Asianet Suvarna News Asianet Suvarna News

ಹೊಸ ಶಿಕ್ಷಣ ನೀತಿ ನವಭಾರತಕ್ಕೆ ಭವ್ಯ ಮುನ್ನುಡಿ

ಭಾರತೀಯ ಶಿಕ್ಷಣ ವ್ಯವಸ್ಥೆಗೆ ಗುರು-ಶಿಷ್ಯ ಪರಂಪರೆಯ ಭದ್ರವಾದ ಅಡಿಪಾಯವಿತ್ತು. ಆಧುನಿಕ ಶಾಲಾ ಶಿಕ್ಷಣದಲ್ಲಿನ ಲೋಪಗಳನ್ನು ನೋಡಿದರೆ, ಹಳೆಯ ಗುರುಕುಲ ಪದ್ಧತಿ ಕೈಬಿಟ್ಟು ಹೋಗಿದ್ದು ಪ್ರಮಾದ ಎಂದೆನಿಸಿದರೆ ಆಶ್ಚರ್ಯವೇನಿಲ್ಲ. ಏಕೆಂದರೆ ಆಗ ಶಿಕ್ಷಣದ ಉದ್ದೇಶ ಕಲಿಸುವುದು ಮಾತ್ರವಾಗಿತ್ತು. ಆದರೆ ಕಾಲಕ್ಕೆ ತಕ್ಕಂತೆ ಸಮಾಜ ಬದಲಾಗುತ್ತಾ ಹೋದಂತೆ ಶಿಕ್ಷಣ ವ್ಯವಸ್ಥೆಯೂ ಬದಲಾಗಿದೆ. ಈ ಬದಲಾಣೆ ಅನಿವಾರ್ಯವೂ ಹೌದು.

all you need to know about national education policy 2020
Author
Bengaluru, First Published Aug 3, 2020, 10:20 AM IST

ಭಾರತೀಯ ಶಿಕ್ಷಣ ವ್ಯವಸ್ಥೆಗೆ ಗುರು-ಶಿಷ್ಯ ಪರಂಪರೆಯ ಭದ್ರವಾದ ಅಡಿಪಾಯವಿತ್ತು. ಆಧುನಿಕ ಶಾಲಾ ಶಿಕ್ಷಣದಲ್ಲಿನ ಲೋಪಗಳನ್ನು ನೋಡಿದರೆ, ಹಳೆಯ ಗುರುಕುಲ ಪದ್ಧತಿ ಕೈಬಿಟ್ಟು ಹೋಗಿದ್ದು ಪ್ರಮಾದ ಎಂದೆನಿಸಿದರೆ ಆಶ್ಚರ್ಯವೇನಿಲ್ಲ. ಏಕೆಂದರೆ ಆಗ ಶಿಕ್ಷಣದ ಉದ್ದೇಶ ಕಲಿಸುವುದು ಮಾತ್ರವಾಗಿತ್ತು. ಆದರೆ ಕಾಲಕ್ಕೆ ತಕ್ಕಂತೆ ಸಮಾಜ ಬದಲಾಗುತ್ತಾ ಹೋದಂತೆ ಶಿಕ್ಷಣ ವ್ಯವಸ್ಥೆಯೂ ಬದಲಾಗಿದೆ. ಈ ಬದಲಾಣೆ ಅನಿವಾರ್ಯವೂ ಹೌದು.

ಜ್ಞಾನಭಂಡಾರವನ್ನು ವಿಸ್ತರಿಸಲು ಮತ್ತು ಹೊಸ ಸವಾಲುಗಳನ್ನು ಎದುರಿಸಲು, ಮಾರ್ಪಾಡುಗಳು ತೀರಾ ಅಗತ್ಯ. ಈಗಿನ ಶಿಕ್ಷಣ ವ್ಯವಸ್ಥೆ ಕೂಡ ಕಾಲಕಾಲಕ್ಕೆ ಬದಲಾವಣೆಯ ಗಾಳಿಗೆ ಒಡ್ಡಿಕೊಳ್ಳಬೇಕಿತ್ತು. ಆದರೆ ಕಳೆದ 34 ವರ್ಷಗಳಿಂದ ಬದಲಾವಣೆಯ ಪರ್ವ ಬರಲೇ ಇಲ್ಲ. ಜಾಗತಿಕವಾಗಿ ಮನ್ನಣೆ ಪಡೆದಿರುವ, ಅಭೂತಪೂರ್ವ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಾಂತಿಕಾರಕ ನಿರ್ಧಾಗಳನ್ನು ಕೈಗೊಂಡಿದ್ದಾರೆ. ಇದೀಗ ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ನಿಟ್ಟಿನಲ್ಲಿ ಬಹುವರ್ಷಗಳ ನಿರೀಕ್ಷೆಯನ್ನು ನಿಜಗೊಳಿಸಿದ್ದಾರೆ. ಇದೇ ರಾಷ್ಟ್ರೀಯ ಶಿಕ್ಷಣ ನೀತಿ-2020.

