Asianet Suvarna News Asianet Suvarna News

'ಈ ದೇಶವನ್ನು ಹಿಂದುಸ್ಥಾನವನ್ನಾಗಿ ಮಾಡಿದ್ದು ಮೊಘಲರು..' ಕಾಂಗ್ರೆಸ್‌ ನಾಯಕನ ವಿವಾದಿತ ಹೇಳಿಕೆ!

ಮೊಘಲರಿಲ್ಲದಿದ್ದರೆ ದೇಶದ ಸ್ವಾತಂತ್ರ್ಯ ಹೋರಾಟ ಅಪೂರ್ಣವಾಗುತ್ತಿತ್ತು ಎಂದು ಅಸ್ಸಾಂನ ಬಾರ್ಪೇಟಾ ಕ್ಷೇತ್ರದ ಲೋಕಸಭಾ ಸಂಸದ ಅಬ್ದುಲ್ ಖಾಲಿಕ್ ವಿವಾದಿತ ಹೇಳಿಕೆ ನೀಡಿದ್ದಾರೆ. ಮೊಘಲರು ಭಾರತದಲ್ಲಿ ಕೆಂಪು ಕೋಟೆ ಮತ್ತು ತಾಜ್ ಮಹಲ್‌ನಂತಹ ಸ್ಮಾರಕಗಳನ್ನು ನಿರ್ಮಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಹೇಳಿದ್ದಾರೆ.
 

Assam Mughals shaped India I am proud of them controversial statement of Congress MP Abdul Khaliq san
Author
First Published Aug 30, 2022, 3:22 PM IST

ನವದೆಹಲಿ (ಆ. 30): ಬಿಡಿ ಬಿಡಿ ಸಂಸ್ಥಾನಗಳಾಗಿದ್ದ ಈ ದೇಶವನ್ನು ಒಟ್ಟುಗೂಡಿಸಿ ಹಿಂದೂಸ್ತಾನವನ್ನಾಗಿ ಮಾಡಿದ್ದು ಮೊಘಲರು, ಅದಕ್ಕಾಗಿ ಅವರ ಬಗ್ಗೆ ಹೆಮ್ಮೆ ಇದೆ ಎಂದು ಕಾಂಗ್ರೆಸ್‌ ನಾಯಕ ಅಸ್ಸಾಂನ ಬಾರ್ಪೇಟಾ ಕ್ಷೇತ್ರದ ಸಂಸದ ಅಬ್ದುಲ್‌ ಖಾಲಿಕ್‌ ವಿವಾದಿತ ಹೇಳಿಕೆ ನೀಡಿದ್ದಾರೆ. ಔರಂಗಜೇಬ, ಬಾಬರ್‌ನಂಥ ಮೊಘಲ್‌ ದೊರೆಗಳನ್ನು ದಾಳಿಕೋರರು ಎಂದು ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ಹೇಳುತ್ತಿರುವ ಹೊತ್ತಿನಲ್ಲಿ ಅಬ್ದುಲ್‌ ಖಾಲಿಕ್‌ ಈ ವಿವಾದಿತ ಮಾತನ್ನು ಹೇಳಿದ್ದಾರೆ. ಭಾರತವನ್ನು ಹಿಂದೂಸ್ತಾನದ ರೂಪದಲ್ಲಿ ನೀಡಿದ್ದು ಮೊಘಲರು. ಅದಕ್ಕೂ ಮುನ್ನ ಭಾರತವು ಬಿಡಿ ಬಿಡಿ ರಾಜ್ಯಗಳಾಗಿ ವಿಭಜನೆಯಾಗಿತ್ತು. ಆದ್ದರಿಂದ ನಾನು ಮೊಘಲರ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ. ನಾನು ಮೊಘಲನೂ ಅಲ್ಲ. ಅವರ ವಂಶಸ್ಥನೂ ಅಲ್ಲ. ಆದರೆ, ಮೊಘಲರು ಏಕ್‌ ಹಿಂದೂಸ್ತಾನವನ್ನು ನೀಡಿದ್ದಾರೆ. ಮೊಘಲರು ಈ ದೇಶವನ್ನು ಆಳದೇ ಇದ್ದಿದ್ದರೆ, ಅವರ ಹೋರಾಟಗಳು ಇಲ್ಲದೇ ಇದ್ದಿದ್ದರೆ, ನಮ್ಮ ಸ್ವಾತಂತ್ರ್ಯ ಹೋರಾಟ ಅಪೂರ್ಣವಾಗುತ್ತಿತ್ತು ಎಂದು ಹೇಳಿದ್ದಾರೆ. ಅದಲ್ಲದೆ, ದೇಶದಲ್ಲಿ ನಾವು ಹೆಮ್ಮೆ ಎಂದು ಹೇಳಿಕೊಳ್ಳುವ ಎಲ್ಲಾ ಸ್ಮಾರಕಗಳನ್ನು ಕಟ್ಟಿದ್ದು ಮೊಘಲರು. ಅದು ಕೆಂಪುಕೋಟೆಯೇ ಇರಬಹುದು, ತಾಜ್‌ ಮಹಲೇ ಇರಬಹುದು. ಇದನ್ನು ಕಟ್ಟಿರುವುದು ಮೊಘಲರು ಎಂದಿದ್ದಾರೆ.

