Asianet Suvarna News Asianet Suvarna News

Kejriwal story: ಭ್ರಷ್ಟಾಚಾರ ವಿರೋಧಿ ಹೋರಾಟದ ಪ್ರಮುಖ ನಾಯಕ ಈಗ ಭ್ರಷ್ಟಾಚಾರದ ಕೇಸ್‌ನಲ್ಲೇ ಜೈಲು ಹಕ್ಕಿ

ಕಳೆದ ಎರಡು ವರ್ಷಗಳಿಂದ ದೆಹಲಿ ರಾಜಕೀಯದಲ್ಲಿ ಸತತವಾಗಿ ಸುದ್ದಿಯಲ್ಲಿರುವ ಅಕ್ರಮ ಮದ್ಯ ನೀತಿ ಹಗರಣವು, ಆಮ್ ಆದ್ಮಿ ಪಕ್ಷದ ಉನ್ನತ ನಾಯಕರನ್ನು ತನಿಖೆಗೆ ಒಳಪಡಿಸಿದೆ ಮತ್ತು ಇದೀಗ ಕೇಜ್ರಿವಾಲ್ ಕೂಡ ಅದರ ಹಿಡಿತಕ್ಕೆ ಸಿಕ್ಕಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟದೊಂದಿಗೆ ರಾಜಕೀಯಕ್ಕೆ ಬಂದ ಸಿಎಂ ಕೇಜ್ರಿವಾಲ್ ಇಂದು ಭ್ರಷ್ಟಾಚಾರದ ಆರೋಪದಲ್ಲೇ ಜೈಲುಪಾಲಾಗಿದ್ದಾರೆ.
 

Arvind  Kejriwal story biggest face of fight against corruption is in jail in corruption case itself  san
Author
First Published Mar 21, 2024, 10:46 PM IST

ನವದೆಹಲಿ (ಮಾ.21):  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ರಾತ್ರಿ ಬಂಧಿಸಿದ್ದಾರೆ. ಅಕ್ರಮ ಮದ್ಯ  ನೀತಿ ಹಗರಣ ಪ್ರಕರಣದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸತತ 9 ಸಮನ್ಸ್ ಕಳುಹಿಸಿದ ಇಡಿ ತಂಡ ಗುರುವಾರ ಸಂಜೆ 10ನೇ ಸಮನ್ಸ್ ನೊಂದಿಗೆ ಕೇಜ್ರಿವಾಲ್ ಮನೆಗೆ ತಲುಪಿತ್ತು. ಸಿಎಂ ನಿವಾಸದಲ್ಲಿ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಈ ವೇಳೆ ಇಡಿ ಜಂಟಿ ನಿರ್ದೇಶಕ ಕಪಿಲ್ ರಾಜ್ ಕೂಡ ಕೇಜ್ರಿವಾಲ್ ನಿವಾಸದಲ್ಲಿ ಹಾಜರಿದ್ದರು. ಕೇಜ್ರಿವಾಲ್ ಅವರ ಹೇಳಿಕೆಯನ್ನು ಪಿಎಂಎಲ್‌ಎ ಸೆಕ್ಷನ್ 50 ರ ಅಡಿಯಲ್ಲಿ ದಾಖಲಿಸಿದ ಬೆನ್ನಲ್ಲಿಯೇ  ಅವರನ್ನು ಬಂಧಿಸಲಾಯಿತು. ಸಿಎಂ ಕೇಜ್ರಿವಾಲ್ ಅಧಿಕಾರದಲ್ಲಿರುವಾಗಲೇ ಬಂಧನಕ್ಕೊಳಗಾದ ಮೊದಲ ಸಿಎಂ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ. 