ಆ. 15 ರೊಳಗೆ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ; ಕಳೆದ ಬಾರಿ ಅವಕಾಶ ವಂಚಿತರಿಗೆ ಆದ್ಯತೆ

ವ್ಯಕ್ತಿತ್ವ ನಿರ್ಮಾಣದ ಉದ್ದೇಶ

ಶಿಕ್ಷಣ ನೀತಿ ಕೇವಲ ಶಿಕ್ಷಣ ವ್ಯವಸ್ಥೆಯನ್ನು ಬದಲಿಸುವ ಕಾನೂನು ಅಲ್ಲ. ಇದು ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬದಲಿಸುವ ಮಾರ್ಗಸೂಚಿಯೂ ಹೌದು. ಹೊಸ ಪೀಳಿಗೆಯ ಮಕ್ಕಳ ಭವಿಷ್ಯ ಹೇಗಿರಬೇಕೆಂಬ ದೂರದೃಷ್ಟಿಯನ್ನು ಇಟ್ಟುಕೊಂಡು ರಚಿಸಿರುವ ನೀಲ ನಕ್ಷೆ. ಭಾರತೀಯ ಸಾಂಪ್ರದಾಯಿಕ ಶಿಕ್ಷಣದ ಮೂಲ ಉದ್ದೇಶ ವ್ಯಕ್ತಿತ್ವ ನಿರ್ಮಾಣವೇ ಹೊರತು ಅಕ್ಷರಗಳನ್ನು, ಸಂಖ್ಯೆಗಳನ್ನು ಕಲಿಸುವುದಲ್ಲ. ಈ ವ್ಯಕ್ತಿತ್ವ ನಿರ್ಮಾಣ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿಲ್ಲ ಎಂಬ ದೂರು ಬಹು ಕಾಲದಿಂದಲೂ ಇದೆ. ಹೀಗಾಗಿ ಸಮಾಜದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳು, ಭ್ರಷ್ಟಾಚಾರಕ್ಕೆ ಕಾರಣವಾಗಿ ಶಿಕ್ಷಣ ವ್ಯವಸ್ಥೆಯನ್ನು ಗುರಿಯಾಗಿಸಲಾಗುತ್ತದೆ. ಹೊಸ ಶಿಕ್ಷಣ ನೀತಿಯು ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡುತ್ತದೆ. ಈ ನೀತಿಯಡಿ ಆಧುನಿಕ ಶಿಕ್ಷಣ ನೀಡುವ ಜೊತೆಗೆ ಗುರು-ಶಿಷ್ಯ ಪರಂಪರೆ ಪದ್ಧತಿಯ ಬಲವಾದ ಸತ್ವವನ್ನು ತುಂಬಿಸುವ ಪ್ರಯತ್ನ ಕಾಣುತ್ತದೆ.

