ಇದೇನು ಅಂತಾ ಗೆಸ್ ಮಾಡ್ತೀರಾ? ಶ್ರೀರಾಮ ನಮ್ಮನ್ನು ನೋಡಿದ್ದು ಇದರಿಂದಲೇ..!
ಹೌದು, ಭಗವಾನ್ ಶ್ರೀರಾಮಚಂದ್ರನ ಮೂರ್ತಿಗೂ ಇಲ್ಲಿನ ಚಿತ್ರಕ್ಕೂ ಒಂದು ನಂಟಿದೆ. ಇಂದು ಬಾಲಕರಾಮ ನಮ್ಮೆಲ್ಲರನ್ನೂ ನೋಡುತ್ತಿದ್ದಾನೆ ಎಂದಾದಲ್ಲಿ ಅದಕ್ಕೆ ಕಾರಣ ಈ ಚಿತ್ರದಲ್ಲಿರುವ ವಸ್ತು..
ಬೆಂಗಳೂರು (ಫೆ.10): ಇಡೀ ದೇಶ ಇಂದು ಸಂಭ್ರಮದಲ್ಲಿದೆ. ದೇಶದ ಹಿಂದುಗಳು ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಶತಮಾನಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿಯೇ ಪ್ರಭು ಶ್ರೀರಾಮಚಂದ್ರನಿಗೆ ನೆಲೆ ಸಿಕ್ಕಿದ್ದು. ಜನವರಿ 22 ರಂದು ಇಡೀ ವಿಶ್ವದ ಗಮನಸೆಳೆಯುವಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದೆ ನಿಂತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಸಿಕೊಟ್ಟರು. ಅಂದಿನಿಂದ ಇಂದಿನಿನವರೆಗೂ ಅಯೋಧ್ಯೆಯ ಶ್ರೀರಾಮ ಚಂದ್ರನ ಪುಣ್ಯಭೂಮಿಗೆ ಲಕ್ಷಾಂತರ ಮಂದಿ ಭೇಟಿ ನೀಡಿದ್ದಾರೆ. ಸಾಕಷ್ಟು ಸೆಲೆಬ್ರಿಟಗಳು ಶ್ರೀರಾಮನ ಅಂದವನ್ನು ನೋಡಿ ಖುಷಿಪಟ್ಟಿದ್ದಾರೆ. ಕರ್ನಾಟಕದ ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್, ಪ್ರಭು ಶ್ರೀರಾಮಚಂದ್ರ ಐದು ವರ್ಷದ ಬಾಲಕನಾಗಿದ್ದಾಗಿನ ಮೂರ್ತಿಯನ್ನು ಕೆತ್ತುವ ಮೂಲಕ ಜಗದ ಗಮನ ಸೆಳೆದಿದ್ದಾರೆ. ಶ್ರೀರಾಮ ಚಂದ್ರನ ಮೂರು ಮೂರ್ತಿಗಳ ಪೈಕಿ, ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ಗರ್ಭಗುಡಿಗೆ ಆಯ್ಕೆಯಾಗಿದೆ. ಕೃಷ್ಣಶಿಲೆಯಲ್ಲಿ ಮೂಡಿಬಂದಿರುವ ವಿಗ್ರಹಕ್ಕೆ ಟ್ರಸ್ಟ್ ಈಗಾಗಲೇ ಬಾಲಕರಾಮ ಎಂದು ಹೆಸರಿಟ್ಟಿದೆ. ಇನ್ನು ಬಾಲಕರಾಮನ ಅಂದವನ್ನು ವರ್ಣಿಸಲು ಪದಗಳೇ ಇಲ್ಲ ಎಂದು ನೋಡಿದವರೆಲ್ಲರೂ ಹೇಳುತ್ತಿದ್ದಾರೆ. ಮೂರ್ತಿ ಅಷ್ಟು ಸುಂದರವಾಗಿ ಕಾಣಲು ಸಾಧ್ಯವಾಗಿದ್ದು, ಕಣ್ಣುಗಳಿಂದ..
