Asianet Suvarna News Asianet Suvarna News

Assembly Elections 2022: ಇನ್ನೆರಡು ತಿಂಗಳು, ಕಾಂಗ್ರೆಸ್‌ಗೆ ಪಂಜಾಬ್‌ ಉಳಿಸಿಕೊಳ್ಳೋ ಸವಾಲು!

* ಇನ್ನೆರಡು ತಿಂಗಳು ಉ.ಪ್ರ., ಉತ್ತರಾಖಂಡ, ಗೋವಾ, ಪಂಜಾಬ್‌, ಮಣಿಪುರ ಕದನ ಕುತೂಹಲ

* ಪಂಚರಾಜ್ಯ ಚುನಾವಣೆ: 4 ಕಡೆ ಬಿಜೆಪಿಗೆ ಸತ್ವಪರೀಕ್ಷೆ

Assembly Elections 2022 Big Challenge For BJP To Get Victory Again in 4 States pod
Author
Bangalore, First Published Jan 9, 2022, 8:46 AM IST

ನವದೆಹಲಿ(ಜ.09): ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್‌, ಮಣಿಪುರ ಚುನಾವಣೆ ಘೋಷಣೆಯಾಗಿವೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಮಿಕ್ಕೆಲ್ಲ ಕಡೆ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ ಈ ಚಳಿಗಾಲದ ಅಂತ್ಯಕ್ಕೆ ನಡೆಯುವ ಈ ಚುನಾವಣಾ ಸಮರ ಬಿಜೆಪಿಗೆ ಸತ್ವಪರೀಕ್ಷೆ ಆಗುವುದರಲ್ಲಿ ಸಂದೇಹವೇ ಇಲ್ಲ. ಈಗಾಗಲೇ ಮೋದಿ ಸೇರಿದಂತೆ ಬಿಜೆಪಿ ಘಟಾನುಘಟಿ ನಾಯಕರು ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಮ್ಯಾರಥಾನ್ ಪ್ರವಾಸ ಕೈಗೊಂಡು ಮತದಾರರನ್ನು ಸೆಳೆಯುವ ಯತ್ನ ಮಾಡಿದ್ದಾರೆ. ಅಮಿತ್ ಶಾ, ನಡ್ಡಾ, ಯೋಗಿ ಹೀಗೆ ಬಿಜೆಪಿಗರು ತಮ್ಮ ರಾಜ್ಯ ಉಳಿಸಿಕೊಳ್ಳಲು ಬೇಕಾದ ತಯಾರಿ ನಡೆಸಿದ್ದಾರೆ, 

