ನವದೆಹಲಿ(ಫೆ.11): ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.

"

ಚುನಾವಣಾ ಆಯೋಗ ದೆಹಲಿಯ 70 ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದ್ದು, ಆಡಳಿತಾರೂಢ ಆಪ್ 63 , ಬಿಜೆಪಿ 07 , ಹಾಗೂ ಕಾಂಗ್ರೆಸ್ ಶೂನ್ಯ ಕ್ಷೇತ್ರಗಳಲ್ಲಿ ಜಯ ದಾಖಲಿಸಿವೆ.

ಇನ್ನು ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ಪಕ್ಷದ ಕಚೇರಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ದೆಹಲಿಯ ಮತದಾರರಿಗೆ ಧನ್ಯವಾದ ಎಂದು ಹೇಳಿದರು.

ಇದು ನಮ್ಮ ಗೆಲುವಲ್ಲ, ದೆಹಲಿ ಜನತೆಯ ಗೆಲುವು, ಅಭಿವೃದ್ದಿಗೆ ಸಿಕ್ಕ ಗೆಲುವು, ಇದು ಭಾರತ ಮಾತೆಗೆ ಸಂದ ಜಯ ಎಂದು ಅರವಿಂದ್ ಕೇಜ್ರಿವಾಲ್ ಈ ವೇಳೆ ಭಾವುಕರಾಗಿ ನುಡಿದರು.

ಕೇಜ್ರಿ ಕ್ರೇಜ್‌ಗೆ ದೆಹಲಿ ಮರುಳಾಗಿದ್ದು ಹೇಗೆ?: ಅಭಿವೃದ್ಧಿಗೆ ಜನ ಬೆಂಬಲಿಸೋದು ಹೀಗೆ!

ದೆಹಲಿ ಜನತೆ ಅಭಿವೃದ್ಧಿಗೆ ತಮ್ಮ ಮತ ನೀಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಅಧಿಕಾರ ನೀಡಿದ್ದಕ್ಕಾಗಿ ದೆಹಲಿಯ ಪ್ರತೀಯೊಬ್ಬ ಮತದಾರನಿಗೂ ನಾನು ತುಂಬು ಹೃದಯದ ಧನ್ಯವಾದ ಹೇಳುತ್ತೇನೆ ಎಂದು ಕೇಜ್ರಿವಾಲ್ ಹೇಳಿದರು.

ಆಪ್’ಗೆ ಮತ ನೀಡುವ ಮೂಲಕ ದೆಹಲಿ ಜನತೆ ಹೊಸ ಬಗೆಯ ರಾಜಕೀಯಕ್ಕೆ ನಾಂದಿ ಹಾಡಿದ್ದು, ಅಭಿವೃದ್ಧಿ ಆಧಾರಿತ ರಾಜಕಾರಣ ಇನ್ನು ಮುನ್ನಲೆಗೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.