* ಲಸಿಕೆ ಪಡೆಯದವರಿಗೆ ಡೆಲ್ಟಾ ವೈರಸ್ ಡೇಂಜರ್* ಬೇರೆಲ್ಲ ರೂಪಾಂತರಿಗಿಂತ ವೇಗವಾಗಿ ಹರಡುವ ಅತ್ಯಂತ ಅಪಾಯಕಾರಿ ಕೊರೋನಾ ಇದು* ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ* ಭಾರತದಲ್ಲಿ ಪತ್ತೆಯಾದ ವೈರಸ್ ಈಗ 85 ದೇಶದಲ್ಲಿ ದೃಢ
ಜಿನೆವಾ(ಜೂ.27): ಭಾರತದಲ್ಲಿ ಮೊದಲು ಪತ್ತೆಯಾದ ಹಾಗೂ ಭಾರತೀಯರು ಕೋವಿಡ್-19 ಎರಡನೇ ಅಲೆಯಿಂದ ನರಳುವಂತೆ ಮಾಡಿದ ಕೊರೋನಾ ರೂಪಾಂತರಿ ‘ಡೆಲ್ಟಾ’ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ವೈರಸ್. ಕೊರೋನಾದ ಉಳಿದೆಲ್ಲಾ ರೂಪಾಂತರಿಗಳಿಗಿಂತ ಇದು ವೇಗವಾಗಿ ಹಬ್ಬುತ್ತದೆ. ಈವರೆಗೂ ಲಸಿಕೆ ಪಡೆಯದವರಲ್ಲಿ ಈ ಸೋಂಕು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆಯ ಗಂಟೆ ಮೊಳಗಿಸಿದೆ.
"
‘ವಿಶ್ವಾದ್ಯಂತ ಕೊರೋನಾದ ಡೆಲ್ಟಾ ರೂಪಾಂತರಿ ಬಗ್ಗೆ ಸಾಕಷ್ಟುಕಳವಳ ವ್ಯಕ್ತವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಗೂ ಅದೇ ಕಳವಳ ಇದೆ. 85 ದೇಶಗಳಲ್ಲಿ ಪತ್ತೆಯಾಗಿರುವ ಈ ವೈರಸ್ ಅತ್ಯಂತ ವೇಗವಾಗಿ ಹರಡುವ ಕೊರೋನಾ ರೂಪಾಂತರಿಯಾಗಿದೆ. ಲಸಿಕೆ ಪಡೆಯದವರಲ್ಲಿ ಶರವೇಗದಲ್ಲಿ ಕಾಣಿಸಿಕೊಳ್ಳುತ್ತಿದೆ’ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್ ಅಧಾನೋಮ್ ಘೇಬ್ರೆಯೀಸಸ್ ಅವರು ಸುದ್ದಿಗಾರರಿಗೆ ತಿಳಿಸಿದರು.
‘ಕೆಲವು ದೇಶಗಳು ಸಾರ್ವಜನಿಕ ಆರೋಗ್ಯ ಹಾಗೂ ಸಾಮಾಜಿಕ ಕ್ರಮಗಳನ್ನು ಸಡಿಲಗೊಳಿಸಿವೆ. ಅಲ್ಲಿ ವೈರಸ್ ಪ್ರಸರಣ ಹೆಚ್ಚಾಗುತ್ತಿದೆ. ಇದರರ್ಥ ಹೆಚ್ಚು ಮಂದಿ ಆಸ್ಪತ್ರೆ ಸೇರಬೇಕಾಗುತ್ತದೆ. ಇದರಿಂದ ಸಾವಿನ ಅಪಾಯ ಹೆಚ್ಚುತ್ತದೆ. ತನ್ಮೂಲಕ ಆರೋಗ್ಯ ಕಾರ್ಯಕರ್ತರು ಹಾಗೂ ಆರೋಗ್ಯ ವ್ಯವಸ್ಥೆ ಮತ್ತಷ್ಟುಶ್ರಮಿಸಬೇಕಾಗುತ್ತದೆ’ ಎಂದು ಹೇಳಿದರು.
‘ಕೋವಿಡ್‌ನ ಹೊಸ ರೂಪಾಂತರಿಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ವೈರಸ್ ಇರುವುದೇ ಹಾಗೆ. ಅವು ವಿಕಾಸ ಹೊಂದುತ್ತವೆ. ಪ್ರಸರಣ ತಡೆಯುವ ಮೂಲಕ ನಾವು ಹೊಸ ರೂಪಾಂತರಿಗಳನ್ನು ತಪ್ಪಿಸಬಹುದು’ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಡಬ್ಲ್ಯುಎಚ್‌ಒದ ಕೋವಿಡ್ ತಾಂತ್ರಿಕ ತಂಡದ ಮುಖ್ಯಸ್ಥೆ ಡಾ| ಮಾರಿಯಾ ವ್ಯಾನ್ ಕೆರ್ಖೋವ್, ಡೆಲ್ಟಾವೈರಸ್ ಅತ್ಯಂತ ಅಪಾಯಕಾರಿಯಾಗಿದೆ ಎಂದು ತಿಳಿಸಿದರು.
