ನವದೆಹಲಿ (ಅ.22): ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕಾರಣಕ್ಕೆ ಭಾರತದ ವಿರುದ್ಧ ಆಕ್ರೋಶಗೊಂಡಿರುವ ಪಾಕಿಸ್ತಾನ ಇದೀಗ ಉಭಯ ದೇಶಗಳ ನಡುವಣ ಅಂಚೆ ವ್ಯವಹಾರಕ್ಕೇ ನಿಷೇಧ ಹೇರಿದೆ.

ಕಳೆದ ಒಂದೂವರೆ ತಿಂಗಳಿನಿಂದ ಭಾರತದಿಂದ ಹೋಗುತ್ತಿರುವ ಅಂಚೆಯನ್ನು ಆ ದೇಶ ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಎರಡೂ ದೇಶಗಳ ನಾಗರಿಕರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಇದು ಕೇಂದ್ರ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ.

ವಿಶೇಷ ಎಂದರೆ, ಭಾರತ- ಪಾಕಿಸ್ತಾನ ವಿಭಜನೆ, ಆನಂತರ ನಡೆದ ಮೂರು ಸಮರ, ಆಗಾಗ್ಗೆ ಸಂಘರ್ಷ ಉಂಟಾಗಿ ಉಭಯ ದೇಶಗಳ ನಡುವೆ ಹಲವು ವ್ಯವಹಾರಗಳು ಬಂದ್‌ ಆದರೂ ಅಂಚೆ ಸೇವೆಗೆ ಮಾತ್ರ ಎಂದಿಗೂ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಅದು ಸ್ಥಗಿತಗೊಂಡಿದೆ.

ಭಾರತದಿಂದ ರವಾನಿಸಲಾದ ಅಂಚೆ ಸರಕನ್ನು ಪಾಕಿಸ್ತಾನ ಕಟ್ಟಕಡೆಯದಾಗಿ ಸ್ವೀಕರಿಸಿದ್ದು ಆ.27ರಂದು. ಇದೀಗ ಆ ದೇಶ ಸ್ವೀಕರಿಸುತ್ತಿಲ್ಲವಾದ ಕಾರಣ, ಪಾಕಿಸ್ತಾನ ವಿಳಾಸ ಹೊಂದಿರುವ ಅಂಚೆಗಳ ಮೇಲೆ ಅಧಿಕಾರಿಗಳು ‘ತಡೆ’ ಎಂದು ಬರೆಯುತ್ತಿದ್ದಾರೆ.

ಇದೊಂದು ಏಕಪಕ್ಷೀಯ ನಿರ್ಧಾರವಾಗಿದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನ ಈ ರೀತಿಯ ಕ್ರಮ ಕೈಗೊಂಡಿದೆ. ಯಾವಾಗ ನಿಷೇಧ ಹಿಂಪಡೆಯುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಅಂಚೆ ಸೇವೆಗಳ ನಿರ್ದೇಶಕ ಆರ್‌.ವಿ. ಚೌಧರಿ ತಿಳಿಸಿದ್ದಾರೆ.

ಪಾಕಿಸ್ತಾನದ ನಿರ್ಧಾರವನ್ನು ಕೇಂದ್ರ ಸರ್ಕಾರ ಟೀಕಿಸಿದೆ. ಭಾರತಕ್ಕೆ ಯಾವುದೇ ಸೂಚನೆ ನೀಡದೇ, ಅಂತಾರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾಗಿ ಪಾಕಿಸ್ತಾನ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನ ಎಂದರೆ ಪಾಕಿಸ್ತಾನವೇ ಎಂದು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ಚಾಟಿ ಬೀಸಿದ್ದಾರೆ.

ಅಂಚೆ ಏಕೆ ಬೇಕು?:

ಪಾಕಿಸ್ತಾನಕ್ಕೆ ಹೆಚ್ಚಾಗಿ ಅಂಚೆ ಹೋಗುವುದು ಪಂಜಾಬ್‌ ಹಾಗೂ ಜಮ್ಮು-ಕಾಶ್ಮೀರದಿಂದ. ಈಗಿನ ಇ-ಮೇಲ್‌ ಯುಗದಲ್ಲಿ ಅಂಚೆಗೆ ಯಾರು ಮಹತ್ವ ಕೊಡುತ್ತಾರೆ ಎಂಬ ಭಾವನೆ ಇದೆಯಾದರೂ, ಕೆಲವೊಂದು ಅಧಿಕೃತ ಪತ್ರ ವ್ಯವಹಾರಕ್ಕೆ ಅಂಚೆ ಬೇಕೇಬೇಕು. ಒಂದು ವೇಳೆ, ಪಾಕಿಸ್ತಾನದಲ್ಲಿ ಭಾರತೀಯ ಮೀನುಗಾರರು ಬಂಧಿತರಾದರೆ, ಅವರ ಪರ ವಾದ ಮಂಡಿಸುವ ವಕೀಲರಿಗೆ ಪವರ್‌ ಆಫ್‌ ಅಟಾರ್ನಿಯನ್ನು ಬಂಧಿತ ಮೀನುಗಾರನ ಬಂಧುಗಳು ಇ-ಮೇಲ್‌ ಕಳುಹಿಸಲು ಆಗದು. ಆಗ ಅಂಚೆ ಮೂಲಕವೇ ರವಾನಿಸಬೇಕಾಗುತ್ತದೆ. ಹೀಗೆ ಹಲವು ಅಧಿಕೃತ ಪತ್ರ ವ್ಯವಹಾರಗಳಿಗೆ ಅಂಚೆ ಅನಿವಾರ್ಯವಾಗಿದೆ.