ಬೆಂಗಳೂರು (ನ.30): ಕರ್ನಾಟಕದ ಸುದ್ದಿ ಚಾನೆಲ್‌ನಲ್ಲಿ ಕಳೆದ 12 ವರ್ಷಗಳಿಂದಲೂ ವಿಶೇಷ ಛಾಪು ಮೂಡಿಸಿರುವ ಸುವರ್ಣ ನ್ಯೂಸ್ ಇದೀಗ ಹೊಸ ರೂಪ ತಾಳಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಎಂಬ ಹೊಸ ಲೋಗೋದೊಂದಿಗೆ ಮರುಹುಟ್ಟು ಪಡೆದು ಕೊಂಡಿದೆ. 

"

ಆ ಮೂಲಕ ಪ್ರಾದೇಶಿಕ ಭಾಷೆಯ ಚಾನೆಲ್‌ ಆಗಿ ಮನೆ ಮಾತಾಗಿದ್ದ ಸುವರ್ಣ ನ್ಯೂಸ್‌ಗೆ ಏಷ್ಯಾ ನೆಟ್ ನ್ಯೂಸ್ ನೆಟ್ವರ್ಕ್ ಅಡಿಯಲ್ಲಿ ರಾಷ್ಟ್ರೀಯ ಸುದ್ದಿ ಸಂಸ್ಥೆಯಾಗಿದೆ. ಹೊಸ ಬಣ್ಣ, ಹೊಸ ರೂಪ, ಹೊಸ ಕಾರ್ಯಕ್ರಮಗಳೊಂದಿಗೆ ರೀ ಲಾಂಚ್ ಆದ ಚಾನೆಲ್, ತನ್ನ ಧ್ಯೇಯವಾಕ್ಯವಾದ ನೇರ, ದಿಟ್ಟ, ನಿರಂತರದೊಂದಿಗೆ ಮಾಧ್ಯಮ ಲೋಕದ ಸವಾಲುಗಳನ್ನು ಎದುರಿಸಲು ಸಜ್ಜಾಗಿದೆ. ಕನ್ನಡ ಸುದ್ದಿ ವಾಹಿನಿಗಳಲ್ಲಿ ಅಗ್ರಗಣ್ಯ ನಾಯಕನಾಗಿರುವ ಚಾನೆಲ್, ಇನ್ನೂ ಮುಂದೆ ಮತ್ತಷ್ಟು ಪ್ರಖರವಾಗಿ ಸುದ್ದಿಗಳನ್ನು ಭಿತ್ತರಿಸುತ್ತಾ, ಭೀತಿಯಿಲ್ಲದ ಪತ್ರಿಕೋದ್ಯಮವನ್ನು ಮುಂದುವರಿಸಲಿದೆ. ಆ ಮೂಲಕ ಜನರ ವಿಶ್ವಾಸರ್ಹತೆಗೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಲಿದೆ.

"

'ಕನ್ನಡ ಸುದ್ದಿ ವಾಹಿನಿಗಳಲ್ಲಿ ಸುವರ್ಣ ನ್ಯೂಸ್ ತನ್ನದೇ ಆದ ಛಾಪು ಮೂಡಿಸಿ, ಅಗ್ರಗಣ್ಯ ನಾಯಕನಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಭಾವಶಾಲಿ ಹಾಗೂ ಒಳನೋಟವುಳ್ಳ ವರದಿಗಳಿಂದ ಕರ್ನಾಟಕ ಹಾಗೂ ಕನ್ನಡಿಗರ ವಿಶ್ವಾಸ ಗೆಲ್ಲುವಲ್ಲಿ ಸುವರ್ಣ ನ್ಯೂಸ್ ಯಶಸ್ವಿಯಾಗಿದೆ. ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್ ಆಗುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಭಾವ ಬೀರುವಲ್ಲಿ ನಮ್ಮ ಚಾನೆಲ್ ಮುನ್ನಡಿ ಬರೆದಿದೆ,' ಎಂದಿದ್ದಾರೆ ಎಷ್ಯಾನೆಟ್ ನ್ಯೂಸ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಅಭಿನವ್ ಖರೆ. 