ಮಾತೃ ಭಾಷೆಯಲ್ಲೇ ಕಲಿಕೆ

ಶಿಕ್ಷಣ ಕ್ಷೇತ್ರದಲ್ಲಿ ಮಾತೃ ಅಥವಾ ಸ್ಥಳೀಯ ಭಾಷೆಗೆ ಆದ್ಯತೆ ದೊರೆಯುತ್ತಿಲ್ಲ ಎಂಬ ದೂರು ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ನಮ್ಮಲ್ಲಿ ಕನ್ನಡ ಸಂಘಟನೆಗಳು, ಸಾಹಿತಿಗಳು, ಚಿಂತಕರು ಮಾತೃಭಾಷಾ ಕಲಿಕೆಗೆ ಒತ್ತು ನೀಡಿ ಎಂದು ಆಗ್ರಹಿಸುತ್ತಲೇ ಇದ್ದಾರೆ. ಇಂತಹ ಹೊತ್ತಿನಲ್ಲಿ 5ನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಕಲಿಸಬೇಕು ಎಂಬ ಅಂಶವನ್ನು ಶಿಕ್ಷಣ ನೀತಿಯಲ್ಲಿ ಸೇರಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಾಧ್ಯವಾದರೆ 8ನೇ ತರಗತಿಯ ವರೆಗೂ ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ ಎಂದು ನೀತಿ ಹೇಳಿದೆ. ಇಂಗ್ಲಿಷ್‌ ವ್ಯಾಮೋಹದಿಂದ ಮಾತೃಭಾಷೇಯ ಕಡೆಗಣನೆಯಾಗಿರುವ ಈ ಕಾಲದಲ್ಲಿ ಮಾತೃಭಾಷೆಗೆ ಒತ್ತು ನೀಡುವ ಶಿಕ್ಷಣ ನೀತಿ ಸಕಾಲಿಕವಾಗಿದೆ. ಆದರೆ ಈ ವಿಚಾರದಲ್ಲಿ ಕೇಂದ್ರಕ್ಕಿಂತಲೂ ಆಯಾ ರಾಜ್ಯ ಸರ್ಕಾರಗಳ ಹೊಣೆ ದೊಡ್ಡದು. ಪೋಷಕರೂ ಸಹ ಈ ವಿಚಾರದಲ್ಲಿ ಚಿಂತನೆ ನಡೆಸಬೇಕು.

ಸ್ಥಳೀಯ ಭಾಷೆಯಲ್ಲೇ ವಿಜ್ಞಾನ

ವಿಜ್ಞಾನವನ್ನು ಇಂಗ್ಲಿಷ್‌ ಬದಲು ಮಾತೃಭಾಷೆಯಲ್ಲಿ ಕಲಿಸಬೇಕು ಎಂಬ ಚರ್ಚೆ ಹಿಂದಿನಿಂದಲೂ ಇದೆ. ಈ ಕುರಿತು ಪ್ರಯತ್ನ ನಡೆದಿದೆ. ಆದರೆ ವಿಜ್ಞಾನ ವಿಷಯ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡಲು ಗುಣಮಟ್ಟದ ಪಠ್ಯಪುಸ್ತಕಗಳನ್ನು ರಚಿಸಬೇಕು. ವಿಜ್ಞಾನದಲ್ಲಿ ಇಂಗ್ಲಿಷ್‌ ಪದಗಳನ್ನು ಸ್ಥಳೀಯ ಭಾಷೆಗೆ ತರುವುದು ಬಹಳ ಕಷ್ಟ. ಆದರೆ ಅದನ್ನು ಸಾಧ್ಯವಾಗಿಸಿ ಗುಣಮಟ್ಟದ ಪಠ್ಯಪುಸ್ತಕಗಣ್ನನು ರಚಿಸಬೇಕು ಎಂದು ನೀತಿ ಹೇಳುತ್ತದೆ. ಇಂತಹ ಪುಸ್ತಕಗಳನ್ನು ರೂಪಿಸಿದರೆ, ಸುಲಭ ಕಲಿಕೆ ಮತ್ತು ಭಾಷೆಯ ಬೆಳವಣಿಗೆ ಸಾಧ್ಯವಾಗಲಿದೆ.

ದೇಶದ ಪ್ರತಿ ಮಗುವಿಗೂ ಶಿಕ್ಷಣ ಲಭ್ಯವಾಗುವಂತೆ ಮಾಡಲು ದಿವಂಗತ ಮಾಜಿ ಪ್ರದಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ‘ಸರ್ವ ಶಿಕ್ಷಣ ಅಭಿಯಾನ’ ಆರಂಭಿಸಿದರು. ಅವರ ಪ್ರೇರಣೆಯಿಂದಾಗಿ ನಂತರದ ವರ್ಷಗಳಲ್ಲಿ ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯ್ದೆಯು (ಆರ್‌ಟಿಐ) ಜಾರಿಯಾಯಿತು. ಹೊಸ ನೀತಿಯಲ್ಲಿ ಈ ಕಾಯ್ದೆಯ ಮುಂದುವರೆದ ಭಾಗವನ್ನು ನೋಡಬಹುದು.

