ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ ಶ್ರೀರಾಮನ ಮೂರ್ತಿಯನ್ನು ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಇದರ ಮೊದಲ ಫೋಟೋ ವೈರಲ್‌ ಆಗಿದೆ. 

ನವದೆಹಲಿ (ಜ.19): ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾದ ರಾಮಲಲ್ಲಾ ಮೂರ್ತಿಯ ಚಿತ್ರ ಇದೇ ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ವಿಗ್ರಹದ ಕಣ್ಣಿಗೆ ನಿಯಮದಂತೆ ಅರಿಶಿನದ ಬಟ್ಟೆಯನ್ನು ಕಟ್ಟಲಾಗಿದೆ. ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಆದ ಬಳಿಕ ಮೂರ್ತಿಯ ಕಣ್ಣಿಗೆ ಕಟ್ಟಲಾಗಿರುವ ಬಟ್ಟೆಯನ್ನು ತೆಗೆಯಲಾಗುತ್ತದೆ. ಜನವರಿ 23 ರಿಂದ ಸಾಮಾನ್ಯ ಜನರು ಸಹ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗಲಿದೆ. ಹೊಸದಾಗಿ ನಿರ್ಮಿಸಲಾದ ದೇವಾಲಯದ ಗರ್ಭಗುಡಿಯಲ್ಲಿ ಗುರುವಾರ ಶ್ರೀರಾಮಲಲ್ಲಾನ ವಿಗ್ರಹವನ್ನು ಸ್ಥಾಪನೆ ಮಾಡಲಾಗಿದೆ..ರಾಮಲಲ್ಲಾ ಮೂರ್ತಿಯನ್ನು ಪೀಠದ ಮೇಲೆ ಪ್ರತಿಷ್ಠಾಪಿಸಲು ಒಟ್ಟು ನಾಲ್ಕು ಗಂಟೆಗೂ ಹೆಚ್ಚು ಸಮಯ ಬೇಕಾಯಿತು. ಈ ರಾಮನ ವಿಗ್ರಹವನ್ನು ಮಂತ್ರಗಳ ಪಠಣ ಮತ್ತು ಪೂಜಾ ವಿಧಿಗಳೊಂದಿಗೆ ಪೀಠದ ಮೇಲೆ ಇರಿಸಲಾಯಿತು. ಈ ವೇಳೆ ಶಿಲ್ಪಿ ಯೋಗಿರಾಜ್ ಹಾಗೂ ಅನೇಕ ಸಂತರು ಉಪಸ್ಥಿತರಿದ್ದರು.

ಪಾದದಿಂದ ನೆತ್ತಿಯವರೆಗೆ 51 ಇಂಚಿನ ರಾಮಲಲ್ಲಾ ಪ್ರತಿಮೆಯನ್ನು ಮೈಸೂರಿನ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ್ದಾರೆ. ಬುಧವಾರ ರಾತ್ರಿ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಗಿತ್ತು. ಗುರುವಾರ ಮಧ್ಯಾಹ್ನ ಗರ್ಭಗುಡಿಯಲ್ಲಿ ಇರಿಸಲಾಗಿದೆ ಎಂದು ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಸಂಯೋಜಿತ ಅರ್ಚಕ ಅರುಣ್ ದೀಕ್ಷಿತ್ ತಿಳಿಸಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಅವರು ಮಂತ್ರಗಳ ಪಠಣದ ನಡುವೆ ವಿಗ್ರಹವನ್ನು ಸ್ಥಾಪಿಸಲು 'ಪ್ರಧಾನ ಸಂಕಲ್ಪ' ಮಾಡಿದರು. ಪ್ರಧಾನ ಸಂಕಲ್ಪದ ಅರ್ಥವೇನೆಂದರೆ, ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಎಲ್ಲರ ಕಲ್ಯಾಣಕ್ಕಾಗಿ, ರಾಷ್ಟ್ರದ ಕಲ್ಯಾಣಕ್ಕಾಗಿ, ದೇವಸ್ಥಾನದ ಕೆಲಸಕ್ಕೆ ಕೊಡುಗೆ ನೀಡಿದವರ ಕಲ್ಯಾಣಕ್ಕಾಗಿ, ಮಾನವೀಯತೆಯ ಕಲ್ಯಾಣಕ್ಕಾಗಿ ಮಾಡಲಾಗುತ್ತಿದೆ ಎನ್ನುವುದಾಗಿದೆ.

ಅರುಣ್ ದೀಕ್ಷಿತ್ ಅವರು, ಗುರುವಾರ ಇತರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬ್ರಾಹ್ಮಣರಿಗೆ ವಿಧಿವಿಧಾನದ ಬಟ್ಟೆಗಳನ್ನು ನೀಡಿ ಎಲ್ಲರಿಗೂ ಅವರವರ ಕೆಲಸಗಳನ್ನು ನಿಯೋಜನೆ ಮಾಡಲಾಗಿದೆ. ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಮಾತನಾಡಿ, ಜನವರಿ 22 ರಂದು ‘ಪ್ರಾಣ ಪ್ರತಿಷ್ಠಾ’ದವರೆಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಅಂದು ಶ್ರಿರಾಮ ಗರ್ಭಗುಡಿಯಲ್ಲಿ ಅಧಿಕೃತವಾಗಿ ಸ್ಥಾನ ಪಡೆಯಲಿದ್ದಾರೆ. ಪ್ರಾಣಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಬಗ್ಗೆ ಯುವಕರಲ್ಲಿ ಅಪಾರ ಉತ್ಸಾಹವಿದೆ ಎಂದಿದ್ದಾರೆ. ಜನವರಿ 22 ರಂದು ಮಧ್ಯಾಹ್ನ 12:20 ಕ್ಕೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ದೇವಾಲಯದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಈಗಾಗಲೇ ತಿಳಿಸಿದ್ದಾರೆ. ಶ್ರೀರಾಮ ಜನಿಸಿದ ಸ್ಥಳದಲ್ಲಿಯೇ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. 

11 ದಿನ ಕೇವಲ ಎಳನೀರು ಸೇವಿಸಿ ಮೋದಿ ಉಪವಾಸ: ನೆಲದ ಮೇಲೆ ನಿದ್ದೆ ಸೇರಿ ಯಮ ನಿಯಮ ವ್ರತ ಪಾಲನೆ

ಮೂಲಗಳ ಪ್ರಕಾರ ಇದೇ ಮಾದರಿಯ ವಿಗ್ರಹ 1949ರ ಅಕ್ಟೋಬರ್‌ನಲ್ಲಿ ವಿವಾದಿತ ದೇವಸ್ಥಾನದ ಒಳಗಿತ್ತು. ಆದರೆ, ಮುಸ್ಲಿಂ ಕಡೆಯವರು ಹನುಮಾನ್‌ ಗುಡಿಯ ಮಹಾಂತ ಅಭಿರಾಮ್‌ ದಾಸ್‌, ರಾಮಲಲ್ಲಾನ ವಿಗ್ರಹವನ್ನು ಅಲ್ಲಿ ಇಟ್ಟಿದ್ದರು ಎಂದು ವಾದ ಮಾಡಿದ್ದರು.

ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