100ಕ್ಕೂ ಹೆಚ್ಚು ರೈಲು ಸೇವೆ ರದ್ದಾಗಿದೆ, ಹಲವು ರೈಲು ಮಾರ್ಗ ಬದಲಿಸಲಾಗಿದೆ.ಇತ್ತ ಹಲವು ವಿಮಾನ ಸೇವೆಗಳು ಸ್ಥಗಿತಗೊಂಡಿದೆ. ಕೆಲ ವಿಮಾನಗಳನ್ನು ಮಾರ್ಗ ಮದ್ಯ ಡೈವರ್ಟ್ ಮಾಡಲಾಗಿದೆ. ಇದೀಗ ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ಪರಿಶೀಲಿಸಲು ಮನವಿ ಮಾಡಲಾಗಿದೆ.
ನವದೆಹಲಿ (ಅ.28) ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟು ನಿಂತಿರುವ ಹಲವರು ಪರದಾಡುವ ಸ್ಥಿತಿ ಎದುರಾಗಿದೆ. ದೀಪಾವಳಿ ಹಬ್ಬದ ದಿನಗಳಲ್ಲಿ ಸಂಚಾರ ದಟ್ಟಣೆ ಕಾರಣ ಹಲವರು ಈಗಿನಿಂದಲೇ ಪ್ರಯಾಣ ಆರಂಭಿಸಿದ್ದಾರೆ. ಆದರೆ 100ಕ್ಕೂ ಹೆಚ್ಚು ರೈಲು ಸಂಚಾರ ಸ್ಥಗಿತಗೊಂಡಿದೆ. ಹಲವು ವಿಮಾನ ಸೇವೆಗಳು ವ್ಯತ್ಯಯವಾಗಿದೆ. ಅರ್ನಬ್ ಚಂಡಮಾರುತ ಪರಿಣಾಮ ಸಾರಿಗೆ ಸಂಚಾರದಲ್ಲಿ ವ್ಯತ್ಯಯವಾಗಿದೆ. ಅರ್ನಬ್ ಚಂಡ ಮಾರುತ ಆಂಧ್ರ ಪ್ರದೇಶ ಹಾಗೂ ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಿದೆ. ಪರಿಣಾಮ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಸುರಕ್ಷತಾ ದೃಷ್ಟಿಯಿಂದ ರೈಲು ಹಾಗೂ ಕೆಲ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
NTES ಪರಿಶೀಲಿಸಿ ಪ್ರಯಾಣಕ್ಕೆ ಮನವಿ
125 ರಿಂದ 135 ಕಿಲೋಮೀಟರ್ ವೇಗದಲ್ಲಿ ಅರ್ನಬ್ ಚಂಡಮಾರುತ ಕರಾವಳಿ ತೀರಕ್ಕೆ ಸಾಗಿತ್ತು. ತೀರಕ್ಕೆ ಅಪ್ಪಳಿಸುವ ವೇಳೆಗ 150 ಕಿಲೋಮೀಟರ್ ವೇಗ ಪಡೆದುಕೊಂಡಿತ್ತು. ಆಂಧ್ರ ಪ್ರದೇಶ , ಒಡಿಶಾ ಮೂಲಕ ಹಾದು ಹೋಗುವ, ಈ ಎರಡು ರಾಜ್ಯಗಳ ಸಂಪರ್ಕಿಸುವ ಹಲವು ರೈಲು ಸಂಚಾರ ಅಡ್ಡಿಯಾಗಿದೆ. 18107 ರೂರ್ಕೆಲಾ ಜಗ್ದಲಪುರ ಎಕ್ಸ್ಪ್ರೆಸ್, 12704 ಸಿಕಂದರಾಬಾದ್ ಹೌರಾ ಎಕ್ಸ್ಪ್ಸೆಸ್, 18005 ಹೌರ ಜಗ್ದಲಪುರ ಎಕ್ಸ್ಪ್ರೆಸ್ ಸೇರಿದಂತೆ ಹಲವು ರೈಲುಗಳು ರದ್ದಾಗಿದೆ. ಹೀಗಾಗಿ ರೈಲ್ವೇ ಇಲಾಖೆ ಮಹತ್ವದ ಮನವಿ ಮಾಡಿದೆ. ಪ್ರಯಾಣಕ್ಕೂ ಮುನ್ನ NTES (ರಾಷ್ಟ್ರೀಯ ರೈಲು ಮಾಹಿತಿ ಕೇಂದ್ರ)ದಲ್ಲಿ ಪರಿಶೀಲಿಸಲು ಮನವಿ ಮಾಡಿದ್ದಾರೆ.ರೈಲು ರದ್ದಾಗಿದೆಯೋ, ಸೇವೆ ಇದೆಯೋ ಅನ್ನೋ ಮಾಹಿತಿ ಪಡೆದು ಪ್ರಯಾಣ ಆರಂಭಿಸಲು ಸೂಚಿಸಲಾಗಿದೆ. ಹಲವು ರೈಲು ರದ್ದಾಗಿದೆ. ಆದರೆ ಬಹುತೇಕರು NTES ಚೆಕ್ ಮಾಡದೆ ಆಗಮಿಸಿ ಇದೀಗ ರೈಲು ನಿಲ್ದಾಣಗಳಲ್ಲೇ ಸಿಲುಕುವಂತಾಗಿದೆ. ರೈಲು ರದ್ದಾಗಿರುವ ಕಾರಣ ಹಲವು ಪ್ರಯಾಣಿಕರು ಪರದಾಡಿದ್ದಾರೆ.