ಉತ್ತರಪ್ರದೇಶ: ಯೋಗಿ ಗೆದ್ದರೆ ದಾಖಲೆ

* ಒಟ್ಟು ಸ್ಥಾನ 403

* ಬಹುಮತ 202

ಒಮ್ಮೆ ಆಡಳಿತ ನಡೆಸಿದವರು ಪುನರಾಯ್ಕೆಯಾದ ನಿದರ್ಶನ ಮೂರೂವರೆ ದಶಕಗಳಲ್ಲಿ ಇಲ್ಲ. ಯೋಗಿ ಆದಿತ್ಯನಾಥ ನೇತೃತ್ವದಲ್ಲಿ ಬಿಜೆಪಿ ಮರು ಆಯ್ಕೆಯಾದರೆ ದಾಖಲೆ ನಿರ್ಮಾಣವಾಗುತ್ತದೆ. 2017ರಲ್ಲಿ ಐತಿಹಾಸಿಕ 312 ಸ್ಥಾನ ಗೆದ್ದಿದ್ದ ಬಿಜೆಪಿ ಅಭಿವೃದ್ಧಿ ಹೆಸರಲ್ಲಿ ಮತ ಕೇಳುತ್ತಿದೆ. ಕಳೆದ ಬಾರಿ 47 ಸ್ಥಾನಕ್ಕೆ ಕುಸಿದಿದ್ದ ಸಮಾಜವಾದಿ ಪಕ್ಷ 15 ಸಣ್ಣಪುಟ್ಟಪಕ್ಷಗಳ ಜತೆ ಸೇರಿ ಪೈಪೋಟಿ ನೀಡುತ್ತಿದೆ. ಸಮೀಕ್ಷೆಗಳು ಬಿಜೆಪಿಗೇ ಬಹುಮತ ಎಂದು ಭವಿಷ್ಯ ನುಡಿಯುತ್ತಿವೆ. ರೈತ ಹೋರಾಟ, ಕೋವಿಡ್‌ ನಿರ್ವಹಣೆ ಬಿಜೆಪಿಗೆ ಮುಳುವಾದರೆ, ಕುಟುಂಬ ರಾಜಕೀಯ ಎಸ್ಪಿಗೆ ತೊಡಕು. ಬಿಎಸ್ಪಿ ಹೆಚ್ಚು ಸದ್ದು ಮಾಡುತ್ತಿಲ್ಲ. ಕಾಂಗ್ರೆಸ್‌ ಮೇಲೆತ್ತಲು ಪ್ರಿಯಾಂಕಾ ವಾದ್ರಾ ಬೆವರು ಹರಿಸುತ್ತಿದ್ದಾರೆ. ಅಸಾದುದ್ದೀನ್‌ ಒವೈಸಿ, ಎಡರಂಗ, ತೃಣಮೂಲ ಕಾಂಗ್ರೆಸ್‌ ಕೂಡ ಸ್ಪರ್ಧಿಸುತ್ತಿವೆ. ಕಳೆದ 3 ಅವಧಿಗಳಿಂದ ಜನರು ಯಾವುದಾದರೂ ಒಂದು ಪಕ್ಷಕ್ಕೆ ಭರ್ಜರಿ ಬಹುಮತ ನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಅದು ಮುಂದುವರಿಯುತ್ತಾ ಎಂಬುದೇ ಕುತೂಹಲ.

ಪಂಜಾಬ್‌: ಮೂರನೇ ಶಕ್ತಿ ಉದಯ?

* ಒಟ್ಟು ಸ್ಥಾನ 117

* ಬಹುಮತ 59

ಒಮ್ಮೆ ಕಾಂಗ್ರೆಸ್‌ ಗೆದ್ದರೆ, ಮರು ಅವಧಿಗೇ ಶಿರೋಮಣಿ ಅಕಾಲಿ ದಳ ಆಯ್ಕೆಯಾಗುತ್ತಿದ್ದ ರಾಜ್ಯ ಇದು. 2012ರಲ್ಲಿ ಸತತ 2ನೇ ಅವಧಿಗೆ ಗೆದ್ದು ಅಕಾಲಿದಳ ಇತಿಹಾಸ ಸೃಷ್ಟಿಸಿತ್ತು. 10 ವರ್ಷ ವಿಪಕ್ಷದಲ್ಲಿದ್ದ ಕಾಂಗ್ರೆಸ್‌ 2017ರಲ್ಲಿ 77 ಸ್ಥಾನ ಗೆದ್ದು ಅಧಿಕಾರಕ್ಕೇರಿತು. ಆಗ ಆಮ್‌ ಆದ್ಮಿ ಪಕ್ಷ ಗೆದ್ದೇ ಬಿಡುತ್ತೆ ಎಂಬ ವಾತಾವರಣ ಇತ್ತಾದರೂ, 20 ಸ್ಥಾನ ಗಳಿಸಿ ವಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 5 ವರ್ಷದಲ್ಲಿ ಸಾಕಷ್ಟುಬದಲಾವಣೆ ಆಗಿವೆ. ಕೃಷಿ ಕಾಯ್ದೆ ವಿರೋಧಿಸಿ ಬಿಜೆಪಿ ಸಂಗಡವನ್ನು ಅಕಾಲಿ ದಳ ತೊರೆದಿದೆ. ಕಾಂಗ್ರೆಸ್‌ ಜತೆಗಿನ ಕಿತ್ತಾಟದಲ್ಲಿ ಅಮರೀಂದರ್‌ ಸಿಎಂ ಪಟ್ಟತ್ಯಜಿಸಿದ್ದಾರೆ. ಹೊಸ ಪಕ್ಷ ಸ್ಥಾಪಿಸಿ, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಸಮೀಕ್ಷೆಗಳು ಆಪ್‌ ಗೆಲ್ಲಲಿವೆ ಎನ್ನುತ್ತಿವೆ. ಆದರೆ ಕಾಂಗ್ರೆಸ್‌ ‘ದಲಿತ ಸಿಎಂ’ ಅಸ್ತ್ರ ಪ್ರಯೋಗಿಸಿದೆ. ಕೃಷಿ ಕಾಯ್ದೆ ರದ್ದತಿಯಿಂದ ಲಾಭ ನಿರೀಕ್ಷಿಸುತ್ತಿದೆ. ರೈತ ಸಂಘಟನೆಗಳು ಕೂಡ ಚುನಾವಣೆಗೆ ಇಳಿಯಲು ನಿರ್ಧರಿಸಿವೆ. ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್‌- ಅಕಾಲಿ ದಳ ಹೊರತಾಗಿ ಈ ರಾಜ್ಯದಲ್ಲಿ ಮೂರನೇ ಶಕ್ತಿ ಉದಯಿಸುತ್ತಾ ಎಂಬುದು ತಿಳಿಯಬೇಕಿದೆ.

