ನವದೆಹಲಿ[ಜ.04]: ಆರೋಗ್ಯ ವಿಮೆ ಪಾಲಿಸಿ ಖರೀದಿ ವೇಳೆ ಯಾವ ಕಂಪನಿಯ, ಯಾವ ಪಾಲಿಸಿ ತೆಗೆದುಕೊಳ್ಳಬೇಕು ಎಂಬ ಗೊಂದಲಕ್ಕೆ ಬೀಳುವ ಜನರ ನೆರವಿಗೆ ಇದೀಗ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಧಾವಿಸಿದೆ. ಸಾಮಾನ್ಯ ಹಾಗೂ ಆರೋಗ್ಯ ವಿಮಾ ಕಂಪನಿಗಳು ಗರಿಷ್ಠ 5 ಲಕ್ಷ ರು. ವಿಮೆ ಒದಗಿಸುವ ಹಾಗೂ ಮೂಲಭೂತ ಆರೋಗ್ಯ ಸೇವೆಗಳನ್ನು ಖಾತ್ರಿಪಡಿಸುವ ಒಂದೇ ರೀತಿಯ ವಿಮಾ ಯೋಜನೆಯೊಂದನ್ನು ರೂಪಿಸಬೇಕು ಎಂದು ಕಡ್ಡಾಯ ಸೂಚನೆ ನೀಡಿದೆ.

2020ರ ಏ.1ರಿಂದ ಜಾರಿಗೆ ಬರಲಿರುವ ಈ ಪಾಲಿಸಿಗೆ ‘ಆರೋಗ್ಯ ಸಂಜೀವಿನಿ ಪಾಲಿಸಿ’ ಎಂಬ ಹೆಸರನ್ನು ಇಡಲಾಗಿದೆ. ಈ ಹೆಸರಿನ ಮುಂದೆ ಕಂಪನಿಗಳು ತಮ್ಮ ಹೆಸರನ್ನು ನಮೂದಿಸಿಕೊಳ್ಳಬೇಕಾಗುತ್ತದೆ.

ವಿಮಾ ಪರಿಹಾರ ಹಣ ಕಡಿತಕ್ಕೆ ಖಂಡನೆ

ಆರೋಗ್ಯ ವಿಮಾ ಕಂಪನಿಗಳು ಸಾಕಷ್ಟು ರೀತಿಯ ಪಾಲಿಸಿಗಳನ್ನು ಒದಗಿಸುತ್ತಿವೆ. ಪ್ರತಿಯೊಂದು ಪಾಲಿಸಿಯೂ ವಿಭಿನ್ನ ಅಂಶಗಳನ್ನು ಹೊಂದಿವೆ. ಇದರಿಂದಾಗಿ ಸಾರ್ವಜನಿಕರಿಗೆ ಯಾವ ಪಾಲಿಸಿ ಆರಿಸಿಕೊಳ್ಳಬೇಕು ಎಂಬ ಗೊಂದಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಮೂಲಭೂತ (ಬೇಸಿಕ್‌) ಆರೋಗ್ಯ ಅಗತ್ಯಗಳನ್ನು ಈಡೇರಿಸುವ ಒಂದೇ ರೀತಿಯ ಆರೋಗ್ಯ ವಿಮಾ ಯೋಜನೆಯೊಂದನ್ನು ಸಾರ್ವಜನಿಕರಿಗೆ ಒದಗಿಸುವಂತೆ ಎಲ್ಲ ಜನರಲ್‌ ಹಾಗೂ ಆರೋಗ್ಯ ವಿಮಾ ಕಂಪನಿಗಳಿಗೆ ಐಆರ್‌ಡಿಎ ಸೂಚನೆ ನೀಡಿದೆ.

ಏನೇನಿರುತ್ತೆ?:

ಅನಸ್ತೇಶಿಯಾ, ವೈದ್ಯರ ಸಲಹೆ, ಔಷಧ ವೆಚ್ಚ, ಆಮ್ಲಜನಕ, ಸರ್ಜನ್‌ ಶುಲ್ಕ, ಕೋಣೆ ಬಾಡಿಗೆ ಸೇರಿದಂತೆ ಆಸ್ಪತ್ರೆ ವಾಸ ವೆಚ್ಚವನ್ನು ಈ ಉದ್ದೇಶಿತ ಪಾಲಿಸಿ ಒಳಗೊಂಡಿರಬೇಕು. ಆಸ್ಪತ್ರೆಯ ಕೋಣೆಯ ಬಾಡಿಗೆ ದಿನಕ್ಕೆ 5000 ರು. ಮೀರಬಾರದು. ಹಾಗೆಯೇ ಐಸಿಯು ಹಾಗೂ ಹೃದ್ರೋಗ ತೀವ್ರ ನಿಗಾ ಘಟಕ (ಐಸಿಸಿಯು)ದ ವೆಚ್ಚ ದಿನಕ್ಕೆ 10 ಸಾವಿರ ರು. ಮೀರಬಾರದು. ಈ ಬೇಸಿಕ್‌ ವಿಮೆಗೆ ಇತರೆ ಅಂಶಗಳನ್ನು ಸೇರಿಸಬಾರದು. ಈ ವಿಮೆ ಗರಿಷ್ಠ 1 ವರ್ಷ ಕಾಲಾವಧಿ ಹೊಂದಿರಬೇಕು. ದಂತ ಹಾಗೂ ಪ್ಲಾಸ್ಟಿಕ್‌ ಸರ್ಜರಿ, ಡೇ ಕೇರ್‌ ಚಿಕಿತ್ಸೆ, ಆ್ಯಂಬುಲೆನ್ಸ್‌ ಸೇವೆ, ಆಯುಷ್‌ ಚಿಕಿತ್ಸೆಗೂ ಇದು ಅನ್ವಯವಾಗಬೇಕು. ಒಂದೇ ರೀತಿಯ ಪಾಲಿಸಿ ದಾಖಲೆ ಇರಬೇಕು. ತನ್ಮೂಲಕ ಪೋರ್ಟಬಲಿಟಿಗೆ ಅವಕಾಶ ನೀಡುವಂತಿರಬೇಕು ಎಂದು ಸೂಚಿಸಲಾಗಿದೆ.

ಕೊಪ್ಪಳ: ಶಾಲಾ ಆವರಣದಲ್ಲಿ ಆಣೆವಾರಿ, ಸಾವಿರಕ್ಕೂ ಅಧಿಕ ರೈತರಿಗೆ ದೋಖಾ