ಸಂಸದರ ಆಸ್ತಿ ಮೌಲ್ಯ ಏರಿಕೆ: ರಮೇಶ್ ಜಿಗಜಿಗಣಿ ನಂ. 1, ಪಿ.ಸಿ. ಮೋಹನ್ ನಂ. 2..!
ಸತತ 3 ಬಾರಿ ಆಯ್ಕೆಯಾದ 71 ಸಂಸದರ ಮೌಲ್ಯ ಅಂದಾಜು ಶೇ. 286 ರಷ್ಟು ಏರಿಕೆಯಾಗಿದೆ. ರಮೇಶ್ ಜಿಗಜಿಗಣಿ ಅವರ ಆಸ್ತಿ ಮೌಲ್ಯ ಶೇ. 4189 ರಷ್ಟು ಹೆಚ್ಚಾಗಿದ್ದರೆ, ಮೋಹನ್ ಆಸ್ತಿ ಮೌಲ್ಯ ಶೇ. 1306 ರಷ್ಟು ಏರಿಕೆಯಾಗಿದೆ.
ನವದೆಹಲಿ (ಫೆಬ್ರವರಿ 5, 2023): 2009ರಿಂದ 2019ರ ಅವಧಿಯಲ್ಲಿ ಸತತ 3 ಬಾರಿ ಆಯ್ಕೆ ಆದ 71 ಲೋಕಸಭಾ ಸದಸ್ಯರ ಆಸ್ತಿ ಮೌಲ್ಯ ಶೇ.286ರಷ್ಟು ಏರಿಕೆಯಾಗಿದೆ. ಏರಿಕೆಯ ಆಧಾರದಲ್ಲಿ ಕರ್ನಾಟಕದ ಇಬ್ಬರು ಸಂಸದರಾದ ರಮೇಶ ಜಿಗಜಿಣಗಿ ಹಾಗೂ ಪಿ.ಸಿ. ಮೋಹನ್ ಮೊದಲ 2 ಸ್ಥಾನದಲ್ಲಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.
ವಿಜಯಪುರ (Vijayapur) ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ (BJP MP) ರಮೇಶ್ ಚಂದಪ್ಪ ಜಿಗಜಿಣಗಿ (Ramesh Chandappa Jigajinagi) ಅವರ ಆಸ್ತಿ ಮೌಲ್ಯ 2009ರಿಂದ 2019ರ ನಡುವೆ ಶೇ.4,189ರಷ್ಟು ಹೆಚ್ಚಾಗಿದ್ದು, ಮೊದಲ ಸ್ಥಾನದಲ್ಲಿದ್ದಾರೆ. 2019ರಲ್ಲಿ ಇವರ ಆಸ್ತಿ ಮೌಲ್ಯ 1.18 ಕೋಟಿ ರೂ.ನಷ್ಟಿತ್ತು. ಇದು 2014ರಲ್ಲಿ 8.94 ಕೋಟಿ ರೂ.ಗೆ, 2019ರಲ್ಲಿ 50.41 ಕೋಟಿ ರೂ.ಗೆ ಏರಿಕೆಯಾಗಿದೆ.
ಇನ್ನು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ.ಮೋಹನ್ (P.C. Mohan) ಆಸ್ತಿ ಮೌಲ್ಯ ಶೇ.1,306ರಷ್ಟು ಹೆಚ್ಚಳವಾಗಿದ್ದು 2ನೇ ಸ್ಥಾನದಲ್ಲಿದ್ದಾರೆ. 2009ರಲ್ಲಿ 5.37 ಕೋಟಿ ರೂ. ಇದ್ದ ಇವರ ಆಸ್ತಿ, 2019ರಲ್ಲಿ 75.55 ಕೋಟಿ ರೂ.ಗೆ ಏರಿಕೆಯಾಗಿದೆ. ಈ ವರ್ಷಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ವೇಳೆ ಅವರೇ ಸಲ್ಲಿಸಿದ ಅಫಿಡವಿಟ್‌ಗಳನ್ನು ಆಧಾರವಾಗಿಟ್ಟುಕೊಂಡು ಈ ವರದಿ ತಯಾರಿಸಲಾಗಿದೆ.
ಉಳಿದಂತೆ ಉತ್ತರ ಪ್ರದೇಶದ ಪಿಲಿಭೀತ್‌ನ ಬಿಜೆಪಿ ಸಂಸದ ವರುಣ್ ಗಾಂಧಿ ಆಸ್ತಿ 4.92 ಕೋಟಿ ರೂ.ನಿಂದ 60.32 ಕೋಟಿ ರೂ.ಗೆ ಏರಿಕೆಯಾಗಿದೆ. ಬಠಿಂಡಾದ ಶಿರೋಮಣಿ ಅಕಾಲಿದಳದ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಅವರ ಆಸ್ತಿ 60.31 ಕೋಟಿ ರೂ.ನಿಂದ 217.99 ಕೋಟಿ ರೂ.ಗೆ ಏರಿಕೆಯಾಗಿದೆ. ಬಾರಾಮತಿಯ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಆಸ್ತಿ 51.53 ಕೋಟಿ ರೂ.ನಿಂದ 140.88 ಕೋಟಿ ರೂ.ಗೆ ಏರಿಕೆಯಾಗಿದೆ.
ಯಾರ ಆಸ್ತಿ ಎಷ್ಟು ಏರಿಕೆ?
- ರಮೇಶ್ ಜಿಗಜಿಣಗಿ ಆಸ್ತಿ 2009ರಿಂದ 2019ರ ನಡುವೆ 1.18ರಿಂದ 50.41 ಕೋಟಿ ರೂ. ಗೆ ಏರಿಕೆ
- ಪಿ.ಸಿ.ಮೋಹನ್ ಆಸ್ತಿ ಮೌಲ್ಯ 5.37ರಿಂದ 75.55 ಕೋಟಿ ರೂ.ಗೆ ಹೆಚ್ಚಳ