ಹೌದು ಬಾಲಕರಾಮನ ಕಣ್ಣುಗಳನ್ನು ನೋಡುತ್ತಿದ್ದರೆ ಅದು ವಿಗ್ರಹ ಎಂದು ಅನಿಸೋದೇ ಇಲ್ಲ. ಸ್ವತಃ ಅರುಣ್ ಯೋಗಿರಾಜ್ ಹೇಳಿದ ಹಾಗೆ, ಒಮ್ಮೆ ಪ್ರಾಣ ಪ್ರತಿಷ್ಠಾಪನೆಗಾಗಿ ಮೂರ್ತಿ ಗರ್ಭಗುಡಿಯಲ್ಲಿ ನಿಂತಿದ್ದೇ ತಡ, ಅದರಲ್ಲಿ ಒಂದು ಜೀವಕಳೆ ಬಂದಿದೆ. ನಾನು ಕೆತ್ತಿದ ಮೂರ್ತಿಯ ಮುಖಭಾವ ಈ ರೀತಿ ಇದ್ದಿರಲಿಲ್ಲ. ಆದರೆ, ಪ್ರಾಣ ಪ್ರತಿಷ್ಠಾಪನೆಯ ಬೆನ್ನಲ್ಲಿಯೇ ವಿಗ್ರಹದ ಕಳೆಯೇ ಬದಲಾಗಿ ಹೋಗಿದೆ ಎಂದಿದ್ದರು. ಹೌದು, ಬಾಲಕರಾಮನ ಕಣ್ಣಿಗೆ ಕಣ್ಣಿಟ್ಟು ನೋಡಿದರೆ, ಸ್ವತಃ ಭಗವಾನ್ ರಾಮನೇ ನಮ್ಮನ್ನು ನೋಡುತ್ತಿರುವಂಥ ಭಾಸವಾಗುತ್ತದೆ. ಅಷ್ಟು ನೈಜವಾಗಿ ಬಾಲಕರಾಮನ ಕಣ್ಣುಗಳು ಮೂಡಿಬಂದಿವೆ.
ಹೀಗಿದ್ದಾಗ ಅರುಣ್ ಯೋಗಿರಾಜ್ ಬಾಲಕರಾಮನ ಕಣ್ಣುಗಳನ್ನು ಕೆತ್ತಿದ ಬೆಳ್ಳಿಯ ಸುತ್ತಿಗೆಯನ್ನು ಜನರಿಗೆ ಪರಿಚಯಿಸಿದ್ದಾರೆ. 'ಚಿನ್ನದ ಉಳಿ ಹೊಂದಿರುವ ಬೆಳ್ಳಿಯ ಸುತ್ತಿಗೆಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ. ಇದರಿಂದಲಾ ನಾನು ಅಯೋಧ್ಯೆಯ ರಾಮ ಲಲ್ಲಾನ (ನೇತ್ರೋನ್ಮಿಲನ) ದೈವಿಕ ಕಣ್ಣುಗಳನ್ನು ಕೆತ್ತಿದ್ದೇನೆ' ಎಂದು ಅರುಣ್ ಯೋಗಿರಾಜ್ ಬರೆದುಕೊಂಡಿದ್ದಾರೆ.
ಇನ್ನು ಅರುಣ್ ಯೋಗಿರಾಜ್ ಹಂಚಿಕೊಂಡಿರುವ ಈ ಚಿತ್ರಕ್ಕೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. 'ಒಂದು ಸುತ್ತಿಗೆ ಭಗವಾನ್ ರಾಮನಿಗೆ ನ್ಯಾಯವನ್ನು ನೀಡಿದ್ದರೆ, ಇನ್ನೊಂದು ಸುತ್ತಿಗೆ ಭಗವಾನ್ ರಾಮನಿಗೆ ಹಾಗೂ ಸನಾತನ ಧರ್ಮಕ್ಕೆ ಗುರುತು ನೀಡಿದೆ' ಎಂದು ಒಬ್ಬರು ಬರೆದಿದ್ದಾರೆ.
