ಯೋಗಿ, ಅಖಿಲೇಶ್, ಮಾಯಾ: ಉ. ಪ್ರದೇಶದಲ್ಲಿ ಯಾರು ಬೆಸ್ಟ್? ಸಮೀಕ್ಷೆಯಲ್ಲಿ ಸಿಕ್ತು ಉತ್ತರ!
* 2022ರಲ್ಲಿ ಎದುರಾಗಲಿರುವ ದೇಶದ ಅತಿದೊಡ್ಡ ರಾಜ್ಯದ ಚುನಾವಣೆ
* ಚುನಾವಣೆಗೂ ಮುನ್ನ ರಾಜ್ಯದ ಜನತೆ ಸರ್ಕಾರಕ್ಕೆ ಕೊಡೋ ರೇಟಿಂಗ್ ಏನು?
* ಕೊರೋನಾ ನಿರ್ವಹಣೆಯಲ್ಲಿ ಯೋಗಿ ಪಾಸಾ? ಫೇಲಾ?
* ಏಷ್ಯಾನೆಟ್ ಸುವರ್ಣನ್ಯೂಸ್ -ಜನ್ ಕಿ ಬಾತ್ ಸಮೀಕ್ಷೆ 2021
ಲಕ್ನೋ(ಆ.18): 2022ರಲ್ಲಿ ಎದುರಾಗಲಿರುವ ದೇಶದ ಅತಿದೊಡ್ಡ ರಾಜ್ಯ ಎಂಬ ಖ್ಯಾತಿಯ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಭರದ ಸಿದ್ಧತೆ ಆರಂಭಿಸಿವೆ. ಒಂದೆಡೆ ಪ್ರತಿಪಕ್ಷಗಳು ಆಡಳಿತ ಪಕ್ಷದ ವೈಫಲ್ಯಗಳನ್ನು ತೋರಿಸುವ ಯತ್ನ ನಡೆಸುತ್ತಿದ್ದರೆ ಇತ್ತ ಸರ್ಕಾರ ಮತ್ತಷ್ಟು ಉತ್ತಮ ಸೇವೆ ನೀಡುವ ಯತ್ನ ನಡೆಸುತ್ತಿದೆ. ರಾಜಕೀಯದ ಈ ಆಟದ ನಡುವೆ ಮತದಾರನ ಒಲವು ಯಾರು ಗಳಿಸುತ್ತಾರೋ ಅವರೇ ಗದ್ದುಗೆ ಏರುತ್ತಾರೆ ಎಂಬುವುದು ಅಷ್ಟೇ ಸತ್ಯ.
"
#UP22WithAsianetNews: ಯೋಗಿ, ಅಖಿಲೇಶ್ ನಡುವೆ ಬಿಗ್ ಫೈಟ್!
ಇನ್ನು ಉತ್ತರ ಪ್ರದೇಶ ಚುನಾವಣೆಯಲ್ಲಿ ಯೋಗಿ ಸರ್ಕಾರಕ್ಕೆ ಕೊರೋನಾ ಪರಿಸ್ಥಿತಿ ಹಾಗೂ ನಿರ್ವಹಿಸಿದ ಬಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ತೆಗೆದುಕೊಂಡ ಕ್ರಮ ಜನರಿಗೆ ತೃಪ್ತಿ ಕೊಟ್ಟಿದೆಯಾ? ಜಂಗಲ್ ರಾಜ್ ಎಂದೇ ಹೇಳಲಾಗುವ ಉತ್ತರ ಪ್ರದೇಶದಲ್ಲಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಜನರಿಗೆ ಯಾವ ಅಭಿಪ್ರಾಯವಿದೆ? ಯೋಗಿ ಸರ್ಕಾರ ಮಾಡಿದ ಉತ್ತಮ ಕಾರ್ಯಗಳೇನು? ಎಂಬಿತ್ಯಾದಿ ಪ್ರಶ್ನೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಸದ್ಯ ಉತ್ತರ ಪ್ರದೇಶದ ಜನರ ಮನದಲ್ಲಿ ಯೋಗಿ ಆಡಳಿತ ವೈಖರಿ ಬಗ್ಗೆ ಜನರ ಮನದಲ್ಲೇನಿದೆ? ಯಾವ ವಿಚಾರದ ಬಗ್ಗೆ ಹೆಚ್ಚು ಅಸಮಾಧಾನವಿದೆ ಎಂದು ಏಷ್ಯಾನೆಟ್- ಜನ್ ಕಿ ಬಾತ್ ನಡೆಸಿದ ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ.
