ಬೆಂಗಳೂರು (ಮೇ 21):  ಏಷ್ಯನ್ ಪೇಂಟ್ಸ್ ಭಾರತದ ಅತೀ ದೊಡ್ಡ ಪೇಂಟ್ ತಯಾರಿಕಾ ಕಂಪನಿ. ದೇಶದ ಏಳಿಗೆಗಾಗಿ ಸದಾ ಕೈಜೋಡಿಸುತ್ತಾ ಬಂದಿರುವ ಏಷ್ಯನ್ ಪೇಂಟ್ಸ್, ಈಗ ಕೋವಿಡ್-19 ವಿರುದ್ಧದ ಹೋರಾಟದಲ್ಲೂ PM Cares ನಿಧಿಗೆ ತನ್ನ ಕೊಡುಗೆಯನ್ನು ನೀಡಿದೆ. ಕೊರೋನಾ ವಾರಿಯರ್ಸ್‌ಗಳಿಗೆಂದೇ ಮುಡುಪಾಗಿಟ್ಟ 'ಒಂದು ದೇಶ- ಒಂದು ಸ್ವರ' ಹಾಡನ್ನು ಪ್ರಾಯೋಜಿಸುವ ಮೂಲಕ  ಏಷ್ಯನ್ ಪೇಂಟ್ಸ್ ಮತ್ತೊಮ್ಮೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಜಯತು ಜಯತು ಭಾರತಂ, ವಸುದೈವ ಕುಟುಂಬಕಂ ಎಂಬ ಹಾಡನ್ನು ಕಳೆದ ಮೇ 17ಕ್ಕೆ ಬಿಡುಗಡೆ ಮಾಡಲಾಗಿದೆ. ಈ ಹಾಡಿನ ಸಂಯೋಜನೆಗೆ ಇಂಡಿಯನ್ ಸಿಂಗರ್ಸ್ ರೈಟ್ಸ್ ಅಸೋಸಿಯೇಶನ್ (ISRA) ಸಂಸ್ಥೆಯ 14 ಭಾಷೆಯ 200 ಕಲಾವಿದರು ಧ್ವನಿಗೂಡಿಸಿರುವುದು ವಿಶೇಷ.

ಕೋವಿಡ್‌-19 ಪಿಡುಗಿನ ಕಷ್ಟಕರ ಸಂದರ್ಭದಲ್ಲಿ  ಐಕ್ಯತೆಯನ್ನು ಸಾರಲು,  ಸೋನು ನಿಗಮ್ ಮತ್ತು ISRA ಸಂಸ್ಥೆಯ ಸಿಇಓ ಸಂಜಯ್ ಟಂಡನ್ ಅವರ ಪರಿಕಲ್ಪನೆ ಇದಾಗಿದೆ. ಲಾಕ್‌ಡೌನ್‌ ವೇಳೆ ಕಲಾವಿದರು ತಮ್ಮ ತಮ್ಮ ಮನೆಯಲ್ಲೇ ಇದ್ದು ಈ ಹಾಡಿಗೆ ಧ್ವನಿಗೂಡಿಸಿರುವುದು ವಿಶೇಷ.  ಬಹಳಷ್ಟು ಹಾಡುಗಾರರು ಹಾಡನ್ನು ರೆಕಾರ್ಡ್‌ ಮಾಡುವ ವೇಳೆ ಅದಕ್ಕೆ ಬೇಕಾದ ಉಪಕರಣಗಳನ್ನು ಕೂಡಾ ಹೊಂದಿರಲಿಲ್ಲ. ಅದಾಗ್ಯೂ, ಇಂತಹ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತು,  ಉದ್ದೇಶಸಾಧನೆಗಾಗಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಲಾವಿದರು ಜೊತೆ ಸೇರಿದ್ದು ಅಸಮಾನ್ಯ ಸಾಧನೆಯೇ ಸರಿ.  ಸಂಗೀತ ಲೋಕದ ದಿಗ್ಗಜರಾದ ಆಶಾ ಭೋಸ್ಲೆ, ಅನೂಪ್ ಜಲೋಟಾ, ಆಲ್ಕಾ ಯಾಗ್ನಿಕ್, ಹರಿಹರನ್, ಕೈಲಾಶ್ ಖೇರ್, ಕವಿತಾ ಕೃಷ್ಣಮೂರ್ತಿ,  ಕುಮಾರ್ ಸಾನು, ಮಹಾಲಕ್ಷ್ಮೀ ಅಯ್ಯರ್, ಮಾನೋ, ಪಂಕಜ್ ಉದಾಸ್, ಎಸ್‌.ಪಿ. ಬಾಲಸುಬ್ರಮಣಿಯನ್, ಶಾನ್, ಸೋನು ನಿಗಮ್, ಸುಧೇಶ್ ಭೋಸ್ಲೆ, ಸುರೇಶ್ ವಾಡ್ಕರ್, ಶೈಲೇಂದ್ರ ಸಿಂಗ್, ಶ್ರೀನಿವಾಸ್, ತಲತ್ ಅಝೀಝ್, ಉದಿತ್ ನಾರಾಯಣ್, ಶಂಕರ್ ಮಹಾದೇವನ್, ಜಸ್ಬೀರ್ ಜಸ್ಸಿ ಮತ್ತು ಇನ್ನೂ 80 ಕಲಾವಿದರು ಈ ಹಾಡಿಗೆ ಧ್ವನಿಗೂಡಿಸಿದ್ದಾರೆ.