"

'ಹೊಸ ರೂಪ, ಬಣ್ಣದೊಂದಿಗೆ ಬದಲಾದ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರೈಮ್ ಟೈಮಿನಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಭಿತ್ತರಿಸಲಿದೆ. ಕರ್ನಾಟಕ ಸುದ್ದಿ ಪ್ರಕಾರಗಳಲ್ಲಿ ಈ ಹೊಸ ಕಾರ್ಯಕ್ರಮಗಳು ಗೇಮ್ ಚೇಂಜರ್ ಆಗಲಿವೆ. ರೀ ಬ್ರ್ಯಾಂಡ್ ಆಗುವುದು ಒಂದು ದಿನದ ಉತ್ಸಾಹಕ್ಕೆ ಸೀಮಿತವಾಗುವುದಿಲ್ಲ. ಬದಲಾಗಿ ಗಂಭೀರ ಪತ್ರಿಕೋದ್ಯಮದ ಕಡೆಗೆ ಚಾನೆಲ್ ಗಮನ ಹರಿಸಲಿದೆ. ಮತ್ತೊಂದು ಸುದ್ದಿ ಮಾಧ್ಯಮವನ್ನು ಸದಾ ಕಾಪಿ ಮಾಡುವ ಈ ಯುಗದಲ್ಲಿ ನಾವು  ಪರಿಶೀಲಿಸಿದ ದೃಶ್ಯಗಳು ಹಾಗೂ ಸುದ್ದಿಗಳನ್ನು ಪ್ರಸ್ತುತಪಡಿಸುವ ಮೂಲಕ ಬೇರೆ ಚಾನೆಲ್‌ಗಳಿಗಿಂತ ಹೇಗೆ ವಿಭಿನ್ನ ಎಂಬುದನ್ನು ತೋರಿಸುತ್ತೇವೆ. ಆ ಮೂಲಕ ನಮ್ಮ ಸುದ್ದಿ ವಾಹಿನಿಯ ಧ್ಯೇಯ ವಾಕ್ಯವಾದ ನೇರ, ದಿಟ್ಟ ನಿರಂತರಕ್ಕೆ ಬದ್ಧರಾಗಿರುತ್ತೇವೆ,' ಎಂದು ಎಷ್ಯಾನೆಟ್ ಸುವರ್ಣ ನ್ಯೂಸ್‌ನ ಎಡಿಟರ್ ಇನ್ ಚೀಫ್ ರವಿ ಹೆಗಡೆ ಅವರು ಭರವಸೆ ನೀಡಿದ್ದಾರೆ. 

"

ಕಾರ್ಯಕಾರಿ ಅಧ್ಯಕ್ಷರಾದ ರಾಜೇಶ್ ಕಾಲರಾ, 'ವೀಕ್ಷಕರ ಇತ್ತೀಚಿನ ಅಗತ್ಯಕ್ಕೆ ಅನುಗುಣವಾಗಿ ನಾವು ಬದಲಾಗಿದ್ದೇವೆ. ಈ ಮನ್ವಂತರದ ಸಮಯದಲ್ಲಿ ಸುದ್ದಿ ವಾಹಿನಿಯೊಂದು ಸೂಕ್ಷ್ಮವಾಗಿ ವರ್ತಿಸುವ ಅಗತ್ಯವಿದೆ. ವೀಕ್ಷಣಾ ಸಮಯ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ವೀಕ್ಷಕರ ನಡೆ ಗುರುತಿಸಿ, ಪರಿಶೀಲಿಸಿದ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಹೆಚ್ಚು ಹೆಚ್ಚು ವೀಕ್ಷಕರನ್ನು ಆಕರ್ಷಿಸಬೇಕಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಕಾರ್ಯದಲ್ಲಿ ಮೇಲಗೈ ಸಾಧಿಸಿದ್ದು, ನಡೆಸಿದ ಅಧ್ಯಯನದಂತೆ ಸುದ್ದಿ ಪ್ರಸಾರದ ತಂತ್ರಗಾರಿಕೆಯನ್ನು ಬದಲಾಯಿಸುತ್ತೇವೆ,' ಎಂದಿದ್ದಾರೆ. 

