ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಕ್ಲೀನ್ ಸ್ವೀಪ್ ಸ್ಟಾಂಡ್ ಅಪ್ ಕಾಮಿಡಿಯನ್ ಮಾನ್ ಮುಂದಿನ ಸಿಎಂ ಯಾರು ಈ ಭಗವಂತ್ ಸಿಂಗ್ ಮಾನ್, ನಾನು ಕುಡಿಯಲ್ಲ ಎಂದಿದ್ದೇಕೆ?

ಚಂಡಿಗಢ(ಮಾ.10): ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿದೆ. ಅರವಿಂದ್ ಕೇಜ್ರಿವಾಲ್ ಪಕ್ಷ ಇದೀಗ ದೆಹಲಿಯಿಂದ ಪಂಜಾಬ್‌ ವರೆಗೆ ವಿಸ್ತರಿಸಿದೆ. ಆಪ್ ಮೊದಲೇ ಘೋಷಿಸಿದಂತೆ ಭಗವಂತ್ ಸಿಂಗ್ ಮಾನ್ ಮುಂದಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ತಯಾರಿ ನಡೆಸಿದ್ದಾರೆ. ಸದ್ಯ ಅಂತರ್ಜಾಲದಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗುತ್ತಿರುವ ಭಗವಂತ್ ಸಿಂಗ್ ಮಾನ್ ಯಾರು ಅನ್ನೋದನ್ನು ಹುಡುಕಾಟ ನಡೆಸುತ್ತಿದ್ದಾರೆ. 

ಆಪ್ ನಾಯಕ, ಪಂಜಾಬ್ ಮುಂದಿನ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಮಾಜಿ ಕಾಮಿಡಿಯನ್. ಸ್ಟಾಂಡ್ ಅಪ್ ಕಾಮಿಡಿಗಳ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಭಗವಂತ್ ಸಿಂಗ್ ಮಾನ್, ಪಂಜಾಬ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 1994ರಲ್ಲಿ ಕಚ್ಚೇರಿ ಅನ್ನೋ ಪಂಜಾಬಿ ಸಿನಿಮಾದಲ್ಲಿ ನಟಿಸಿ, ಸಿನಿ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಇನ್ನು 2000ನೇ ಇಸವಿಯಲ್ಲಿ ದಿ ಗ್ರೇಟ್ ಇಂಡಿಯನ್ ಲಾಫರ್ ಚಾಲೆಂಜ್ ಶೋ ಮೂಲಕ ಸ್ಟಾಂಡ್ ಅಪ್ ಕಾಮಿಡಿಯನ್ ಆಗಿ ಗಮನಸೆಳೆದಿದ್ದರು.

Assembly Elections 2022 Result: 4 ರಾಜ್ಯಗಳಲ್ಲಿ ಮತ್ತೆ ಬಿಜೆಪಿ, ಪಂಜಾಬ್‌ನಲ್ಲಿ ಆಮ್‌ ಆದ್ಮಿ

ಸ್ಟಾಂಡ್ ಅಪ್ ಕಾಮಿಡಿಯನ್ ಆಗಿ ಗುರುತಿಸಿಕೊಂಡಿದ್ದ ಭಗವಂತ್ ಸಿಂಗ್ ಮಾನ್ ಬಳಿಕ ರಾಜಕೀಯಕ್ಕೆ ಎಂಟ್ರಿಕೊಟ್ಟರು. ಆಮ್ ಆದ್ಮಿ ಪಾರ್ಟಿಯಲ್ಲಿ ಕಾರ್ಯಕರ್ತನಾಗಿ, ನಾಯಕನಾಗಿ ಭಡ್ತಿ ಪಡೆದ ಮಾನ್ ಇದೀಗ ಮುಖ್ಯಮಂತ್ರಿಯಾಗುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಕುಡಿತ ಬಿಟ್ಟಿದ್ದೇನೆ, ಮಾನ್ ಹೇಳಿಕೆ ವೈರಲ್
ಭಗವಂತ್ ಸಿಂಗ್ ಮಾನ್ ಕುಡಿತದ ಚಟಕ್ಕೆ ಒಳಗಾಗಿದ್ದಾರೆ ಅನ್ನೋ ಆರೋಪ ಪದೇ ಪದೇ ಕೇಳಿಬಂದಿದೆ. 2015ರಲ್ಲಿ ಫರಿದಾಕೋಟ್‌ನಲ್ಲಿನ ಸಂತಾಪ ಸಭೆಗೆ ಕುಡಿದು ಆಗಮಿಸಿದ ವಿಡಿಯೋ ವೈರಲ್ ಆಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಭಗವಂತ್ ಸಿಂಗ್ ಮಾನ್ ಭಾಷಣ ಬಾರಿ ವೈರಲ್ ಆಗಿತ್ತು. ಈ ಭಾಷಣಕ್ಕೂ ಮೊದಲು ಕಂಠಪೂರ್ತಿ ಕುಡಿದಿದ್ದರು ಅನ್ನೋ ಆರೋಪ ಕೇಳಿಬಂದಿ್ತ್ತು. ಇದಾದ ಬಳಿಕ ಬಿಜೆಪಿ ಭಗವಂತ್ ಸಿಂಗ್ ಮಾನ್ ನರ್ಕೋಟಿಕ್ಸ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿತ್ತು.