ಏಷ್ಯನ್ ಪೇಂಟ್ಸ್‌ನ ಈ ಚಟುವಟಿಕೆ ಬಗ್ಗೆ ಮಾತನಾಡಿದ ಕಂಪನಿಯ ಎಂ.ಡಿ & ಸಿಇಓ ಅಮಿತ್ ಸೈಂಗಲ್, ಏಷ್ಯನ್‌ ಪೇಂಟ್ಸ್‌  ಎಂಬುವುದು ಮೊದಲಿನಿಂದಲೂ ಕಾಳಜಿಯುಳ್ಳ ಬ್ರಾಂಡ್‌ ಆಗಿದೆ. ಒಂದು ದೇಶವಾಗಿ ನಾವು, ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು, ಕಾರ್ಯಪ್ರವೃತರಾಗಲು ಇದು ಸಕಾಲ. ಮನೆಯೊಂದಿಗಿರುವ ನಮ್ಮ ಭಾವನಾತ್ಮಕ ನಂಟಿನ ಹಿನ್ನೆಲೆಯಲ್ಲಿ, ದೇಶದ ಸುಮಾರು 200 ಖ್ಯಾತ ಕಲಾವಿದರು ಸೇರಿ ಹಾಡಿರುವ ಈ ಐಕ್ಯತೆಯ ಹಾಡನ್ನು ಪ್ರಸ್ತುತಪಡಿಸಲು ನಮಗೆ ಹೆಮ್ಮೆಯಾಗುತ್ತಿದೆ, ಎಂದರು.

ಮುಂದುವರಿದು, ಭಾರತೀಯ ಜನಪ್ರಿಯ ಬ್ರಾಂಡ್‌ ಎಂಬ ನೆಲೆಯಲ್ಲಿ, ದೇಶವಾಸಿಗಳು, ಅದರಲ್ಲೂ ವಿಶೇಷವಾಗಿ ಮಹಿಳೆಯರ ಏಳಿಗೆಗಾಗಿ PM Cares ನಿಧಿಗೆ ಕೊಡುಗೆ ನೀಡುವುದು ನಮಗೆ ಇನ್ನಷ್ಟು ಚೈತನ್ಯ ತುಂಬಲಿದೆ. . 'ಓಂದು ದೇಶ- ಒಂದು ಸ್ವರ' ಬರೇ ಒಂದು ಹಾಡಲ್ಲ, ದೇಶದ ಜನರ ಭಾವನೆಯನ್ನು ಅಭಿವ್ಯಕ್ತಿಪಡಿಸುವ ಒಂದು ಚಳವಳಿಯಾಗಿದೆ. ಈ ಹಾಡು ಕೇಳುಗರಲ್ಲಿ ಸ್ಫೂರ್ತಿ ತುಂಬುವುದರ ಜೊತೆಗೆ, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮನ್ನು ಇನ್ನಷ್ಟು ಬಲಿಷ್ಠಗೊಳಿಸುವ ವಿಶ್ವಾಸ ನನಗಿದೆ, ಎಂದು ಅಮಿತ್ ಸೈಂಗಲ್ ತಿಳಿಸಿದರು.    

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಏಷ್ಯನ್ ಪೇಂಟ್ಸ್ PM Cares ಮತ್ತು ಇತರ ರಾಜ್ಯಗಳ ಸಿಎಂ ಪರಿಹಾರ ನಿಧಿಗೆ ಈಗಾಗಲೇ 35 ಕೋಟಿ ರೂ. ನೀಡಿದೆ. ಈ ಹಾಡನ್ನು ಮೇ. 17ರಂದು ಸುಮಾರು ನೂರಕ್ಕಿಂತಲೂ ಹೆಚ್ಚು ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡಲಾಯಿತು. ಟೀವಿ, ರೇಡಿಯೋ, ಸೋಶಿಯಲ್ ಮೀಡಿಯಾ, ಅಪ್ಲಿಕೇಶನ್ಸ್, ಓಟಿಟಿ, ವಿಓಡಿ, ಐಎಸ್‌ಪಿ, ಡಿಟಿಎಚ್‌ ಮತ್ತು ಸಿಆರ್‌ಬಿಟಿ ಸೇರಿದಂತೆ ನೂರಕ್ಕಿಂತಲೂ ಹೆಚ್ಚು ಬ್ರಾಡ್‌ಕಾಸ್ಟ್ ಮತ್ತು ಟೆಕ್‌ ಪ್ಲಾಟ್‌ಫಾರ್ಮ್‌ಗಳು ಈ ಕೆಲಸದಲ್ಲಿ  ಕೈಜೋಡಿಸಿವೆ. 

ಇದರಿಂದ ಬರುವ ಎಲ್ಲಾ ಆದಾಯ, ಕೋವಿಡ್-19 ವಿರುದ್ಧ ಹೋರಾಡಲು PM Cares ನಿಧಿಗೆ ಜಮೆಯಾಗಲಿದೆ. ಈ ಹಾಡು-  ಹಿಂದಿ, ಬೆಂಗಾಲಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಳಯಾಳಂ, ಭೋಜ್‌ಪುರಿ, ಅಸ್ಸಾಮಿ, ಕಾಶ್ಮೀರಿ, ಸಿಂಧಿ, ರಾಜಸ್ತಾನಿ ಮತ್ತು ಒಡಿಯಾ- ಹೀಗೆ 14 ಭಾಷೆಗಳನ್ನೊಳಗೊಂಡಿದೆ.