ಶಿಕ್ಷಣ ಸಚಿವರೇ... ಆನ್‌ಲೈನ್ ಶಿಕ್ಷಣ ದುಡ್ಡಿದ್ದವರಿಗೆ ಮಾತ್ರನಾ..?

ಬದುಕು ನೀಡುವ ಕಲಿಕೆ

ಶಿಕ್ಷಣವನ್ನು ಕೇವಲ ಜ್ಞಾನ ಸಂಪಾದನೆಗೆ ಮಿತಿಗೊಳಿಸಲು ಸಾಧ್ಯವಿಲ್ಲ. ಬದುಕಲು ಕಲಿಸುವುದು ಶಿಕ್ಷಣದ ಉದ್ದೇಶವಾಗಬೇಕು. ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ಪೂರಕವಾಗಿ ನೀತಿಯಲ್ಲಿ ಕೆಲ ಅಂಶಗಳನ್ನು ಸೇರಿಸಲಾಗಿದೆ. ಇದು ಬದುಕುವುದನ್ನು ಹೇಳಿಕೊಡುತ್ತದೆ. ದೈಹಿಕ ಶ್ರಮವನ್ನು ಬೇಡುವ ಕೃಷಿ, ತೋಟಗಾರಿಕೆ, ಕುಂಬಾರಿಕೆ, ಕಮ್ಮಾರಿಕೆ ಮೊದಲಾದವುಗಳನ್ನು ಕಲಿಸುವುದು ಹೊಸ ಶಿಕ್ಷಣದ ಭಾಗವಾಗಲಿದೆ. ಇದರಿಂದಾಗಿ ಗ್ರಾಮೀಣ ಜೀವನವು ಶಿಕ್ಷಣ ವ್ಯವಸ್ಥೆಯೊಂದಿಗೆ ಬೆರೆಯಲಿದೆ. ಮಹಾನಗರಗಳಲ್ಲಿ ಉತ್ತಮ ಸಂಬಳ ಪಡೆಯುವುದು ಶಿಕ್ಷಣದ ಗುರಿ ಎಂಬ ನಂಬಿಕೆ ಕ್ರಮೇಣ ದೂರವಾಗಲಿದೆ.

ಯುವಜನರು ಒಂದು ವಿಷಯವನ್ನು ವ್ಯಾಸಂಗ ಮಾಡಿ ಅದರ ವಿಷಯಾಧಾರಿತವಾಗಿ ಉದ್ಯೋಗ ಹೊಂದುತ್ತಿದ್ದಾರೆ. ಇದು ಸರಿ ಎನಿಸಿದರೂ ಇತರ ಕೌಶಲ್ಯ ಅಥವಾ ಇತರ ವಿಷಯಗಳ ಜ್ಞಾನವಿಲ್ಲದಿದ್ದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೋಲುವ ಅಪಾಯವಿದೆ. ಹೊಸ ನೀತಿಯು ಕೌಶಲ್ಯಾಭಿವೃದ್ಧಿಯನ್ನು ಶಿಕ್ಷಣ ವ್ಯವಸ್ಥೆಗೆ ಅಳವಡಿಸುತ್ತದೆ. ಇದರಲ್ಲಿ 6ನೇ ತರಗತಿಯಿಂದಲೇ ತಾಂತ್ರಿಕ ಮತ್ತು ವೃತ್ತಿಪರ ಕೌಶಲ್ಯಾಭಿವೃದ್ಧಿಗೆ ಅವಕಾಶ ದೊರೆಯಲಿದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗೆ ಆಸಕ್ತಿ ಇದ್ದರೆ ಕಲಾ ವಿಭಾಗದ ವಿಷಯವನ್ನೂ, ಕಲಾ ವಿಭಾಗದ ವಿದ್ಯಾರ್ಥಿ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ್ದನ್ನೂ ಕಲಿಯಬಹುದು.

