* ದೇಶದಲ್ಲಿ ಹೆಚ್ಚುತ್ತಿದೆ ಕೊರೋನಾ ಸೋಂಕು* ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರಗಳ ಪರದಾಟ* ರಾಜ್ಯಗಳ ಪರಿಸ್ಥಿತಿ ಅವಲೋಕಿಸಲು ಕೇಂದ್ರದಿಂದ ತಂಡ

ನವದೆಹಲಿ(ಜ.20): ದೇಶ, ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ವೀಕೆಂಡ್ ಕರ್ಫ್ಯೂ ಸೇರಿದಂತೆ ಅನೇಕ ನಿಯಮಗಳನ್ನು ಜಾರಿಗೊಳಿಸಿದ್ದರೂ ಈ ಸೋಂಕಿಗೆ ಕಡಿವಾಣ ಬೀಳುತ್ದತಿಲ್ಲ. ಹೀಗಿರುವಾಗ ಕೇಂದ್ರ ತಂಡ ಕೊರೋನಾ ನಿಯಂತ್ರಿಸಲು ಹರಸಾಹಸ ಪಡುತ್ತಿರುವ ರಾಜ್ಯಗಳಿಗೆ ವಿಶೇಷ ತಂಡಗಳನ್ನು ರವಾನಿಸಿದೆ.

ಹೌದು ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ದೆಹಲಿ ಹಾಗೂ ಉತ್ತರ ಪ್ರದೇಶ ಹೀಗೆ ದೇಶದ ಆರು ರಾಜ್ಯಗಳಲ್ಲಿ ಕೊರೋನಾ ಅಂಕಿ ಅಂಶಗಳು ದಿನೇ ದಿನೇ ಹೆಚ್ಚುತ್ತಿದ್ದು, ಕಳವಳಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸೂಕ್ತ ಕ್ರಮ ಕೈಗೊಂಡು ಸೋಂಕು ನಿಯಂತ್ರಿಸಲು ಕೇಂದ್ರದಿಂದ ತಜ್ಞರ ವಿಶೇಷ ತಂಡಗಳನ್ನು ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೆಶ್ ಭೂಷಣ್ ತಿಳಿಸಿದ್ದಾರೆ.

2.82 ಲಕ್ಷ ಕೇಸ್‌: 8 ತಿಂಗಳ ಗರಿಷ್ಠ

3 ದಿನದಿಂದ ಇಳಿಯುತ್ತಿದ್ದ ಕೋವಿಡ್‌ ಪ್ರಕರಣ ಸಂಖ್ಯೆ ಬುಧವಾರ ಭಾರೀ ಪ್ರಮಾಣ ಏರಿಕೆಯಾಗಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 2,82,970 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು 8 ತಿಂಗಳ ಗರಿಷ್ಠ. ಅಲ್ಲದೇ, ಇದು ಮಂಗಳವಾರಕ್ಕಿಂತ ಶೇ.18ರಷ್ಟುಅಧಿಕ.

ಇದೇ ಅವಧಿಯಲ್ಲಿ 441 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 18.31 ಲಕ್ಷಕ್ಕೆ ಹೆಚ್ಚಿದೆ. ಇದು ಕಳೆದ 232 ದಿನಗಳ ಗರಿಷ್ಠ ಸಂಖ್ಯೆಯಾಗಿದೆ. ಚೇತರಿಕೆ ಪ್ರಮಾಣ ಶೇ.93.88ಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರ ಶೇ.15.13ಕ್ಕೆ ಏರಿಕೆಯಾಗಿದೆ. ವಾರದ ಪಾಸಿಟಿವಿಟಿ ದರ ಶೇ.15.53ರಷ್ಟಿದೆ.

ಒಟ್ಟು ಸೋಂಕಿತರ ಸಂಖ್ಯೆ 3.79 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,87,202ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 3.55 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ 158.88 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

70 ಒಮಿಕ್ರೋನ್‌ ಕೇಸ್‌ ಪತ್ತೆ:

ಬುಧವಾರ ದೇಶದಲ್ಲಿ 70 ಒಮಿಕ್ರೋನ್‌ ಪ್ರಕರಣಗಳು ಪತ್ತೆಯಾಗಿವೆ. ತನ್ಮೂಲಕ ಒಟ್ಟು ಒಮಿಕ್ರೋನ್‌ ಸೋಂಕಿತರ ಸಂಖ್ಯೆ 8961ಕ್ಕೆ ಹೆಚ್ಚಳವಾಗಿದೆ.