ಗುವಾಹಟಿ[ಫೆ.04]: ಅಸ್ಸಾಂ ದಿಬ್ರುಗಢ ಜಿಲ್ಲೆಯ ನಹರ್ಕಟಿಯಾ ಎಂಬ ಪಟ್ಟಣದಲ್ಲಿರುವ ಸಣ್ಣ ನದಿಯೊಂದರಲ್ಲಿ ಕಚ್ಚಾ ತೈಲ ಪೂರೈಕೆ ಕೊಳವೆಯೊಂದು ಸ್ಫೋಟಗೊಂಡ ಪರಿಣಾಮ ಎರಡು ದಿನಗಳಿಂದ ನಿರಂತರ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಅಸ್ಸಾಂನ ಉತ್ತರ ಭಾಗದ ಆಯಿಲ್‌ ಇಂಡಿಯಾ ತೈಲ ನಿಕ್ಷೇಪದಿಂದ ಕಚ್ಚಾ ತೈಲವನ್ನು ಸಂಗ್ರಹಿಸಿ, ಪೈಪ್‌ ಲೈನ್‌ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಅಪರೂಪದ ಉಪಕರಣ ದೋಷದಿಂದಾಗಿ ಪೈಪ್‌ಲೈನ್‌ನಿಂದ ಕಚ್ಚಾತೈಲ ಸೋರಿಕೆ ಆಗಿತ್ತು. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಆಯಿಲ್‌ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಕಚ್ಚಾ ತೈಲ ನದಿಯಲ್ಲಿ ಸೋರಿಕೆ ಆದ ಬಳಿಕ ಸ್ಥಳೀಯರು ಬೆಂಕಿಯ ಕಿಡಿಯನ್ನು ಹೊತ್ತಿಸಿದ್ದರಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿ ಆಗಿಲ್ಲ.