"

ಭಾರತದ ಸರ್ವಶ್ರೇಷ್ಠ ಸುದ್ದಿ ಸಂಸ್ಥೆಗಳಲ್ಲಿ ಏಷ್ಯಾನೆಟ್ ನ್ಯೂಸ್ ಮೀಡಿಯಾ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಸದಾ ಅಗ್ರ ಸ್ಥಾನದಲ್ಲಿದೆ. ಮಲಯಾಳಂ ಸುದ್ದಿ ವಾಹಿನಿಗಳಲ್ಲಿ ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಎರಡು ದಶಕಗಳಿಗಿಂದಲೂ ನಿರ್ವಿವಾದವಾಗಿ ಮೊದಲ ಸ್ಥಾನವನ್ನು ಕಾಪಿಟ್ಟುಕೊಂಡಿದೆ.  ಕರ್ನಾಟಕದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಭಿನ್ನ ಕಾರ್ಯಕ್ರಮಗಳು, ನಿಲುವು ಹಾಗೂ ನಿರ್ಭಿಡ ಪತ್ರಿಕೋದ್ಯಮದಿಂದ ಕನ್ನಡಿಗರ ಮನ, ಮನೆ ಮಾತಾಗಿದೆ. ಮುದ್ರಣ ಮಾಧ್ಯಮದಲ್ಲಿ ಕನ್ನಡ ಪ್ರಭ ಕಳೆದ 50 ವರ್ಷಗಳಿಂದಲೂ ತನ್ನದೇ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ.  ರೇಡಿಯೋ ಜಗತ್ತಿನಲ್ಲಿ ಇಂಡಿಗೋ ಮ್ಯೂಸಿಕ್.ಕಾಮ್ ಮೊದಲ ಅಂತಾರಾಷ್ಟ್ರೀಯ ಬಾನುಲಿ ಕೇಂದ್ರವಾಗಿ ಬೆಂಗಳೂರು ಹಾಗೂ ಗೋವಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾಸಿಕ ಸುಮಾರು 1 ಬಿಲಿಯನ್ ಪೇಜ್ ವ್ಯೂಸ್‌ನೊಂದಿಗೆ ಏಳು ಭಾಷೆಗಳಲ್ಲಿ (ಮಲಯಾಳಂ, ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲಗು ಮತ್ತು ಬಾಂಗ್ಲಾ) ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಡಿಜಿಟಲ್ ಮಾಧ್ಯಮದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಭಾರತದಲ್ಲಿಯೇ www.asianetnews.com ತ್ವರಿತವಾಗಿ ಬೆಳೆಯುತ್ತಿರುವ ಪ್ರಾದೇಶಿಕ ಸುದ್ದಿ ಮಾಧ್ಯಮವಾಗಿ ಹೊರ ಹೊಮ್ಮಿದೆ. 

"

ಏಷ್ಯಾನೆಟ್ ಸುವರ್ಣ ನ್ಯೂಸ್ ಆಗಿ ಬದಲಾದ ಸುವರ್ಣ ನ್ಯೂಸ್ ರಾಷ್ಟ್ರ ಮಟ್ಟದ ಸುದ್ದಿ ವಾಹಿನಿಗಳಿಗೆ ಸಮಾನವಾಗಿ ಸಂಪಾದಕೀಯ ಶ್ರೇಷ್ಠತೆ ತೋರಿಸುವಲ್ಲಿ ಕಾರ್ಯ ಪ್ರವೃತ್ತವಾಗಲಿದೆ. ಹೆಚ್ಚಿನ ಮಾಹಿತಿಗೆ ಮಾರ್ಕೆಟಿಂಗ್ ಮುಖ್ಯಸ್ಥ  ಕಿರಣ್ ಅಪ್ಪಚ್ಚು ಅವರನ್ನು kiranappachu@asianetnews.in ಮೂಲಕ ಸಂಪರ್ಕಿಸಬಹುದು. 

"