ಏಎಪಿ ಹಾಸ್ಯಮಯ ವಿಡಿಯೋ... ಒಂದು ಗಂಟೆಯಲ್ಲಿ ಲಕ್ಷಾಂತರ ಜನರಿಂದ ವೀಕ್ಷಣೆ

ಪಂಜಾಬ್ ವಿಧಾನಸಭಾ ಚುನಾವಣಾ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ತಾನು ಕುಡಿಯುವುದಿಲ್ಲ. ಎಲ್ಲವನ್ನೂ ಬಿಟ್ಟಿರುವುದಾಗಿ ಹೇಳಿಕೆ ನೀಡಿದ್ದರು.ಇನ್ನು ನಾಮ ಪತ್ರ ಸಲ್ಲಿಸುವಾಗ ನೀಡಿರುವ ಅಫಿಡವಿತ್‌ನಲ್ಲಿ 2 ಕೋಟಿ ರೂಪಾಯಿ ಒಟ್ಟು ಆಸ್ತಿ ಘೋಷಿಸಿದ್ದಾರೆ. ಇದರಲ್ಲಿ 48.1 ಲಕ್ಷ ರೂಪಾಯಿ ಚರಾಸ್ತಿ ಹಾಗೂ 1.5 ಕೋಟಿ ರೂಪಾಯಿ ಸ್ಥಿರಾಸ್ಥಿ ಹೊಂದಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ. 18.3 ಲಕ್ಷ ರೂಪಾಯಿ ಆದಾಯ ಹೊಂದಿದ್ದಾರೆ ಎಂದಿದ್ದಾರೆ.

ಜನರೇ ನಿರ್ಧರಿಸಿದ ಸಿಎಂ:
ಪಂಜಾಬ್‌ ಚುನಾವಣೆಗೆ ಮುನ್ನ ಪಕ್ಷವು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುವ ಅಧಿಕಾರವನ್ನು ಜನರಿಗೆ ನೀಡುವ ಮೂಲ ಹೊಸ ಸಂಪ್ರದಾಯ ಆರಂಭಿಸಿತ್ತು. ಜನರೇ ತಮ್ಮ ಮುಖ್ಯಮಂತ್ರಿ ಆರಿಸಲಿದ್ದಾರೆ ಅನ್ನೋ ಅಭಿಯಾನ ಆರಂಭಿಸಲಾಗಿತ್ತು. 21.59 ಲಕ್ಷ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಆಮ್ ಆದ್ಮಿ ಪಾರ್ಟಿ ಭಗವಂತ್ ಸಿಂಗ್ ಮಾನ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು.

ಇದೇ ವೇಳೆ ‘ನಾನು ಈ ಚುನಾವಣೆಯಲ್ಲಿ ಭಾಗವಹಿಸುತ್ತಿಲ್ಲ. ಭಗವಂತ ಮಾನ್‌ ನನ್ನ ಕಿರಿಯ ಸಹೋದರನಿದ್ದಂತೆ. ಈಗಾಗಲೇ ನಡೆದಿರುವ ಸಮೀಕ್ಷೆಗಳ ಪ್ರಕಾರ ಆಪ್‌ ಹೆಚ್ಚಿನ ಸ್ಥಾನ ಗಳಿಸಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಹಾಗಾಗಿ ಜನರಿಗೆ ಅವರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅಧಿಕಾರ ನೀಡಿದ್ದೇವೆ’ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು.

ಪಂಜಾಬ್ ವಿಧಾನಸಭಾ ಚುನಾವಣಾ ಫಲಿತಾಂಶ
ಆಮ್ ಆದ್ಮಿ ಪಾರ್ಟಿ 83 ಸ್ಥಾನಗಲ್ಲಿ ಮುನ್ನಡೆ
ಕಾಂಗ್ರೆಸ್ 16 ಸ್ಥಾನಗಳಲ್ಲಿ ಮುನ್ನಡೆ
ಬಿಜೆಪಿ ಒಂದು ಸ್ಥಾನದಲ್ಲಿ ಮುನ್ನಡೆ