಿತ್ತು. ಕೊರೋನಾ ಕಾರಣ ಅದು ವಿಳಂಬವಾಗಿತ್ತು. ಇದೀಗ ಅವರ ತರಬೇತಿ ಮುಕ್ತಾಯಗವಾಗಿದ್ದು, ನಾಲ್ವರನ್ನೂ ಭೇಟಿ ಮಾಡಿರುವುದಾಗಿ ರಷ್ಯಾದ ಬಾಹ್ಯಾಕಾಶ ನಿಗಮದ ಮುಖ್ಯಸ್ಥ ಡಿಮಿಟ್ರಿ ರೊಗೋಜಿನ್‌ ತಿಳಿಸಿದ್ದಾರೆ.

ತರಬೇತಿ ಪಡೆದವರಲ್ಲಿ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಹಾಗೂ ಮೂವರು ವಿಂಗ್‌ ಕಮಾಂಡರ್‌ಗಳು ಇದ್ದಾರೆ. ಇವರಿಗೆ ತರಬೇತಿ ನೀಡುವ ಸಂಬಂಧ ಭಾರತ ಹಾಗೂ ರಷ್ಯಾ 2019 ಜೂನ್‌ನಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಭಾರತ 10 ಸಾವಿರ ಕೋಟಿ ರು. ವೆಚ್ಚದಲ್ಲಿ ಗಗನಯಾನ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ.