ನವದೆಹಲಿ(ಮೇ.30): ಖ್ಯಾತ ಜ್ಯೋತಿಷಿ ಬೆಜಾನ್‌ ದಾರೂವಾಲಾ (89) ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಕಳೆದ ವಾರ ನ್ಯುಮೋನಿಯಾ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ನಡೆದ ಪರೀಕ್ಷೆಯಲ್ಲಿ ಅವರಿಗೆ ಕೊರೋನಾ ಸೋಂಕು ಇದೆ ಎಂಬುವುದು ದೃಢಪಟ್ಟಿತ್ತು ಎಂದು ಮೂಲಗಳು ತಿಳಿಸಿವೆ.

ಎರಡು ದಿನದ ಹಿಂದೆ ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗಿತ್ತು. ದಾರೂವಾಲಾ ಅವರು ಪುತ್ರಿ ನಜ್ರೀನ್‌ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ದಾರೂವಾಲಾ ಅವರು ರಾಜಕಾರಣಿಗಳು ಸೇರಿದಂತೆ ಜನಪ್ರಿಯ ವ್ಯಕ್ತಿಗಳ ಜತೆ ನಂಟು ಹೊಂದಿದ್ದರು.

ಕೊರೋನಾದಿಂದ ಸಾವನ್ನಪ್ಪಿಲ್ಲ: ಪುತ್ರ

 

ದಾರುವುಲ್ಲಾ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬ ವದಂತಿಯನ್ನು ಅಲ್ಲಗಳೆದಿರುವ ಪುತ್ರ ನಸ್ತೂರ್‌, ‘ಅವರು ಸಾವನ್ನಪ್ಪಿದ್ದು ಕೊರೋನಾ ಸೋಂಕಿನಿಂದಲ್ಲ, ನ್ಯುಮೋನಿಯಾ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಅವರ ಮೆದುಳಿಗೆ ಆಮ್ಲಜನಕ ಸರಬರಾಜಾಗುತ್ತಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ದಾರುವಲ್ಲಾ ಅವರು ರಾಜಕಾರಣಿಗಳು ಸೇರಿದಂತೆ ಜನಪ್ರಿಯ ವ್ಯಕ್ತಿಗಳೊಂದಿಗೆ ಹತ್ತಿರದ ನಂಟು ಹೊಂದಿದ್ದರು. 2012ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ದಾರುವಲ್ಲಾ ಅವರ ಪುಸ್ತಕ ಬಿಡುಗಡೆ ಕಾರ‍್ಯಕ್ರಮಕ್ಕೆ ಹಾಜರಾಗಿದ್ದರು. ಹಾಗೆಯೇ ಇವರು ನರೇಂದ್ರ ಮೋದಿ ಅದೃಷ್ಟದ ಸಿಂಹ ಎಂದು ಪ್ರಶಂಸಿಸಿದ್ದರು ಮತ್ತು 2050ರಲ್ಲಿ ಭಾರತ ಚೀನಾದಂತಾಗಲಿದೆ ಎಂದು ಭವಿಷ್ಯ ನುಡಿದಿದ್ದರು.