ಸಿಎಂ ಅರವಿಂದ್ ಕೇಜ್ರಿವಾಲ್‌ ಬಂಧನಕ್ಕೆ ಒಳಗಾಗುತ್ತಾರೆ ಎನ್ನುವ ಸೂಚನೆಗಳು ಈಗಾಗಲೇ ಸಿಕ್ಕಿದ್ದವು. ಕಳೆದ ಎರಡು ವರ್ಷಗಳಿಂದ ದೆಹಲಿ ರಾಜಕೀಯದಲ್ಲಿ ಅಕ್ರಮ ಮದ್ಯ ನೀತಿ ಹಗರಣ ಸತತವಾಗಿ ಸುದ್ದಿಯಲ್ಲಿದೆ. ಇದೇ ಕೇಸ್‌ನಲ್ಲಿ ಆಮ್‌ ಆದ್ಮಿ ಪಾರ್ಟಿಯ ಹಲವು ನಾಯಕರು ಜೈಲುಪಾಲಾಗಿದ್ದಾರೆ. ಆಪ್‌ನ ಪ್ರಮುಖ ನಾಯಕ ಮನೀಷ್‌ ಸಿಸೋಡಿಯಾ ಜೈಲಿನಲ್ಲಿದ್ದು ವರ್ಷಗಳೇ ಕಳೆದಿವೆ. ಈಗ ಅರವಿಂದ್ ಕೇಜ್ರಿವಾಲ್‌ ಈ ಕೇಸ್‌ನಲ್ಲಿ ಬಂಧಿತರಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟದೊಂದಿಗೆ ರಾಜಕೀಯಕ್ಕೆ ಬಂದ ಸಿಎಂ ಕೇಜ್ರಿವಾಲ್ ಇಂದು ಭ್ರಷ್ಟಾಚಾರದ ಆರೋಪದಲ್ಲೇ ಜೈಲು ಪಾಲಾಗಿರುವುದು ವಿಪರ್ಯಾಸ.

ದೆಹಲಿಯ 7ನೇ ಸಿಎಂ ಆಗಿ ಅಧಿಕಾರಕ್ಕೆ ಏರಿದ್ದ ಅರವಿಂದ್ ಕೇಜ್ರಿವಾಲ್‌, ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಬಹುಕಾಲ ಸಿಎಂ ಆಗಿದ್ದ ಶೀಲಾ ದೀಕ್ಷಿತ್‌ ಅವರನ್ನು ಸೋಲಿಸಿದ್ದರು. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳುವಳಿಯಲ್ಲಿದ್ದ ಅರವಿಂದ್‌ ಕೇಜ್ರಿವಾಲ್‌ ಅದರಿಂದ ಪಡೆದ ಹೆಸರನ್ನೇ ರಾಜಕೀಯಕ್ಕೆ ವೇದಿಕೆಯನ್ನಾಗಿ ಮಾಡಿಕೊಂಡಿದ್ದರು.

1968 ಆಗಸ್ಟ್‌ 16 ರಂದು ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ ಜನಿಸಿದ ಅರವಿಂದ್‌ ಕೇಜ್ರಿವಾಲ್‌, ಹಿಸಾರ್‌ನಲ್ಲಿ ತಮ್ಮ ಶಾಲಾ ಶಿಕ್ಷಣ ಮುಗಿಸಿದ್ದರು. ಐಐಟಿ ಖರಗ್‌ಪುರ್‌ನ ಮಾಜಿ ವಿದ್ಯಾರ್ಥಿಯಾಗಿರುವ ಅವರು ಮೆಕಾನಿಕಲ್‌ ಇಂಜಿನಿಯರಿಂಗ್‌ನ ಪದವೀಧರರಾಗಿದ್ದಾರೆ. ಕೆಲವು ವರ್ಷಗಳ ಕಾಲ ಟಾಟಾ ಸ್ಟೀಲ್‌ನಲ್ಲಿ ಕೆಲಸ ಮಾಡಿದ್ದ ಅರವಿಂದ್ ಕೇಜ್ರಿವಾಲ್‌ ನಂತರ ಸಿವಿಲ್‌ ಸರ್ವೀಸ್‌ ಪರೀಕ್ಷೆ ತೆಗೆದುಕೊಂಡು ಅದರಲ್ಲಿ ಯಶಸ್ವಿಯೂ ಆಗಿದ್ದರು. 1993ರಲ್ಲಿ ಕಂದಾಯ ಇಲಾಖೆಯ ಅಧಿಕಾರಿಯಾಗಿ ಸೇರಿದ ಕೇಜ್ರಿವಾಲ್‌, ಎರಡೇ ವರ್ಷಗಳಲ್ಲಿ ತಮ್ಮ ಬ್ಯಾಚ್‌ಮೇಟ್‌ ಸುನೀತಾರನ್ನು ವಿವಾಹವಾಗಿದ್ದರು.