ಕೆಂಪುಕೋಟೆಯಲ್ಲಿ ಧ್ವಜ ಯಾಕೆ ಹಾರಿಸ್ತೀರಿ: ಭಾರತದಲ್ಲಿ ಕೆಂಪು ಕೋಟೆ ಮತ್ತು ತಾಜ್ ಮಹಲ್‌ನಂತಹ ಸ್ಮಾರಕಗಳನ್ನು ಮೊಘಲರು ನಿರ್ಮಿಸಿದ್ದಾರೆ ಮತ್ತು ಆದ್ದರಿಂದ ದೇಶಕ್ಕೆ ಅವರ ಕೊಡುಗೆಯನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ದೇಶದ ಪ್ರತಿ ಪ್ರಧಾನಿ (Prime Minister) ಕೂಡ ರಾಷ್ಟ್ರ ಧ್ವಜವನ್ನು ಕೆಂಪುಕೋಟೆಯಿಂದಲೇ (Red Fort) ಹಾರಿಸಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮೊಘಲರ ಕೊಡುಗೆ ಎಷ್ಟಿದೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ ಎಂದಿದ್ದಾರೆ. ನಾವು ಮೊಘಲರನ್ನು ತುಂಬಾ ದ್ವೇಷಿಸುವುದಾದರೆ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ (Tri Colour) ಹಾರಿಸುವುದು ಸರಿಯಲ್ಲ ಎಂದು ಸಂಸದ (Abdul Khaliq) ಹೇಳಿದ್ದಾರೆ.


ಹಿಮಾಂತ ಬಿಸ್ವಾಗೆ ಮೊಘಲರೆಂದರೆ ಅಲರ್ಜಿ: ಇದೇ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ವಿರುದ್ಧವೂ ಅಬ್ದುಲ್‌ ಖಾಲಿಕ್‌ ಕಿಡಿಕಾರಿದ್ದಾರೆ. ಹಿಮಾಂತ ಬಿಸ್ವಾ ಶರ್ಮಗೆ ಮೊಘಲರೆಂದರೆ ಅಲರ್ಜಿ. ಮೊಘಲರ ಸಮಯದಿಂದಲೂ ದೆಹಲಿ ಭಾರತದ ರಾಜಧಾನಿಯಾಗಿತ್ತು. ಆದರೆ, ಇದನ್ನೂ ಈಗಲೂ ನಾವು ಮುಕ್ತವಾಗಿ ಹೇಳಬೇಕು ಎನ್ನುವುದೇ ವಿಪರ್ಯಾಸ. ಆದರೆ, ಇದೇ ವಾಸ್ತವ ಎಂದಿದ್ದಾರೆ.