ಏಷ್ಯಾನೆಟ್- ಜನ್ ಕಿ ಬಾತ್ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 14 ಪ್ರಮುಖ ಪ್ರಶ್ನೆಗಳನ್ನು ಕೇಳಲಾಗಿತ್ತು. ಇವುಗಳಿಗೆ ಸಿಕ್ಕ ಉತ್ತರದ ಆಧಾರದಲ್ಲಿ ಒಟ್ಟಾರೆಯಾಗಿ ಮತ್ತೆ ಯೋಗಿ ಆದಿತ್ಯನಾಥ್ ಅಧಿಕಾರಕ್ಕೇರುವುದು ಬಹುತೇಕ ಖಚಿತ ಎನ್ನಬಹುದು. ಇನ್ನು ಈ 14 ಪ್ರಶ್ನೆಗಳಲ್ಲಿ ಯೋಗಿ ಆಡಳಿತ ವೈಖರಿ, ಕಾನೂನು ಸುವ್ಯವಸ್ಥೆ, ಸರ್ಕಾರದ ಉತ್ತಮ ಕಾರ್ಯಗಳ ಬಗ್ಗೆ ನಾಲ್ಕು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಮೂಲಕ ಜನರು ಏನನ್ನು ಬಯಸುತ್ತಾರೆ? ಅವರ ಆದ್ಯತೆ ಏನು? ಸರ್ಕಾರ ಎಲ್ಲಿ ಎಡವಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸಮೀಕ್ಷೆ ಉತ್ತರ ಕೊಟ್ಟಿದೆ.
1. ಕೊರೋನಾ ನಿರ್ವಹಣೆ ಬಗ್ಗೆ ಯೋಗಿ ಸರರ್ಕಾರಕ್ಕೆ ನೀವು ಕೊಡುವ ರೇಟಿಂಗ್ ಏನು?
ಜನಾಭಿಪ್ರಾಯ: ಈ ಮೇಲಿನ ಪ್ರಶ್ನೆಗೆ ಶೇ. 23ರಷ್ಟು ಜನರು ಅತ್ಯುತ್ತಮವಾಗಿ ಕ್ರಮ ಕೈಗೊಂಡಿದ್ದಾರೆ ಎಂದಿದ್ದರೆ, ಶೇ. 22ರಷ್ಟು ಮಂದಿ ಉತ್ತಮ ಎಂದಿದ್ದಾರೆ. ಇನ್ನು ಶೇ. 32ರಷ್ಟು ಮಂದಿ ಸಾಮಾನ್ಯ ಎಂದರೆ ಶೇ. 13ರಷ್ಟು ಮಂದಿ ಕಳಪೆ ಎಂದಿದ್ದಾರೆ.
ಪ್ರದೇಶವಾರು ಜನಾಭಿಪ್ರಾಯ
ಗೋರಖ್ | ಬ್ರಿಜ್ | ಪಶ್ಚಿಮ | ಅವಧ್ | ಕಾಶಿ | ಬುಂದೇಲ್‌ಖಂಡ್ | |
ಉತ್ತಮ | 40% | 68% | 68% | 88% | 58% | 65% |
ಸಾಮಾನ್ಯ | 20% | 23% | 25% | 10% | 29% | 25% |
ಕಳಪೆ | 30% | 9% | 7% | 5% | 13% | 11% |
ಉತ್ತರ ಪ್ರದೇಶಕ್ಕೆ ಮತ್ತೊಮ್ಮೆ ಯೋಗಿ? ಅಚ್ಚರಿ ಕೊಟ್ಟ ಏಷ್ಯಾನೆಟ್ ಸಮೀಕ್ಷೆ ವರದಿ!
2. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಾವ ಸರ್ಕಾರ ಉತ್ತಮ ಕಾರ್ಯ ನಿರ್ವಹಿಸಿದೆ?
ಜನಾಭಿಪ್ರಾಯ: ಕಾನೂನು ಸುವ್ಯವಸ್ಥೆ ಅಖಿಲೇಶ್ ಸರ್ಕಾರದ ಅವಧಿಯಲ್ಲಿ ಉತ್ತಮವಾಗಿತ್ತು ಎಂದು ಶೇ. 27ಷ್ಟು ಮಂದಿ ಹೇಳಿದ್ದರೆ, ಶೇ. 13ರಷ್ಟು ಮಂದಿ ಮಾಯಾವತಿ ಅವಧಿಯಲ್ಲಿ ಚೆನ್ನಾಗಿತ್ತು ಎಂದಿದ್ದಾರೆ. ಆದರೆ ಶೇ. 60ರಷ್ಟು ಮಂದಿ ಯೋಗಿ ಆಡಳಿತ ಅವಧಿಯಲ್ಲಿ ಉತ್ತಮವಾಗಿತ್ತು ಎಂದು ಅಭಿಪ್‌ರಾಯ ವ್ಯಕ್ತಪಡಿಸಿದ್ದಾರೆ.