ಇಷ್ಟುದಿನ ಕ್ರೀಡೆ, ಸಂಗೀತ, ನೃತ್ಯ ಮೊದಲಾದವುಗಳನ್ನು ಪಠ್ಯೇತರ ಚಟುವಟಿಕೆಗಳು ಎಂದು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತಿತ್ತು. ಇನ್ನು ಅವೆಲ್ಲವೂ ಪಠ್ಯದ ಭಾಗವೇ ಆಗಲಿದೆ. ಈ ರೀತಿ ಒಂದರೊಳಗೊಂದು ಎಂಬ ಅವಕಾಶವೂ ಇರುವುದು ಬಹುದೊಡ್ಡ ಕ್ರಾಂತಿ. ಇದರ ಪರಿಣಾಮ ಒಬ್ಬ ವಿದ್ಯರ್ಥಿ ಶಿಕ್ಷಣ ಸಂಸ್ಥೆಯಿಂದ ಹೊರ ಬಂದಾಗ ಆತನ ಜ್ಞಾನ ಸಮಗ್ರವಾಗಿರುತ್ತದೆ. ಶಿಕ್ಷಣದ ಹಂತಗಳನ್ನು ಹೊಸದಾಗಿ ವಿಭಾಗಿಸಿರುವುದು ಇದಕ್ಕೆ ಪೂರಕವಾಗಿದೆ.

ಉದ್ಯೋಗದ ದೂರದೃಷ್ಟಿ

ಬಾಲ್ಯದಿಂದಲೇ ಕಲಿಯುವ ಪ್ರಕ್ರಿಯೆ ಶುರುವಾಗುತ್ತದೆ. ಕಾಲೇಜು ಶಿಕ್ಷಣ ಮುಗಿಸಿದ ಯುವಕ/ಯುವತಿಯರು ಹೊರ ಜಗತ್ತಿಗೆ ಬಂದಾಗ ಉದ್ಯೋಗ ದೊರೆಯದೆ ಭರಮನಿರಸನಗೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹೊಸ ನೀತಿಯು ಯುವಜನರನ್ನು ಒಂದಕ್ಕೇ ಸೀಮಿತಗೊಳಿಸದೆ ಹಲವಾರು ಅಂಶಗಳಿಗೆ ತೆರೆದುಕೊಳ್ಳೂವಂತೆ ಮಾಡುತ್ತದೆ. ಈ ರೀತಿಯ ಅವಕಾಶ ಸೃಷ್ಟಿಸುವ ಶಿಕ್ಷಣ ನೀತಿಯನ್ನು ಹುಟ್ಟುಹಾಕಬೇಕೆಂಬುದು ಹಲವಾರು ವರ್ಷಗಳ ಕನಸಾಗಿದೆ. ಆದ್ದರಿಂದಲೇ ಭವಿಷ್ಯದಲ್ಲಿ ದೇಶದ ಉದ್ಯೋಗ ಕ್ಷೇತ್ರ ಹೇಗಿರಲಿದೆ ಎಂಬ ದೂರದೃಷ್ಟಿಯನ್ನು ಇಟ್ಟುಕೊಂಡು ನೀತಿ ರಚಿಸಲಾಗಿದೆ. ಡಾ.ಕೆ.ಕಸ್ತೂರಿ ರಂಗನ್‌, ಪ್ರೊ.ಎಂ.ಕೆ.ಶ್ರೀಧರ್‌ ಅವರಂತಹ ಶಿಕ್ಷಣ ತಜ್ಞರ ಮುಂದಾಲೋಚನೆಯನ್ನು ನೀತಿಯಲ್ಲಿ ಕಾಣಬಹುದು. 2030ರ ಒಳಗೆ ಈ ನೀತಿಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸುತ್ತಾ ಸಾಗಿದಂತೆ ದೇಶ ಬಲಿಷ್ಠವಾಗುತ್ತಾ ಹೋಗುತ್ತದೆ.

ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಿಗೆ ಕಲಿಸುವ ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ ಅಗತ್ಯ. ಶಿಕ್ಷಕರಿಗ ನಾಲ್ಕು ವರ್ಷದ ಬಿ.ಎಡ್‌ ಕಲಿಕೆ ಸ್ವಾಗತಾರ್ಹ. ಇದರ ಜೊತೆಗೆ ಬೇರೆ ವಿಷಯಗಳನ್ನು ಕಲಿಸಲು ವಿಷಯ ತಜ್ಞರನ್ನು ನೇಮಕ ಮಾಡಿಕೊಳ್ಳುವ ಅವಕಾಶವಿದೆ. ಹಳ್ಳಿಗಳಲ್ಲಿ ಕೆಲಸ ಮಾಡುವಂತ ಶಿಕ್ಷಕರಿಗೆ ಪ್ರೋತ್ಸಾಹಿಸುವುದು, ವರ್ಗಾವಣೆಯಲ್ಲಿ ವಿನಾಯಿತಿ ನೀಡಿ ಅವರು ಒಂದೇ ಕಡೆ ನೆಲೆಸಿ ಅಧ್ಯಯನದ ಕಡೆ ಗಮನಹರಿಸುವಂತೆ ಮಾಡುವುದು, ಶಾಲೆಗಳಲ್ಲಿ ಮೂಲ ಸೌಕರ‍್ಯ ಅಭಿವೃದ್ಧಿಗೆ ಒತ್ತು ಸೇರಿದಂತೆ ಮೊದಲಾದ ಕ್ರಮಗಳು ಶಿಕ್ಷಕ ಸ್ನೇಹಿಯಾಗಿವೆ.

ನವಭಾರತ ನಿರ್ಮಾಣ ಹತ್ತಿರದಲ್ಲಿದೆ

ಈ ನೀತಿಯಲ್ಲಿನ ಅಂಶಗಳನ್ನು ಒಮ್ಮೆ ಓದಿದರೆ ‘ನವಭಾರತ’ ನಿರ್ಮಾಣ ತೀರಾ ಹತ್ತಿರದಲ್ಲಿ ಇದೆ ಎಂಬುದು ಸ್ಪಷ್ಟವಾಗುತ್ತದೆ. ಕೇಂದ್ರದಲ್ಲಿ ಈ ಹಿಂದೆ ಮಾನವ ಸಂಪನ್ಮೂಲ ಸಚಿವರಾಗಿದ್ದ ಸ್ಮೃತಿ ಇರಾನಿ, ಪ್ರಕಾಶ್‌ ಜಾವ್ಡೇಕರ್‌ ಹಾಗೂ ಈಗಿನ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಅವರ ಇಷ್ಟುವರ್ಷಗಳ ಪ್ರಯತ್ನಗಳು ನೂರಾರು ವರ್ಷಗಳ ಕಾಲ ಸಮರ್ಥ ಯುವ ಪೀಳಿಗೆಯ ಸೃಷ್ಟಿಗೆ ಕಾರಣವಾಗುತ್ತದೆ. ಈ ನೀತಿಯನ್ನು ನಮ್ಮ ರಾಜ್ಯದಲ್ಲಿನ ಶಿಕ್ಷಣ ವ್ಯವಸ್ಥೆಗೆ ಪೂರಕವಾಗುವಂತೆ ಒಗ್ಗಿಸಿಕೊಂಡು ಅನುಷ್ಠಾನಕ್ಕೆ ತರಬೇಕಿದೆ. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಸಮಗ್ರ ಜ್ಞಾನವಿಕಾಸಕ್ಕೆ ಒತ್ತು ನೀಡಿದೆ. ಹೊಸ ನೀತಿಯಿಂದ ರಾಜ್ಯದ ಮತ್ತು ದೇಶದ ಭವ್ಯ ಪರಂಪರೆ ಪ್ರಕಾಶಿಸಲಿದೆ.

ಭಾರತದ ಅದ್ವಿತೀಯ ಯೂತ್‌ ಐಕಾನ್‌ ಸ್ವಾಮಿ ವಿವೇಕಾನಂದರು, ‘ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ’ ಎಂದು ಹೇಳಿದ್ದರು. ಈಗಿನ ಶಿಕ್ಷಣ ನೀತಿಯು ಯುವಜನರ ಜ್ಞಾನ ವಿಸ್ತಾರಗೊಳಿಸಿ ಅವರಿಂದಲೇ ದೇಶದ ಭವಿಷ್ಯ ಬರೆಸುವ ಲೇಖನಿಯಂತಿದೆ. ಇದು ಸ್ವಾಮಿ ವಿವೇಕಾನಂದರ ಆಶಯ ಈಡೇರಿಸುವ ಸಾಧನ ಎಂದೂ ಕರೆಯಬಹುದು.

-  ವೈ.ಎ.ನಾರಾಯಣಸ್ವಾಮಿ, ವಿಧಾನಪರಿಷತ್‌ ಸದಸ್ಯ, ಬಿಜೆಪಿ

Follow Us:
Download App:
  • android
  • ios