ಹಿಂದಿ ಬರಲ್ಲ ಎಂದ ಸಂಸದೆಗೆ ನೀವು ಭಾರತೀಯರಾ? ಅಂತ ಕೇಳಿದ ಸಿಐಎಸ್‌ಎಫ್‌ ಅಧಿಕಾರಿ!| ಸಿಐಎಸ್‌ಎಫ್‌ನಿಂದ ಕಠಿಣ ಕ್ರಮದ ಭರವಸೆ| ಇದು ಹಿಂದಿ ಹೇರಿಕೆ: ಸಂಸದೆ ಕನಿಮೋಳಿ

ನವದೆಹಲಿ(ಆ.10): ಹಿಂದಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ ಡಿಎಂಕೆ ಸಂಸದೆ ಕನಿಮೋಳಿ ಅವರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಅಧಿಕಾರಿಯೊಬ್ಬ ‘ನೀವು ಭಾರತೀಯರಾ’ ಎಂದು ಕೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದು ಹಿಂದಿ ಹೇರಿಕೆ ಎಂದು ಕನಿಮೋಳಿ ಅವರು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಅಧಿಕಾರಿ ವಿರುದ್ಧ ಸೂಕ್ರ ಕ್ರಮ ಜರುಗಿಸುವುದಾಗಿ ಸಿಐಎಸ್‌ಎಫ್‌ ಸ್ಪಷ್ಟನೆ ನೀಡಿದೆ.

ಹೊಸ ಶಿಕ್ಷಣ ನೀತಿ ನವಭಾರತಕ್ಕೆ ಭವ್ಯ ಮುನ್ನುಡಿ

ದೆಹಲಿಗೆ ತೆರಳುವ ಸಲುವಾಗಿ ಕನಿಮೋಳಿ ಅವರು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ತೆರಳಿದ್ದರು. ಭದ್ರತಾ ಸಿಬ್ಬಂದಿ ಹಿಂದಿಯಲ್ಲಿ ಮಾತನಾಡುತ್ತಿದ್ದ ಕಾರಣ, ‘ತಮಿಳು ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಿ. ಏಕೆಂದರೆ, ನನಗೆ ಹಿಂದಿ ಬರುವುದಿಲ್ಲ’ ಎಂದು ಹೇಳಿದರು. ಆ ವೇಳೆ ಸಿಐಎಸ್‌ಎಫ್‌ ಅಧಿಕಾರಿ, ‘ನೀವು ಭಾರತೀಯರಾ?’ ಎಂದು ಪ್ರಶ್ನೆ ಮಾಡಿದ್ದಾನೆ.

Scroll to load tweet…

ಇದನ್ನು ಟ್ವೀಟ್‌ ಮೂಲಕ ತಿಳಿಸಿ ಖಂಡಿಸಿರುವ ಕನಿಮೋಳಿ, ಭಾರತೀಯತೆಗೆ ಹಿಂದಿ ತಿಳಿದಿರುವುದು ಎಂದಿನಿಂದ ಸರಿಸಮಾನವಾಯಿತು ಎಂದು ಪ್ರಶ್ನಿಸಿದ್ದಾರೆ.