ಪ್ರದೇಶವಾರು ಜನಾಭಿಪ್ರಾಯ
ಸರ್ಕಾರ | ಗೋರಖ್ | ಬ್ರಿಜ್ | ಪಶ್ಚಿಮ | ಅವಧ್ | ಕಾಶಿ | ಬುಂದೇಲ್‌ಖಂಡ್ |
ಯೋಗಿ | 50% | 44% | 38% | 62% | 49% | 66% |
ಅಖಿಲೇಶ್ | 30% | 31% | 40% | 18% | 33% | 12% |
ಮಾಯಾವತಿ | 20% | 25% | 15% | 10% | 10% | 22% |
3. ಯಾವ ವಿಚಾರವಾಗಿ ಯೋಗಿ ಸರ್ಕಾರ ಉತ್ತಮ ಕೆಲಸ ಮಾಡಿದೆ?
ಜನಾಭಿಪ್ರಾಯ: ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಸುವ್ಯವಸ್ಥೆ ಅತ್ಯುತ್ತಮವಾಗಿ ನಿರ್ವಹಿಸಿದೆ ಎಂದು ಶೇ. 70ರಷ್ಟು ಮಂದಿ ಹೇಳಿದ್ದರೆ, ಶೇ. 20ರಷ್ಟು ಮಂದಿಗೆ ಸರ್ಕಾರ ಪಡಿತರ ಹಂಚುತ್ತಿದ್ದ ವೈಖರಿ ಇಷ್ಟವಾಗಿದೆ. ಇನ್ನು ಶೇ. 10ರಷ್ಟು ಮಂದಿಗೆ ಇತರ ಕಾರ್ಯಗಳು ಹಿಡಿಸಿವೆ.
ಪ್ರದೇಶವಾರು ಜನಾಭಿಪ್ರಾಯ
ಗೋರಖ್ | ಬ್ರಿಜ್ | ಪಶ್ಚಿಮ | ಅವಧ್ | ಕಾಶಿ | ಬುಂದೇಲ್‌ಖಂಡ್ | |
ಕಾನೂನು ಸುವ್ಯವಸ್ಥೆ | 50% | 30% | 48% | 60% | 29% | 66% |
ಪಡಿತರ | 32% | 20% | 32% | 30% | 20% | 18% |
ಇತರೆ | 18% | 41% | 20% | 10% | 49% | 16% |
4.ಯೋಗಿ ಸರ್ಕಾರ ಯಾವ ವಿಚಾರದಲ್ಲಿ ಎಡವಿದೆ?
ಜನಾಭಿಪ್ರಾಯ: ಈ ಪ್ರಶ್ನೆ ಉತ್ತರಿಸಿದವರಲ್ಲಿ ಶೇ. 45 ಮಂದಿ ಹಣದುಬ್ಬರ ಎಂದು ದೂರಿದ್ದರೆ, ಶೇ. 25ರಷ್ಟು ಮಂದಿ ಭ್ರಷ್ಟಾಚಾರ ಎಂದಿದ್ದಾರೆ. ಇನ್ನು ಶೇ. 20ರಷ್ಟು ಮಂದಿ ನಿರುದ್ಯೋಗ ಸಮಸ್ಯೆ ಎಂದಿದ್ದರೆ, ಶೇ. 10ರಷ್ಟು ಮಂದಿ ವಿದ್ಯುತ್ ಸಮಸ್ಯೆಗೆ ಪರಿಹಾರ ನೀಡದೆ ಎಂದಿದ್ದಾರೆ .
ಪ್ರದೇಶವಾರು ಜನಾಭಿಪ್ರಾಯ
ಗೋರಖ್ | ಬ್ರಿಜ್ | ಪಶ್ಚಿಮ | ಅವಧ್ | ಕಾಶಿ | ಬುಂದೇಲ್‌ಖಂಡ್ | |
ಹಣದುಬ್ಬರ | 28% | 36% | 61% | 50% | 46% | 58% |
ಭ್ರಷ್ಟಾಚಾರ | 34% | 13% | 2% | - | 15% | - |
ನಿರುದ್ಯೋಗ | 23% | 22% | 12% | 5% | 19% | 38% |
ಇತರೆ | 15% | 18% | 17% | 45% | 23% | 4% |
5. ಯಾವ ವಿಚಾರ ನಿಮ್ಮನ್ನು ಹೆಚ್ಚು ಚಿಂತೆಗೀಡು ಮಾಡಿದೆ/ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರಿದೆ?