ಹಿಂದೂ ರಾಜರ, ಸಾಮ್ರಾಜ್ಯಗಳ ಬಗ್ಗೆ ಇತಿಹಾಸಕಾರರೇಕೆ ಬರೆದಿಲ್ಲ ಎಂದು ಪ್ರಶ್ನಿಸಿದ ಅಮಿತ್ ಶಾ!

ಅಹೋಮ್‌ಗಳು ಮೊಘಲರನ್ನು ಸೋಲಿಸಿದ 1671 ರ ಸಾರೈಘಾಟ್ ಕದನದ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಖಾಲಿಕ್‌, 'ಅಸ್ಸಾಂ ಅನ್ನು ವೈಯಕ್ತಿಕ ಸಾಮರ್ಥ್ಯದಲ್ಲಿ ಮೊಘಲರು ಆಕ್ರಮಣ ಮಾಡಲಿಲ್ಲ. ಆಗ ಮೊಘಲರು ಭಾರತವನ್ನು ಆಳುತ್ತಿದ್ದರು ಮತ್ತು ಅಸ್ಸಾಂ (Assam) ಮೇಲೆ ದಾಳಿ ಮಾಡಿದ್ದರು. ನಮ್ಮ ಅಹೋಮ್ ಸೈನ್ಯವು ಅವರನ್ನು ಪದೇ ಪದೇ ಸೋಲಿಸಿತು ಎಂದು ಹೇಳಿದ್ದಾರೆ. ನೆನಪಿಡಿ, ಆ ಸಮಯದಲ್ಲಿ ಅಸ್ಸಾಂ ಪ್ರತ್ಯೇಕ ರಾಜ್ಯವಾಗಿತ್ತು ಮತ್ತು ಭಾರತವು ವಿಭಿನ್ನ ರಾಷ್ಟ್ರವಾಗಿತ್ತು. ಭಾರತ ಮತ್ತು ಅಸ್ಸಾಂ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈಗ, ಅಸ್ಸಾಂ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಪರಿಸ್ಥಿತಿ ವಿಭಿನ್ನವಾಗಿದೆ. ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹತ್ತು ವಿಧಾನಸಭಾ ಕ್ಷೇತ್ರಗಳಿವೆ. ಅವರಲ್ಲಿ ಏಳು ಮಂದಿ ಅಹೋಮ್ ರಾಜ್ಯದಲ್ಲಿದ್ದರು ಮತ್ತು ಉಳಿದವರು ಬೇರೆ ರಾಜ್ಯದಲ್ಲಿದ್ದರು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

'ಭಾರತದ ಆರ್ಥಿಕತೆ ಕುಸಿಯಲು ಮೊಘಲರು, ಬ್ರಿಟಿಷರೇ ಕಾರಣ'

ಅಸ್ಸಾಂ ಸರ್ಕಾರದ ವೆಬ್‌ಸೈಟ್ ಪ್ರಕಾರ, ಸರೈಘಾಟ್ ಕದನವು ಮೊಘಲರು ಮತ್ತು ಅಹೋಮ್ ಸೈನ್ಯದ ನಡುವಿನ ನೌಕಾ ಯುದ್ಧವಾಗಿತ್ತು. ಅಹೋಮ್‌ಗಳು ಬಳಸುತ್ತಿದ್ದ ಚಿಕ್ಕ ದೋಣಿಗಳಿಗೆ ಹೋಲಿಸಿದರೆ ಮೊಘಲರು ದೊಡ್ಡ ದೋಣಿಗಳನ್ನು ಹೊಂದಿದ್ದರು. ಹಾಗಿದ್ದರೂ ಅಹೋಮ್‌, ಮೊಘಲರ ವಿರುದ್ಧ ಗೆಲುವು ಸಾಧಿಸಲು ಯಶಸ್ವಿಯಾಗಿತ್ತು ಎಂದು ತಿಳಿಸಿದೆ.

 

Follow Us:
Download App:
  • android
  • ios