ವಿಮಾನ ಸೇವೆಯಲ್ಲೂ ವ್ಯತ್ಯಯ
ರೈಲು ಮಾತ್ರವಲ್ಲ ಹವಾಮಾನ ವೈಪರಿತ್ಯದಿಂದ ವಿಮಾನ ಹಾರಾಟದಲ್ಲೂ ವ್ಯತ್ಯಯವಾಗಿದೆ. ಆಂಧ್ರ ಪ್ರದೇಶ, ಒಡಿಶಾ ಸಂಪರ್ಕಿಸುವ ಹಲವು ವಿಮಾನ ಸೇವೆ ರದ್ದಾಗಿದೆ. ಕೆಲ ವಿಮಾನಗಳ ಮಾರ್ಗ ಬದಲಿಸಲಾಗಿದೆ. ಚಂಡಮಾರುತ ಪರಿಣಾಮ ಲ್ಯಾಂಡಿಂಗ್ ಮಾಡುವುದು ಅಪಾಯಕಾರಿಯಾಗಿದೆ. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಹಲವು ವಿಮಾನ ರದ್ದು ಮಾಡಲಾಗಿದೆ ಎಂದು ನಾಗರೀಕ ವಿಮಾಯಾನ ಸಚಿವಾಲಯ ಹೇಳಿದೆ. ಈ ಕುರಿತು ಮಹತ್ವದ ಸಭೆ ನಡೆಸಿದೆ.
ವಿಶಾಖಪಟ್ಟಣಂ, ಭುವನೇಶ್ವರ್ ವಿಮಾನ ನಿಲ್ದಾಣಗಳು ಭಾಗಶಃ ಬಂದ್ ಮಾಡಲಾಗಿದೆ. ಇದೇ ವೇಳೆ ಹೈದರಾಬಾದ್, ವಾರಣಾಸಿ, ಪ್ರಯಾಗರಾಜ್, ಗೋರ್ಖಪುರ ಸೇರಿದಂತೆ ಹಲವೆಡೆಗಿನ ವಿಮಾನ ಹಾರಾಟ ವಿಳಂಬವಾಗುವ ಸಾಧ್ಯತೆ ಇದೆ. ವಿಮಾನ ವಿಳಂಬ, ರದ್ದಾಗಿರುವ ಕುರಿತು ಪ್ರಯಾಣಿಕರಿಗೆ ಸೂಕ್ತ ಮಾಹಿತಿ ನೀಡಬೇಕು. ವಿಮಾನ ಹಾರಾಟ ರದ್ದಾಗಿದ್ದರೆ, ಟಿಕೆಟ್ ಮೊತ್ತ ಹಿಂದಿರುಗಿಸುವ ಪ್ರಕ್ರಿಯೆ ನಡೆಸಬೇಕು ಎಂದು ವಿಮಾನಯಾನ ಸಚಿವಾಲಯ ಸೂಚನೆ ನೀಡಿದೆ.
ಅರ್ನಬ್ ಚಂಡ ಮಾರುತಿಂದ ಆಂಧ್ರ ಪ್ರದೇಶ ಹಾಗೂ ಒಡಿಶಾದ ಹಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಹಲವು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಎನ್ಡಿಆರ್ಎಫ್ ಹಾಗೂ ರಾಜ್ಯ ರಕ್ಷಣಾ ಪಡೆಗಳು ಕಾರ್ಯನಿರ್ವಹಿಸುತ್ತಿದೆ.