ಇಲ್ಲಿ ಶೇ. 61ರಷ್ಟು ಮಂದಿ ಹಣದುಬ್ಬರ ಎಂದಿದ್ದರೆ, ಶೇ. 9ರಷ್ಟು ಮಂದಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಎಂದಿದ್ದಾರೆ. ಆದರೆ ಶೇ. 30ರಷ್ಟು ಮಂದಿ ಕೊರೋನಾ ನಿರ್ವಹಣೆ ಎಂದಿದ್ದಾರೆ.
ಪ್ರದೇಶವಾರು ಜನಾಭಿಪ್ರಾಯ
ಗೋರಖ್ | ಬ್ರಿಜ್ | ಪಶ್ಚಿಮ | ಅವಧ್ | ಕಾಶಿ | ಬುಂದೇಲ್‌ಖಂಡ್ | |
ಹಣದುಬ್ಬರ | 52% | 61% | 64% | 92% | 56% | 72% |
ಕಾನೂನು ಸುವ್ಯವಸ್ಥೆ | 18% | 20% | 14% | 5% | 10% | 10% |
ಕೊರೋನಾ ನಿರ್ವಹಣೆ | 20% | 19% | 22% | 3% | 34% | 15% |
ಸಮೀಕ್ಷೆಯಲ್ಲಿ ಕೇಳಲಾದ ಈ ಐದು ಆಧಾರದಲ್ಲಿ ಯೋಗಿ ಆದಿತ್ಯನಾಥ್ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೋನಾ ನಿರ್ವಹಣೆಯಲ್ಲಿ ಯೋಗಿ ಸರ್ಕಾರ ಎಡವಿದೆ ಎಂಬ ಆರೋಪ ಸದ್ದು ಮಾಡಿದ್ದರೂ, ರಾಜ್ಯದ ಜನತೆ ಈ ವಿಚಾರದಲ್ಲಿ ಸಿಎಂ ಸಾಹೇಬರಿಗೆ ಉತ್ತಮ ಅಂಕ ನೀಡಿದ್ದಾರೆ. ಇನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲೂ ಸರ್ಕಾರ ಅತ್ಯುತ್ತಮ ಸಾಧನೆ ಮಾಡಿದೆ. ಆದರೆ ಹಣದುಬ್ಬರ ಹೆಚ್ಚಿನ ಜನರ ನಿದ್ದೆಗೆಡಿಸಿದೆ. ಈ ವಿಚಾರವನ್ನು ಕೊಂಚ ಸರಿದೂಗಿಸಿದರೆ ಸರ್ಕಾರ ಜನರ ಮನ ಗೆಲ್ಲುವುದರಲ್ಲಿ ಹಾಗೂ ಮತ್ತೆ ಸರ್ಕಾರ ರಚಿಸುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹೀಗಿದ್ದರೂ ಈ ಸಮೀಕ್ಷೆ ಜುಲೈ 27ರಿಂದ ಆಗಸ್ಟ್2ರ ನಡುವೆ ನಡೆದಿದ್ದು, ಇದಾದ ಬಳಿಕದ ರಾಜಕೀಯ ಬೆಳವಣಿಗೆಗಳು ಬದಲಾವಣೆ ತರುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ ಸಮೀಕ್ಷೆಯಲ್ಲಿ ಕಂಡು ಬಂದ ಅಂಶ:
* ಯೋಗಿ ಹಾಗೂ ಅಖಿಲೇಶ್ ಯಾದವ್ ನಡುವಿನ ಪೈಪೋಟಿಯನ್ನು ಗಮನಿಸಿದರೆ ಮಾಜಿ ಸಿಎಂಗಿಂತ ಹಾಲಿ ಸಿಎಂ ಹೆಚ್ಚಿನ ಅಂಕ ಗಳಿಸಿದ್ದಾರೆ.
* ಆರು ಪ್ರದೇಶದ ಸುಮಾರು ಶೇ. 40ರಷ್ಟು ನಾಗರಿಕರು ಜಾತಿ, ಪ್ರಾದೇಶಿಕ, ಸ್ಥಳೀಯ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಅದರಲ್ಲೂ ಹಾಲಿ ಶಾಸಕರನ್ನು ಮತ್ತೆ ಕಣಕ್ಕಿಳಿಸುವುದು ಕೊಂಚ ದುಬಾರಿಯಾಗಬಹುದು.
