ಕೇಜ್ರಿವಾಲ್ ಬಂಧನಕ್ಕೆ ಜರ್ಮನಿ ಸರ್ಕಾರ ಕ್ಯಾತೆ: ರಾಯಭಾರಿ ಕರೆಸಿಕೊಂಡು ತೀವ್ರ ತರಾಟೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಜರ್ಮನಿ ಸರ್ಕಾರ ಆಕ್ಷೇಪ ಎತ್ತಿದೆ. ‘ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಕೇಜ್ರಿವಾಲ್ ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಿಚಾರಣೆಯನ್ನು ಪಡೆಯುತ್ತಾರೆ ಎಂದು ತಾವು ನಿರೀಕ್ಷಿಸಿದ್ದೇವೆ‘ ಎಂದು ಜರ್ಮನ್ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.
ನವದೆಹಲಿ (ಮಾ.24): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಜರ್ಮನಿ ಸರ್ಕಾರ ಆಕ್ಷೇಪ ಎತ್ತಿದೆ. ‘ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಕೇಜ್ರಿವಾಲ್ ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಿಚಾರಣೆಯನ್ನು ಪಡೆಯುತ್ತಾರೆ ಎಂದು ತಾವು ನಿರೀಕ್ಷಿಸಿದ್ದೇವೆ‘ ಎಂದು ಜರ್ಮನ್ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಇದು ಭಾರತ ಸರ್ಕಾರದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದಿಲ್ಲಿಯಲ್ಲಿನ ಜರ್ಮನಿ ರಾಯಭಾರಿ ಜಾರ್ಜ್ ಎಂಜ್‌ವೀಲರ್ ಅವರನ್ನು ಕರೆಸಿಕೊಂಡ ಭಾರತದ ವಿದೇಶಾಂಗ ಸಚಿವಾಲಯ, ‘ನೀವು ಭಾರತದ ಆಂತರಿಕ ವ್ಯವಹಾರದಲ್ಲಿ ಮಾಡುತ್ತಿರುವ ಸ್ಪಷ್ಟ ಹಸ್ತಕ್ಷೇಪ ಇದು.
ಬೇರೆ ಬೇರೆ ದೇಶಗಳಂತೆ ಭಾರತದಲ್ಲೂ ನ್ಯಾಯಿಕ ಪ್ರಕ್ರಿಯೆ ಪ್ರಕಾರ ಆಪಾದಿತರ ವಿರುದ್ಧ ವಿಚಾರಣೆ ನಡೆಯುತ್ತದೆ. ಆದರೆ ಇದನ್ನು ಪೂರ್ವಾಗ್ರಹಪೀಡಿತವಾಗಿ ನೋಡುವುದು ಸಲ್ಲದು’ ಎಂದಿದೆ. ಬೆಳಗ್ಗೆ 11.25ಕ್ಕೆ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಆಗಮಿಸಿದ ಜಾರ್ಜ್ ನಿರಾಶೆಯ ಮುಖ ಹೊತ್ತು 11.30ಕ್ಕೆ ಐದೇ ನಿಮಿಷದಲ್ಲಿ ನಿರ್ಗಮಿಸಿದರು. ಭೇಟಿಯ ಸಂಕ್ಷಿಪ್ತತೆಯು ಭಾರತದ ಕೋಪತಾಪದ ದ್ಯೋತಕ ಎಂದು ಮೂಲಗಳು ಹೇಳಿವೆ.
ಜರ್ಮನಿ ಹೇಳಿದ್ದೇನು?: ಜರ್ಮನ್ ವಿದೇಶಾಂಗ ಸಚಿವಾಲಯದ ವಕ್ತಾರರು ಮಾತನಾಡಿ, ‘ನಾವು ಗಮನಿಸಿದ್ದೇವೆ, ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಈ ಪ್ರಕರಣದಲ್ಲಿ (ಕೇಜ್ರಿವಾಲ್ ಕೇಸಿನಲ್ಲಿ) ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಮೂಲಭೂತ ಪ್ರಜಾಪ್ರಭುತ್ವದ ತತ್ವಗಳಿಗೆ ಸಂಬಂಧಿಸಿದ ಮಾನದಂಡಗಳನ್ನು ಸಹ ಅನ್ವಯಿಸಲಾಗುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ನಿರೀಕ್ಷಿಸುತ್ತೇವೆ. ಆರೋಪಗಳನ್ನು ಎದುರಿಸುತ್ತಿರುವ ಯಾವುದೇ ವ್ಯಕ್ತಿಯಂತೆ ಕೇಜ್ರಿವಾಲ್ ಕೂಡ ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಿಚಾರಣೆಗೆ ಅರ್ಹರಾಗಿದ್ದಾರೆ’ ಎಂದಿದ್ದರು. ಈ ಮೂಲಕ ಕೇಜ್ರಿವಾಲ್ ಬಂಧನ ಪ್ರಕ್ರಿಯೆ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದರು.
ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ ತನಿಖೆ ಕುಣಿಕೆ ಇನ್ನಷ್ಟು ಬಿಗಿ: ಜಲಮಂಡಳಿ ಕೇಸಲ್ಲೂ ವಿಚಾರಣೆ ಸಾಧ್ಯತೆ
ಜೈಲಿಂದ ಬಿಡುಗಡೆ ಬಳಿಕ ದೇಶದಲ್ಲಿ ಕೇಜ್ರಿ ಕ್ರಾಂತಿ: ಬಿಜೆಪಿ ದೇಶದಲ್ಲಿ ಸರ್ವಾಧಿಕಾರ ಜಾರಿ ಬಯಸಿದೆ. ವಿಪಕ್ಷಗಳ ನಾಯಕರನ್ನು ಜೈಲಿಗೆ ಕಳುಹಿಸುವುದು ಸ್ವಾತಂತ್ರವಲ್ಲ. ನಾವೆಲ್ಲಾ ಒಂದಾಗಿ ಈ ವಿಷಯದಲ್ಲಿ ಹೋರಾಡದ ಹೋದಲ್ಲಿ ದೇಶವನ್ನು ಬಿಜೆಪಿಗರು ಹಾಳುಗೆಡವುತ್ತಾರೆ. ರಾಜಕೀಯ ಕಾರಣಕ್ಕಾಗಿ ಜೈಲಿಗೆ ಕಳುಹಿಸಲ್ಪಟ್ಟ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಯಾವುದೇ ಕಾನೂನು ಕೂಡಾ ಹೇಳುವುದಿಲ್ಲ. ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೊರಬಂದು ದೇಶದಲ್ಲಿ ಹೊಸ ಕ್ರಾಂತಿ ಮಾಡಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.