ಉತ್ತರಾಖಂಡ: ಸತತ 2 ಸಲ ಯಾರೂ ಗೆದ್ದಿಲ್ಲ

* ಒಟ್ಟು ಸ್ಥಾನ 70

* ಬಹುಮತ 36

2000ರಲ್ಲಿ ಅಸ್ತಿತ್ವಕ್ಕೆ ಬಂದ ರಾಜ್ಯ. ಈವರೆಗೆ ಯಾವುದೇ ಪಕ್ಷವೂ ಸತತ 2ನೇ ಬಾರಿಗೆ ಗೆದ್ದಿಲ್ಲ. ಪದೇ ಪದೇ ಸಿಎಂಗಳು ಬದಲಾಗುವುದು ಇಲ್ಲಿನ ವಿಶೇಷತೆ. ಕಳೆದ ಬಾರಿ ಭರ್ಜರಿ 57 ಸ್ಥಾನ ಗೆದ್ದಿದ್ದ ಬಿಜೆಪಿ, ತ್ರಿವೇಂದ್ರ ಸಿಂಗ್‌ ರಾವತ್‌ರನ್ನು ಸಿಎಂ ಮಾಡಿತ್ತು. 2021ರ ಮಾಚ್‌ರ್‍ನಲ್ಲಿ ಅವರನ್ನು ಕೆಳಗಿಳಿಸಿ ತೀರಥ್‌ ಸಿಂಗ್‌ ರಾವತ್‌ಗೆ ಪಟ್ಟಕಟ್ಟಿತು. ಮೂರೇ ತಿಂಗಳಿಗೆ ಅವರಿಂದ ರಾಜೀನಾಮೆ ಕೊಡಿಸಿ ಪುಷ್ಕರ್‌ ಸಿಂಗ್‌ ಧಾಮಿ ಅವರನ್ನು ಹುದ್ದೆಗೇರಿಸಿದೆ. 2017ರಲ್ಲಿ 11 ಸ್ಥಾನಕ್ಕೆ ಕುಸಿದಿದ್ದ ಕಾಂಗ್ರೆಸ್‌, ಈಗ ಅಧಿಕಾರಕ್ಕೇರಲು ಹರೀಶ್‌ ರಾವತ್‌ ನೇತೃತ್ವದಲ್ಲಿ ಹೋರಾಡುತ್ತಿದೆ. ಆಮ್‌ ಆದ್ಮಿ ಪಕ್ಷ ಎಲ್ಲರಿಗಿಂತಲೂ ಮೊದಲೇ ಸಿಎಂ ಅಭ್ಯರ್ಥಿ, ಹುರಿಯಾಳು ಪಟ್ಟಿಪ್ರಕಟಿಸಿದೆ. ಕಳೆದ ಬಾರಿಯಷ್ಟುಸ್ಥಾನ ಗಳಿಸದಿದ್ದರೂ ಬಿಜೆಪಿ ಬಹುಮತ ಪಡೆಯಲಿದೆ ಎಂದು ಸಮೀಕ್ಷೆ ಹೇಳುತ್ತಿವೆ. ಎಸ್ಪಿ, ಬಿಎಸ್ಪಿ ಕೂಡ ಇಲ್ಲಿ ಸ್ಪರ್ಧಿಸಲಿವೆ. ಸತತ 2ನೇ ಬಾರಿಗೆ ಬಿಜೆಪಿ ಗೆಲ್ಲುತ್ತಾ? ಅದನ್ನು ಅಧಿಕಾರದಿಂದ ಕಾಂಗ್ರೆಸ್‌ ಹೊರದಬ್ಬುತ್ತಾ ಎಂಬುದು ಚುನಾವಣೆಯಲ್ಲಿ ಗೊತ್ತಾಗಬೇಕಿದೆ.