ಭಾರತೀಯ ಕಂದಾಯ ಸೇವೆಯಲ್ಲಿ ಕೆಲಸ ಮಾಡುವಾಗ, ಅವರು ಸಾಮಾಜಿಕ ಮತ್ತು ಸಾರ್ವಜನಿಕ ಕಾಳಜಿಯ ವಿಷಯಗಳತ್ತ ಗಮನ ಹರಿಸಲು ಪ್ರಾರಂಭಿಸಿದರು. ಇಲ್ಲಿಂದ, ದೆಹಲಿಯ ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸಲು, ಮನೀಶ್ ಸಿಸೋಡಿಯಾ ಅವರ ಸಹಯೋಗದಲ್ಲಿ 'ಪರಿವರ್ತನ್ ಆಂದೋಲನ' ಎಂಬ ಆಂದೋಲನದ ಅಡಿಪಾಯವನ್ನು ಹಾಕಿದ್ದರು. 2011 ರಲ್ಲಿ, ಅವರು ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರಲು ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯನ್ನು ಮುನ್ನಡೆಸಲು ಅಣ್ಣಾ ಹಜಾರೆ ಅವರಿಗೆ ಜೊತೆಯಾಗಿದ್ದರು. ಅದೇ ವರ್ಷದ ಕೊನೆಯಲ್ಲಿ, ಅವರು ತಮ್ಮದೇ ಆದ ರಾಜಕೀಯ ಪಕ್ಷವಾದ ಆಪ್‌ ಅನ್ನು ಸ್ಥಾಪನೆ ಮಾಡಿದ್ದಲ್ಲದೆ, 2013 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು.

Breaking: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅರೆಸ್ಟ್‌

ನವದೆಹಲಿ ಕ್ಷೇತ್ರದಲ್ಲಿ ಮೂರು ಬಾರಿಯ ಸಿಎಂ ಆಗಿದ್ದ ಕಾಂಗ್ರೆಸ್‌ನ ಶೀಲಾ ದೀಕ್ಷಿತ್‌ ಅವರನ್ನು ಕೇಜ್ರಿವಾಲ್‌ ಮಣಿಸಿದರು. ಆ ಮೂಲಕ ದೆಹಲಿಯ ಮುಖ್ಯಮಂತ್ರಿಯಾದ 2ನೇ ಕಿರಿಯ ವ್ಯಕ್ತಿ ಎನ್ನುವ ದಾಖಲೆಯನ್ನೂ ಮಾಡಿದ್ದರು. ಆದರೆ, ಈ ಸರ್ಕಾರ ಹೆಚ್ಚು ದಿನ ಉಳಿಯಲಿಲ್ಲ. ಕೇವಲ 49 ದಿನಗಳಲ್ಲೇ ಸರ್ಕಾರ ಕುಸಿದು ಬಿದ್ದಿತ್ತು.  2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸಿ ಸೋತಿದ್ದರು.

Electoral Bond: ಲಾಟರಿ ಕಿಂಗ್‌ ಕಂಪನಿಯಿಂದ ಟಿಎಂಸಿಗೆ 542 ಕೋಟಿ, ಬಿಜೆಪಿಗೆ 'ಮೇಘಾ' ಗರಿಷ್ಠ ಡೋನರ್‌!

2015ರಲ್ಲಿ ನಡೆದ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿ ದೆಹಲಿಯ 70 ಕ್ಷೇತ್ರಗಳ ಪೈಕಿ 67ರಲ್ಲಿ ಗೆಲುವು ಸಾಧಿಸಿತ್ತು. ಅದರೊಂದಿಗೆ ಕೇಜ್ರಿವಾಲ್‌ ಮತ್ತೆ ಸಿಎಂ ಆಗಿ ಅಧಿಕಾರಕ್ಕೇರಿದರು. 2015ರ ಫೆಬ್ರವರಿ 14ರಂದು ಅವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 2020 ರಲ್ಲಿ, ಅವರು ಮೂರನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾದರು ಮತ್ತು ಈಗ ಅವರು ಭಾರತದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಸಿಎಂ ಕೇಜ್ರಿವಾಲ್ ಅವರು 2006 ರಲ್ಲಿ ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತನಾಗಿ ತಮ್ಮ ಪಾತ್ರ ನಿರ್ವಹಿಸಿದ್ದಕ್ಕಾಗಿ ಇವರಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ನೀಡಲಾಗಿತ್ತು

Follow Us:
Download App:
  • android
  • ios