ನಾನು ಸಾಮಾನ್ಯವಾಗಿ ಹಳೆಬೀಡು ಹಾಗೂ ಬೇಲೂರಿಗೆ ಭೇಟಿ ನೀಡುತ್ತಿರುತ್ತೇನೆ. ಅಲ್ಲಿನ ಕಲ್ಲಿನ ಕೆತ್ತನೆಗಳನ್ನು ನೋಡುವಾಗ ಕೆತ್ತಿದ ವ್ಯಕ್ತಿಯಲ್ಲಿ ಏನಾದರೂ ವಿಶೇಷತೆ ಇದ್ದಿರಲೇಬೇಕು ಎಂದುಕೊಳ್ಳುತ್ತಿದೆ. ಆದರೆ, ಸಾಮಾನ್ಯ ಜನರೂ ಕೂಡ ಪ್ರೀತಿ, ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇಂಥ ಕೆತ್ತನೆ ಮಾಡಲು ಸಾಧ್ಯ ಎನ್ನುವುದನ್ನು ನೀವು ತೋರಿಸಿಕೊಟ್ಟಿದ್ದೀರಿ. ಮುಂದಿನ ಹಲವು ಶಿಲ್ಪಿಗಳಿಗೆ ನೀವು ಸ್ಫೂರ್ತಿಯಾಗಿದ್ದೀರಿ ಎಂದು ಬರೆದುಕೊಂಡಿದ್ದಾರೆ. 'ಬಾಲಕ ರಾಮನ ದಿವ್ಯ ಕಣ್ಣುಗಳನ್ನು ಕೆತ್ತಿದ ಈ ಉಪಕರಣಗಳನ್ನು ನೋಡಿದ ನಾನು ಧನ್ಯನಾಗಿದ್ದೇನೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅಯೋಧ್ಯ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ 12 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡ ಸರ್ಕಾರ!
'ಇದಕ್ಕಾಗಿಯೇ ನೀವು ಆಯ್ಕೆಯಾದವರು, ಅರುಣ್ ಜೀ. ನಿಮ್ಮ ಇತರ ಕೆಲವು ದೈವಿಕ ಸೃಷ್ಟಿಗಳನ್ನು ನಾನು ನೋಡಿದ್ದೇನೆ ಮತ್ತು ಅವೆಲ್ಲವೂ ಅಸಾಧಾರಣವಾಗಿವೆ. ನಮೋ ರಾಘವ' ಎಂದು ಕಾಮೆಂಟ್ ಮಾಡಿದ್ದಾರೆ. ಅತ್ಯಂತ ಸುಂದರ ರಾಮನ ಅಭಯ ನೇತ್ರಗಳನ್ನು ಲೋಕದ ಪಾಲಿಗೆ ದರ್ಶನವಾಗುವಂತೆ ಮಾಡಿದ ನಿಮಗೆ ಅನಂತ ಧನ್ಯವಾದಗಳು', 'ಬಾಲ ರಾಮ ಲಲ್ಲಾ ವಿಗ್ರಹವನ್ನು ಪ್ರತಿಷ್ಟಾಪಿಸಲಾದ ನಂತರ ,ಒಮ್ಮೆ ಕುಳಿತು ಯೋಚಿಸಿದರೆ ನೀವು ವಿಗ್ರಹಕ್ಕೆ ರೂಪ ಕೊಡಲು ಮಾಡಿರುವ ಅದ್ಭುತ ಪ್ರಯತ್ನ ,....ಅಬ್ಬಾ, ಅಬ್ಬಾ,...ಪ್ರಪಂಚ ಮೆಚ್ಚಿದ ಕಲಾವಿದರಾದ ತಮಗೆ ಶತ.. ಕೋಟಿ ನಮಸ್ಕಾರಗಳು', 'ಚಿನ್ನದ ಉಳಿ ಬೆಳ್ಳಿ ಸುತ್ತಿಗೆ ಬಗ್ಗೆ ನಿಮ್ಮಿಂದಲೇ ತಿಳಿದಿತ್ತು, ಇಂದು ನೋಡುವ ಅವಕಾಶನೂ ಆಯಿತು. ಧನ್ಯವಾದಗಳು' ಎಂದು ಇನ್ನೊಬ್ಬರು ಬರೆದಿದ್ದಾರೆ.
ಮೂರ್ತಿ ಕೆತ್ತನೆ ವೇಳೆ ರಾಮಲಲ್ಲಾನ ನೋಡಲು ದಿನವೂ ಬರುತ್ತಿದ್ದ ಹನುಮ: ಶಿಲ್ಪಿ ಅರುಣ್ ಯೋಗಿರಾಜ್