ಗೋವಾ: ಬಿಜೆಪಿಯೋ? ಅತಂತ್ರ ಸ್ಥಿತಿಯೋ?

* ಒಟ್ಟು ಸ್ಥಾನ 40

* ಬಹುಮತ 21

ಅತಿ ಹೆಚ್ಚು ರಾಜಕೀಯ ಅಸ್ಥಿರತೆ ಕಂಡಿರುವ ರಾಜ್ಯ. ಇಲ್ಲಿ ರಾಜಕೀಯವಾಗಿ ಏನು ಬೇಕಾದರೂ ಆಗಬಹುದು. 2017ರ ಚುನಾವಣೆಯಲ್ಲಿ 17 ಸ್ಥಾನ ಗೆದ್ದು ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿತ್ತು. ಅಧಿಕಾರಕ್ಕೇರಲು ತಂತ್ರಗಾರಿಕೆ ರೂಪಿಸುತ್ತಿದ್ದಾಗಲೇ, 13 ಸ್ಥಾನ ಗಳಿಸಿದ್ದ ಬಿಜೆಪಿ ತ್ವರಿತ ತಂತ್ರಗಾರಿಕೆ ಮೆರೆದ ಫಲ ಮನೋಹರ ಪರ್ರಿಕರ್‌ ಸಿಎಂ ಆದರು. ಪರ್ರಿಕರ್‌ ಕಾಲವಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದು. ಕಾಂಗ್ರೆಸ್ಸಿನ 17 ಶಾಸಕರಲ್ಲಿ 15 ಮಂದಿ ಪಕ್ಷಾಂತರ ಮಾಡಿದ್ದಾರೆ. ಸದ್ಯ ಆ ಪಕ್ಷದಲ್ಲಿರುವುದು ಇಬ್ಬರೇ ಶಾಸಕರು. ಈ ಬಾರಿ ಆಮ್‌ ಆದ್ಮಿ ಪಕ್ಷ ಹಾಗೂ ತೃಣಮೂಲ ಕಾಂಗ್ರೆಸ್‌ ಇಲ್ಲಿ ಬೇರೂರಲು ಯತ್ನಿಸುತ್ತಿವೆ. ಹಲವು ನಾಯಕರಿಗೆ ಗಾಳ ಹಾಕಿವೆ. ಸಮೀಕ್ಷೆ ಪ್ರಕಾರ, ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ, ಕಾಂಗ್ರೆಸ್‌ ವಿಪಕ್ಷ ಸ್ಥಾನವನ್ನೂ ಕಳೆದುಕೊಳ್ಳಲಿದ್ದು, ಆ ಸ್ಥಾನ ಆಪ್‌ ಪಾಲಾಗಲಿದೆ. ತೃಣಮೂಲ ಕಾಂಗ್ರೆಸ್‌ ಹೋರಾಡಲಿದೆ. ಹಲವು ಪಕ್ಷಗಳು ಪೈಪೋಟಿಗಿಳಿದಿರುವ ಕಾರಣ ಅತಂತ್ರ ಸ್ಥಿತಿ ಏನಾದರೂ ಉದ್ಭವಿಸುತ್ತಾ ಎಂಬ ಪ್ರಶ್ನೆ ಇದೆ.