* ಕಾನೂನು ಸುವ್ಯವಸ್ಥೆ ಹೆಚ್ಚಿನ ಮಹತ್ವ ಪಡೆದರೂ, ಹಣದುಬ್ಬರ ಸಮಸ್ಯೆ ಜನರನ್ನು ಬೆಂಬಿಡದೆ ಕಾಡುತ್ತಿದೆ. ಇದೇ ಮುಂದಿನ ಚುನಾವಣೆಗೆ ಹೆಚ್ಚಿನ ಪ್ರಭಾವ ಬೀರುವುದರಲ್ಲಿ ಅನುಮಾನವೇ ಇಲ್ಲ.
* ಪಶ್ಚಿಮ ಭಾಗದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಕಂಡುಬರಲಿದೆ.
* ಬಿಜೆಪಿ ಸರ್ಕಾರ ಜಾರಿಗೊಳಿಸಿದ ಪಡಿತರ ನೀತಿ, ಕಲ್ಯಾಣ ಯೋಜನೆಗಳು ಪ. ಜಾತಿ/ಪಂಗಡಗಳ ಒಲವು ಗಿಟ್ಟಿಸಿಕೊಳ್ಳುವಲ್ಲಿ ಸಹಾಯಕವಾದರೂ, ಮಾಯಾವತಿ ನೇತೃತ್ವದ BSP ಹಾಗೂ ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷ ಈ ವಿಚಾರದಲ್ಲಿ ಬಿಜೆಪಿಗೆ ದುಬಾರಿಯಾಗಬಹುದು.
* ಇನ್ನು ಭ್ರಷ್ಟಾಚಾರ ವಿಚಾರದಲ್ಲಿ ಯೋಗಿ ಪ್ರಾಮಾಣಿಕರಾಗಿದ್ದರೂ, ಅಧಿಕಾರಿಗಳು ಲಂಚ ಪಡೆಯುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಯೋಗಿ ಸರಕಾರ ಅಖಿಲೇಶ್ ಸರಕಾರಕ್ಕೆ ಹೋಲಿಸಿದಲ್ಲಿ ಈ ವಿಷಯದಲ್ಲಿ ಬೆಸ್ಟ್ ಎನ್ನೋದು ಬಹಜನರ ಅಭಿಪ್ರಾಯ.
* ಹಿಂದುತ್ವ ಅಜೆಂಡಾವಿಲ್ಲದೇ 2022ರ ಚುನಾವಣೆ ಗೆಲ್ಲೋದು ಕಷ್ಟ. ಆದರೆ ಕೇವಲ ಹಿಂದುತ್ವವನ್ನೇ ಮುಂದಿಟ್ಟುಕೊಂಡು ಗೆಲ್ಲುವುದೂ ಸುಲಭವಲ್ಲ. ಇದರೊಂದಿಗೆ ಬೆಲೆ ಏರಿಕೆ ಬಿಸಿ ಇಳಿಸಲು ಸರಕಾರ ಆದಷ್ಟು ಬೇಗೆ ಏನಾದರೂ ಕ್ರಮ ಕೈಗೊಂಡರೆ ಮಾತ್ರ, ಯೋಗಿಯ ಗೆಲುವಿನ ಹಾದಿ ಮತ್ತಷ್ಟು ಸುಲಭವಾಗಲಿದೆ.
* ಸಣ್ಣ, ಪ್ರಾದೇಶಿಕ ಪಕ್ಷಗಳು ಮುಸಲ್ಮಾನರ ಮತ ವಿಭಜಿಸುವ ಸಾಧ್ಯತೆ ಬಹಳ ಕಡಿಮೆ.
* ಪಶ್ಚಿಮ ಭಾಗ ಹಾಗೂ ಬ್ರಿಜ್‌ನ ಕೆಲ ಭಾಗಗಳಲ್ಲಿ ರೈತ ಆಂದೋಲನದ ಪರಿಣಾಮ ಹೆಚ್ಚಿದೆ. ಪಶ್ಚಿಮ ಪ್ರದೇಶ ಹೊರತುಪಡಿಸಿ ಉಳಿದ ಭಾಗದ ಶೇ. 50ಕ್ಕಿಂತ ಹೆಚ್ಚು ಮಂದಿಗೆ ಕೃಷಿ ಬಿಲ್ ಬಗ್ಗೆ ಹೆಚ್ಚು ಮಾಹಿತಿಯೇ ಇಲ್ಲ. ಹೀಗಾಗಿ ಇದೊಂದು ಚುನಾವಣಾ ವಿಚಾರ ಎಂದು ಪರಿಗಣಿಸಿಲ್ಲ.