ಮಣಿಪುರ: ಬಿಜೆಪಿ ವರ್ಸಸ್‌ ಕಾಂಗ್ರೆಸ್‌ ಫೈಟ್‌

* ಒಟ್ಟು ಸ್ಥಾನ 60

* ಬಹುಮತ 31

ಅತ್ಯಂತ ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿ 2017ರಲ್ಲಿ ಅಧಿಕಾರಕ್ಕೇರಿದ ರಾಜ್ಯ. 15 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್‌ 28 ಸ್ಥಾನ ಜಯಿಸಿ ಬೀಗಿತ್ತು. ಆದರೆ 21 ಸ್ಥಾನ ಗಳಿಸಿದ್ದ ಬಿಜೆಪಿ ಸಣ್ಣ ಪುಟ್ಟಪಕ್ಷಗಳ ಬೆಂಬಲವನ್ನು ಫಟಾಫಟ್‌ ಪಡೆದು ಇತಿಹಾಸದಲ್ಲೇ ಮೊದಲ ಬಾರಿಗೆ ಅಧಿಕಾರಕ್ಕೇರಿತ್ತು. ಇದು ತ್ವರಿತ ತಂತ್ರಗಾರಿಕೆಯ ಫಲ. ಕಾಂಗ್ರೆಸ್‌ ಶಾಸಕರ ನಿರಂತರ ಪಕ್ಷಾಂತರ ನಡೆದಿದ್ದು, ಆ ಪಕ್ಷದ ಬಲ 15ಕ್ಕೆ ಕುಸಿದಿದೆ. ಉತ್ತಮ ಆಡಳಿತದ ಹೆಸರಿನಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ. ಆದರೆ ಸಮೀಕ್ಷೆಗಳು ಬಿಜೆಪಿ ದೊಡ್ಡ ಪಕ್ಷವಾದರೂ, ವಿಧಾನಸಭೆ ಅತಂತ್ರವಾಗುತ್ತದೆ ಎಂದು ಭವಿಷ್ಯ ಹೇಳುತ್ತಿವೆ. ಕಾಂಗ್ರೆಸ್ಸಿಗೆ ಮಾಜಿ ಸಿಎಂ ಒಕ್ರೊಮ್‌ ಇಬೋಬಿ ಸಿಂಗ್‌ ವರವೂ ಹೌದು, ಭಾರವೂ ಹೌದು. ಅವರು ಜನಪ್ರಿಯ ನಾಯಕ. ಆದರೆ ವಯೋಸಹಜ ಕಾರಣಗಳಿಂದ ಹೆಚ್ಚು ಸಕ್ರಿಯರಾಗಿಲ್ಲ ಎಂಬ ದೂರುಗಳಿವೆ. ಕಳೆದ ಬಾರಿಯಂತಹ ಸ್ಥಿತಿ ಸೃಷ್ಟಿಯಾದರೆ ಸಣ್ಣಪುಟ್ಟಪಕ್ಷಗಳು ಯಾವ ಕಡೆ ವಾಲುತ್ತವೆ ಎಂಬ ಕುತೂಹಲವಿದೆ.

Follow Us:
Download App:
  • android
  • ios